ಜೂ.27ರಂದು ಅಗ್ನಿಪಥ್ ಯೋಜನೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ: ರಾಮಲಿಂಗಾರೆಡ್ಡಿ

Update: 2022-06-24 18:15 GMT

ಬೆಂಗಳೂರು, ಜೂ.24: ಭಾರತೀಯ ಯೋಧರನ್ನು ಗುತ್ತಿಗೆ ಕಾರ್ಮಿಕರನ್ನಾಗಿ ಮಾಡಲು ಹೊರಟಿರುವ ಕೇಂದ್ರ ಸರಕಾರದ ಅಗ್ನಿಪಥ್ ಯೋಜನೆ ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಇದೇ ತಿಂಗಳು 27ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೂ ರಾಜ್ಯಾದ್ಯಂತ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ಶಾಸಕರು, ಪರಾಜಿತ ಅಭ್ಯರ್ಥಿಗಳು, ಸಂಸದರು, ಇತರೆ ನಾಯಕರ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ತಿಳಿಸಿದರು.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ ಬಣ್ಣ ಬಣ್ಣದ ಮಾತುಗಳ ಮೂಲಕ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದಿದ್ದರು. ಕಳೆದ 8 ವರ್ಷಗಳಲ್ಲಿ 16 ಕೋಟಿ ಉದ್ಯೋಗ ನೀಡಬೇಕಿತ್ತು. ಆದರೆ ನೀಡಲಿಲ್ಲ ಎಂದರು.

ಕೇಂದ್ರ ಸರಕಾರದ ವ್ಯಾಪ್ತಿಯಲ್ಲೇ 60 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡುತ್ತಿಲ್ಲ. ಈ ವಿಚಾರವಾಗಿ ವ್ಯಾಪಕ ಟೀಕೆ ವ್ಯಕ್ತವಾಗಿರುವ ಹಿನ್ನೆಲೆ ಈಗ 10 ಲಕ್ಷ ಉದ್ಯೋಗ ಭರ್ತಿ ಮಾಡುವುದಾಗಿ ಹೇಳಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಈ ದೇಶವನ್ನು ಹಂತ ಹಂತವಾಗಿ ನಾಶ ಮಾಡಲು ಹೊರಟಿದೆ. ನೋಟು ರದ್ದತಿ, ಅವೈಜ್ಞಾನಿಕ ಜಿಎಸ್‍ಟಿ, ತರಾತುರಿ ಲಾಕ್ ಡೌನ್ ಮೂಲಕ ದೇಶದ ಆರ್ಥಿಕತೆ ನಾಶವಾಗಿದೆ ಎಂದು ಅವರು ಹೇಳಿದರು.

ಕರಾಳ ಕೃಷಿ ಕಾಯ್ದೆ ತಂದು ರೈತರ ಭವಿಷ್ಯ ನಾಶ ಮಾಡಲು ಮುಂದಾದರು. ನಂತರ ವ್ಯಾಪಕ ವಿರೋಧದಿಂದ ಹಿಂಪಡೆದರು. ಇನ್ನು ದೇಶದಲ್ಲಿ ಕೋಮುದ್ವೇಷ ಹೆಚ್ಚಿ ದೇಶದ ಐಕ್ಯತೆ ನಾಶ ಮಾಡಿದರೆ, ಅಧಿಕಾರ, ಸಂವಿಧಾನ ಸಂಸ್ಥೆಗಳ ದುರ್ಬಳಕೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ನಾಶ ಮಾಡಿದ್ದಾರೆ. ಈಗ ಆಗ್ನಿಪಥ್ ಯೋಜನೆ ಹೆಸರಲ್ಲಿ ದೇಶದ ಭದ್ರತೆ ನಾಶ ಮಾಡಲು ಹೊರಟಿದ್ದಾರೆ ಎಂದು ರಾಮಲಿಂಗಾರೆಡ್ಡಿ ಕಿಡಿಗಾರಿದರು.
ಫುಟ್ಬಾಲ್ ಆದ ಯೋಧರು: ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ‘ಜೈ ಜವಾನ್ ಜೈ ಕಿಸಾನ್’ ಎಂದರು. ಆದರೆ, ಬಿಜೆಪಿಯವರು ರೈತರು ಹಾಗೂ ಯೋಧರನ್ನು ಫುಟ್ಬಾಲ್ ರೀತಿ ಆಟವಾಡುತ್ತಿದ್ದಾರೆ. ದೇಶ ಕಾಯುವ ಯೋಧರನ್ನು ಗುತ್ತಿಗೆ ಕಾರ್ಮಿಕರಂತೆ ಮಾಡುತ್ತಿದ್ದಾರೆ. ಆ ಮೂಲಕ ಭವಿಷ್ಯದ ಜತೆ ಆಟವಾಡುತ್ತಿರುವುದು ದುರಂತ. ಇವರು 23 ವರ್ಷದ ನಂತರ ಏನು ಮಾಡಬೇಕು? ಎಂದು ಅವರು ಪ್ರಶ್ನಿಸಿದರು.

