ಪಠ್ಯಪುಸ್ತಕ ಸಂಘದಲ್ಲಿ ಅವ್ಯವಹಾರ: ಎಸಿಬಿ ತನಿಖೆಗೆ ಸರಕಾರದ ಅಸಹಕಾರ?

Update: 2022-06-25 02:26 GMT

ಬೆಂಗಳೂರು: ಶಾಲಾ ಪಠ್ಯಪುಸ್ತಕಗಳ ಮುದ್ರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪಠ್ಯಪುಸ್ತಕ ಸಂಘದಲ್ಲಿ  ಸಾವಿರಾರು ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬ ಆರೋಪ ಕುರಿತು ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ವಿಚಾರಣೆಗೆ ಕೈಗೆತ್ತಿಕೊಂಡಿರುವ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಸರಕಾರವು ದಾಖಲೆಗಳನ್ನು ಒದಗಿಸದೇ ಕಾಲಹರಣದಲ್ಲಿ ತೊಡಗಿರುವುದು ಇದೀಗ ಬಹಿರಂಗವಾಗಿದೆ.

ಯಾವುದೇ ದಾಖಲೆಗಳನ್ನು ನೀಡದ ಕಾರಣ ೬ ವರ್ಷಗಳಿಂದಲೂ ಈ ದೂರಿನ ವಿಚಾರಣೆಯು ಇನ್ನೂ ಆಮೆಗತಿಯಲ್ಲೇ ಸಾಗಿದೆ.

ಪಠ್ಯ ಪುಸ್ತಕಗಳ ಪರಿಷ್ಕರಣೆ ಸುತ್ತ ಎದ್ದಿರುವ ವಿವಾದವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹೊತ್ತಿನಲ್ಲೇ ಈ ಕುರಿತು ಶಿಕ್ಷಣ ಇಲಾಖೆಯು 2022ರ ಜೂನ್ 16ರಂದು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ. ಇದರ ಪ್ರತಿಯು "the-file.in"ಗೆ ಲಭ್ಯವಾಗಿದೆ.

ಎಸಿಬಿಯು ಸತತವಾಗಿ ಪತ್ರ ಬರೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಯು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕರಿಗೆ ಮಾಹಿತಿ ಕೋರಿ ಪತ್ರವನ್ನು ಬರೆದಿದ್ದಾರೆ.

ಶಾಲಾ ಪುಸ್ತಕಗಳ ಮುದ್ರಣಕ್ಕೆ ಸಂಬಂಧಿಸಿದಂತೆ ಖಾಸಗಿ ಮುದ್ರಕರಿಗೆ ನೀಡಿದ್ದ ಗುತ್ತಿಗೆ ಮತ್ತು ಖಾಸಗಿ ಮುದ್ರಕರು ಬಳಸಿದ್ದ ಕಾಗದಗಳ ಗುಣಮಟ್ಟ, ಹಣ ಪಾವತಿಯಲ್ಲಿ ನಡೆದಿರುವ ಅವ್ಯವಹಾರ ನಡೆದಿದೆ  ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಎಂಬವರು ೨೦೧೬ರ ನವೆಂಬರ್ ೨೨ರಂದು ದೂರು ಸಲ್ಲಿಸಿದ್ದರು.

‘ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ 10 ವರ್ಷಗಳಿಂದ ಸಾವಿರಾರು ಕೋಟಿ ರೂ.ಗಳಷ್ಟು ನೀಡಿದ್ದ  ಅನುದಾನವನ್ನು ಸರಿಯಾಗಿ ಉಪಯೋಗಿಸಿಕೊಳ್ಳದೇ ಸರಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ಪ್ರಕರಣದಲ್ಲಿನ ಆರೋಪಗಳಿಗೆ ಸಂಬಂಧಿಸಿ ದಾಖಲೆಗಳು ಯಾವ ಕಚೇರಿಯಲ್ಲಿ ಲಭ್ಯವಿದೆಯೋ ಅಲ್ಲಿಂದ ಪಡೆದು ದಾಖಲೆಗಳನ್ನು ಪರಿಶೀಲಿಸಿ ಸ್ಪಷ್ಟ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸುವಂತೆ ಕೋರಲಾಗಿತ್ತು. ಆದರೆ ಇದುವರೆಗೂ ವರದಿ ಸ್ವೀಕೃತವಾಗಿಲ್ಲ. ಈ ಪ್ರಕರಣದಲ್ಲಿನ ಹೆಚ್ಚಿನ ವಿಳಂಬಕ್ಕೆ ಆಸ್ಪದ ನೀಡದೆ ಪ್ರಕರಣದ ಗಂಭೀರತೆ ಅರಿತು ಕೋರಿರುವ ಮಾಹಿತಿಯನ್ನು ತುರ್ತಾಗಿ ಸರಕಾರಕ್ಕೆ ಸಲ್ಲಿಸಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಮತ್ತು ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕರಿಗೆ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ನಿರ್ದೇಶಿಸಿದ್ದಾರೆ.

