ಉಳ್ಳಾಲ ಬಟಪ್ಪಾಡಿಯಲ್ಲಿ ಮುಳುಗಿದ ಹಡಗು; ಮುನ್ನೆಚ್ಚರಿಕಾ ಕ್ರಮವಾಗಿ ಅಳಿವೆ ಬಾಗಿಲು ಸಮೀಪ ಆಯಿಲ್ ಬೂಮ್ ಅಳವಡಿಕೆ

Update: 2022-06-24 16:06 GMT

ಮಂಗಳೂರು: ಉಳ್ಳಾಲದ ಬಟಪ್ಪಾಡಿ ಅರಬ್ಬಿ ಸಮುದ್ರದಲ್ಲಿ ಇತ್ತೀಚೆಗೆ ಮುಳುಗಿರುವ ಪ್ರಿನ್ಸೆಸ್ ಮಿರಾಲ್ ಸರಕು ಹಡಗಿನಿಂದ ತೈಲ ಸೋರಿಕೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಅಳಿವೆ ಬಾಗಿಲಿನ ಬಳಿ ಆಯಿಲ್ ಬೂಮ್‌ಗಳನ್ನು ಹಾಕಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾಹಿತಿ ನೀಡಿದ್ದಾರೆ.

ಎಂಆರ್‌ಪಿಎಲ್ ಹಾಗೂ ಕೋಸ್ಟ್‌ಗಾರ್ಡ್‌ಗೆ ತೈಲ ಸೋರಿಕೆ ಹಾಗೂ ಜಲಮಾಲಿನ್ಯ ನಿಯಂತ್ರಣದ ಜವಾಬ್ದಾರಿ ಯನ್ನು ವಹಿಸಲಾಗಿದ್ದು, ಸೂಕ್ತ ರಕ್ಷಣಾ ಸಾಮಗ್ರಿ ಒದಗಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಈ ಮಧ್ಯೆ ಎಂಆರ್‌ಪಿಎಲ್ ಅರಬ್ಬಿ ಸಮುದ್ರದಲ್ಲಿರುವ ಸಿಂಗಲ್ ಪಾಯಿಂಟ್ ಮೂರ್ ತೇಲುಜೆಟ್ಟಿಯ ಉಸ್ತುವಾರಿ ನೋಡಿಕೊಳ್ಳುವ ಟಗ್ ನೌಕೆಯನ್ನೂ ಒದಗಿಸಿದೆ. ಕೋಸ್ಟ್‌ಗಾರ್ಡ್‌ನವರು ಎರಡು ನೌಕೆಗಳನ್ನು ಕೂಡಾ ತೈಲಸೋರಿಕೆ ಮೇಲೆ ನಿಗಾ ಇರಿಸುವುದಕ್ಕೆ ನಿಯೋಜನೆ ಮಾಡಿದೆ.

ಮುಳುಗಿದ ಹಡಗಿನಲ್ಲಿ ೨೨೦ ಮೆಟ್ರಿಕ್ ಟನ್‌ನಷ್ಟು ತೈಲ ಹಾಗೂ ಫರ್ನೆಸ್ ತೈಲವಿದ್ದು ಅದು ಸೋರಿಕೆಯಾಗಿ ಅಳಿವೆ ಬಾಗಿಲಿನಿಂದ ಒಳಕ್ಕೆ ನೇತ್ರಾವತಿ ನದಿ ಕಡೆಗೆ ಬಾರದಂತೆ ಆಯಿಲ್ ಬೂಮ್‌ಗಳನ್ನು ಹಾಕುವ ಕೆಲಸ ಕೈಗೊಳ್ಳಲಾಗಿದೆ. ಅದಲ್ಲದೆ ಮುಳುಗಿರುವ ಹಡಗಿನ ಸುತ್ತಳತೆ ಸುಮಾರು ೧೦೦ ಮೀಟರ್ ಇದ್ದು, ಅದರ ಸುತ್ತಲೂ ಬೂಮ್‌ಗಳನ್ನು ಹಾಕಲಾಗಿದೆ.

ಸಮುದ್ರವು ಪ್ರಕ್ಷುಬ್ದವಾಗಿರುವುದರಿಂದ ನಿರ್ವಹಣೆ ಕೋಸ್ಟ್‌ಗಾರ್ಡ್‌ಗೆ ಸವಾಲಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ. ಹಡಗಿನಲ್ಲಿರುವ ಫರ್ನೆಸ್ ಆಯಿಲ್ ಸಮುದ್ರದ ಅಬ್ಬರದಲ್ಲಿ ಸೋರಿಕೆಯಾದರೆ ನಿರ್ವಹಣೆ ಕಷ್ಟವಾಗುವ ಭೀತಿಯೂ ಎದುರಾಗಿದೆ.

ಹಡಗಿನವರು ಈವರಗೆ ಅಧಿಕೃತ ಏಜೆನ್ಸಿಯವನ್ನು ನಿಯೋಜಿಸಿಲ್ಲ. ಹಡಗು ತೀರಾ ಹಳೆಯದಾಗಿದ್ದು ಅದರ ದಾಖಲೆಗಳು, ವಿಮೆ ಇತ್ಯಾದಿ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.

ಮುಳುಗಡೆಯಾದ ನೌಕೆಯಿಂದ ರಕ್ಷಿಸಲ್ಪಟ್ಟಿರುವ ೧೫ ಮಂದಿ ಸಿರಿಯನ್ ಪ್ರಜೆಗಳು ನವಮಂಗಳೂರು ಬಂದರು ಪ್ರಾಧಿಕಾರದವರ ಆಶ್ರಯ ಪಡೆದಿದ್ದಾರೆ. ಬೆಂಗಳೂರಿನಲ್ಲಿರುವ ವಿದೇಶಿ ಪ್ರಜೆಗಳ ತಾತ್ಕಾಲಿಕ ಆಶ್ರಿತ ಕೇಂದ್ರ ಸದ್ಯ ಭರ್ತಿಯಾಗಿರುವುದರಿಂದ ಪರ್ಯಾಯ ವ್ಯವಸ್ಥೆ ಬಗ್ಗೆ ಯೋಜಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಳುಗಿರುವ ಈ ಹಡಗನ್ನು ಮೇಲೆತ್ತುವ ಸಾಧ್ಯತೆ ಬಗ್ಗೆ ಪರಿಶೀಲಿಸಲು ಮುಂಬೈ ಕಂಪನಿಯೊಂದರ ತಂತ್ರಜ್ಞರು ಶುಕ್ರವಾರ ಮಂಗಳೂರಿಗೆ ಆಗಮಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಳುಗಡೆಯಲ್ಲಿರುವ ನೌಕೆಯ ರಂಧ್ರವನ್ನು ಮುಚ್ಚುವ ಕುರಿತಂತೆ ತಜ್ಞರ ತಂಡ ಆಗಮಿಸಿ ವೀಕ್ಷಿಸಿದೆ. ಆದರೆ ಈಗ ಸಮುದ್ರ ಪ್ರಕ್ಷುಬ್ಧ ಇರುವುದರಿಂದ ಹಡಗಿನ ಬಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ತಂತ್ರಜ್ಞರ ತಂಡ ಮಂಗಳೂರಿನಲ್ಲೇ ಬೀಡು ಬಿಟ್ಟಿದ್ದು. ಹಡಗಿನ ಸಮೀಪ ತೆರಳಲು ಪ್ರಯತ್ನ ಮುಂದುವರಿಸಲಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News