ಈ ವಿಚಾರವಾಗಿ ವ್ಯಾಪಕ ಟೀಕೆ ವ್ಯಕ್ತವಾದ ನಂತರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರು ಅಗ್ನಿವೀರರಿಗೆ ಬಿಜೆಪಿ ಕಚೇರಿಯಲ್ಲಿ ಗಾರ್ಡ್ ಕೆಲಸ ಕೊಡುವುದಾಗಿ ಹೇಳಿದ್ದಾರೆ. ಇದು ದೇಶದ ಸೈನಿಕರ ಕುರಿತು ಬಿಜೆಪಿ ನಾಯಕರ ಮನಸ್ಥಿತಿಗೆ ಸಾಕ್ಷಿ. ಬಿಜೆಪಿಯ ನಾಯಕರ ಮಕ್ಕಳು ಅಗ್ನಿವೀರರಾಗಿ ಬಿಜೆಪಿ ಕಚೇರಿಯ ಗಾರ್ಡ್ ಆಗುತ್ತಾರಾ? ಬಿಜೆಪಿಯವರು ಕಂಡವರ ಮಕ್ಕಳನ್ನು ಬಾವಿಗೆ ಇಳಿಸಿ ಆಳ ನೋಡುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅರೆಕಾಲಿಕ ಸೈನಿಕರನ್ನು ನೇಮಿಸಿಕೊಂಡರೆ ದೇಶಕ್ಕೆ ಭದ್ರತೆ ಇರುತ್ತದೆಯೇ? ಮಕ್ಕಳು ಓದಿ ವಿದ್ಯಾವಂತರಾಗಿ ಭವಿಷ್ಯ ಕಟ್ಟಿಕೊಳ್ಳುವ ಸಮಯದಲ್ಲಿ ಸೇನೆಯಲ್ಲಿ ದೇಶ ಕಾಯಬೇಕು ನಂತರ ಅಲ್ಲಿಂದ ಹೊರ ಬಂದಮೇಲೆ ನಿರುದ್ಯೋಗಿಗಳಾಗಬೇಕಾ? ಎಂದು ಪ್ರಶ್ನಿಸಿದ ಅವರು, ರಕ್ಷಣಾ ಇಲಾಖೆ, ಕೇಂದ್ರೀಯ ಸಶಸ್ತ್ರ ಪಡೆ ಹಾಗೂ ಅಸ್ಸಾಂ ರೈಫಲ್ಸ್ ಪಡೆಗಳಲ್ಲಿ ಶೇ.10ರಷ್ಟು ಮೀಸಲಾತಿ. ಈ ಎರಡು ಪಡೆಗಳ ನೇಮಕಾತಿಯ ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ ಮಾಡುವುದಾಗಿ ಸರಕಾರ ಹೇಳಿದೆ ಎಂದರು.

ಶ್ವೇತಪತ್ರ ಹೊರಡಿಸಲಿ: ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಉದ್ಯೋಗ ಅವಕಾಶ, ಮರ್ಚೆಂಟ್ ನೇವಿಯಲ್ಲಿ ಸೇರಲು ಅಗತ್ಯವಿರುವ ತರಬೇತಿ ನೀಡಲಾಗುವುದು ಎಂದು ಹೇಳಲಾಗಿದೆ. ಈಗಾಗಲೇ ನಿವೃತ್ತ ಯೋಧರಿಗೆ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಲಾಗಿದ್ದು, ಅದರಲ್ಲೇ ಸರಿಯಾಗಿ ಅವರಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ಇನ್ನು ಸರಕಾರ ಎಷ್ಟು ನಿವೃತ್ತ ಯೋಧರಿಗೆ ಕೆಲಸ ನೀಡಲಾಗಿದೆ ಎಂದು ಶ್ವೇತಪತ್ರ ಹೊರಡಿಸಲಿ ಎಂದು ರಾಮಲಿಂಗಾರೆಡ್ಡಿ ಆಗ್ರಹಿಸಿದರು.

ಸರಕಾರ ಕಳೆದ 3 ವರ್ಷಗಳಿಂದ ಸರಿಯಾಗಿ ಸೇನಾ ನೇಮಕಾತಿ ನಡೆಸಿಲ್ಲ. ಆದರೆ ರಕ್ಷಣಾ ಇಲಾಖೆಯಲ್ಲಿ ಶೇ.10ರಷ್ಟು ಮೀಸಲಾತಿಯ ಪ್ರಕಾರ ಅಗ್ನಿವೀರ ಯೋಧರಿಗೆ ಎಷ್ಟು ಉದ್ಯೋಗ ನೀಡಲು ಸಾಧ್ಯ? ಇದಕ್ಕೂ ಮೊದಲು ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಎಷ್ಟು ನಿವೃತ್ತ ಯೋಧರಿಗೆ ಸಚಿವಾಲಯದಲ್ಲಿ ಕೆಲಸ ಕೊಟ್ಟಿದ್ದಾರೆ? ಸರಕಾರ ಪೂರ್ಣಾವಧಿಗೆ ಯೋಧರನ್ನು ನೇಮಕಮಾಡಿಕೊಳ್ಳಬೇಕೇ ಹೊರತು, ಕೇವಲ ನಾಲ್ಕು ವರ್ಷಕ್ಕೆ ನೇಮಕಮಾಡಿಕೊಂಡು ನಂತರ ಅವರನ್ನು ಮನೆಗೆ ಕಳುಹಿಸಬಾರದು. ಇದರಿಂದ ಯುವಕರ ಭವಿಷ್ಯ ನಾಶವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಯುವಕರ ಭವಿಷ್ಯ, ದೇಶದ ರಕ್ಷಣೆ, ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಸರಿಯಾಗಿಲ್ಲ. ಹೀಗಾಗಿ ಇದುವರೆಗೂ ಹೇಗೆ ಸೇನಾ ಯೋಧರನ್ನು ಯಾವ ರೀತಿ ನೇಮಕ ಮಾಡಲಾಗುತ್ತಿತ್ತೋ ಅದೇರೀತಿ ಮುಂದುವರಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಎಲ್ಲರೂ ಬಂದು ಭಾಗವಹಿಸಬೇಕು ಎಂದು ರಾಮಲಿಂಗಾರೆಡ್ಡಿ ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮನೋಹರ್, ರಾಮಚಂದ್ರಪ್ಪ ಹಾಗೂ ಮಂಜುನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News