2016ರಲ್ಲಿ ಸಲ್ಲಿಸಿದ್ದ ದೂರಿನಲ್ಲೇನಿತ್ತು?: 10 ವರ್ಷಗಳಿಂದ ಕರ್ನಾಟಕ ಪಠ್ಯಪುಸ್ತಕ ಸಂಘದಲ್ಲಿ ಯಾವುದೇ ಲೆಕ್ಕ ಪರಿಶೋಧನೆ ಅಗಿಲ್ಲ. ಸಾವಿರಾರು ಕೋಟಿ ರೂಪಾಯಿಯಷ್ಟು ಅನುದಾನವನ್ನು ಸರಕಾರದಿಂದ ಪಡೆದಿದ್ದರೂ ಇಲ್ಲಿಯವರೆಗೂ ಮಹಾಲೇಖಪಾಲರಿಂದ ಲೆಕ್ಕ ತಪಾಸಣೆ ಮಾಡಿಸಿಲ್ಲ. ಹೊಸ ಲೆಕ್ಕಾಧಿಕಾರಿಗಳು ಬಂದು ಪತ್ರ ಬರೆಯುವ ತನಕ ಮಹಾಲೇಖಪಾಲರಿಗೆ ಪತ್ರ ಬರೆದಿರಲಿಲ್ಲ.  10 ವರ್ಷಗಳ ನಂತರ ಹೊಸ ಲೆಕ್ಕಾಧಿಕಾರಿಗಳು ಪತ್ರ ಬರೆದಿದ್ದರೂ ಅಧಿಕಾರಿಗಳು ಅದನ್ನು ತಡೆಹಿಡಿದಿದ್ದಾರೆ. ಈ ಇಲಾಖೆಯಲ್ಲಿ ೭ ವರ್ಷಗಳಿಂದ ಬೀಡುಬಿಟ್ಟಿರುವ ಚಂದ್ರಯ್ಯ ಎಂಬ ಆಡಳಿತ ಅಧಿಕಾರಿ ನೂರಾರು ಕೋಟಿ ರೂ. ಅವ್ಯವಹಾರಕ್ಕೆ ಕೇಂದ್ರ ಬಿಂದುವಾಗಿದ್ದಾರೆ ಎಂದು ಸಾಯಿದತ್ತ ಎಂಬವರು ದೂರಿನಲ್ಲಿ ಉಲ್ಲೇಖಿಸಿದ್ದರು.

2016-17ನೇ ಸಾಲಿನಲ್ಲಿ ಚಂದ್ರಯ್ಯ ಎಂಬ ಅಧಿಕಾರಿಯು ವೆಂಕಟೇಶ್ವರ ಪ್ರಿಂಟ್, ವಿನಾಯಕ ಪ್ರಿಂಟರ್, ರಮ್ಯ ಪ್ರಿಂಟರ್, ಬ್ರಹ್ಮತೇಜ ಪ್ರಿಂಟರ್ಸ್‌ನೊಂದಿಗೆ ಸೇರಿ ಕಳಪೆ ಗುಣಮಟ್ಟದ ಕಾಗದವನ್ನು ಬಳಸಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಪೂರೈಕೆ ಮಾಡಿದ್ದಾರೆ. ಸರಕಾರಕ್ಕೆ  ಒಳ್ಳೆಯ ಪುಸ್ತಕಗಳನ್ನು ತೋರಿಸಿ ಮಕ್ಕಳಿಗೆ ಕೋಟ್ಯಂತರ ಕಳಪೆ ಪುಸ್ತಕಗಳನ್ನು ಪೂರೈಕೆ ಮಾಡಿದ್ದಾರೆ. ಸರಕಾರ ೬೦ ಜಿಎಂಎಂ ಪೇಪರನ್ನು ನಿಗದಿಪಡಿಸಿದೆ. ಆದರೆ ಈ ಮುದ್ರಕರು ೫೦ ಜಿಎಸ್‌ಎಂ ಪೇಪರ್ 1 ಟನ್‌ಗೆ 46 ಸಾವಿರು ರೂ. ಗಳಿವೆ. ಅಂದರೆ 1 ಟನ್‌ಗೆ 12 ಸಾವಿರ ರೂ. ವ್ಯತ್ಯಾಸವಿದೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

 ಈ ಮುದ್ರಕರಿಗೆ 1.60 ಕೋಟಿ ಪುಸ್ತಕಗಳನ್ನು ಮುದ್ರಿಸಲು ಕೊಟ್ಟಿದೆ. ಇದಕ್ಕೆ ಉಪಯೋಗಿಸುವ ಕಾಗದವು ೫ರಿಂದ ೬ ಸಾವಿರ ಮೆಟ್ರಿಕ್ ಟನ್ ಅಂದರೆ 7ರಿಂದ 8 ಕೋಟಿಯಷ್ಟು ಹಣ ಉಳಿಸಿ ಮುದ್ರಕರೊಂದಿಗೆ ಕೈ ಜೋಡಿಸಿ ಕೋಟ್ಯಂತರ ರೂ.ಗಳ ಅವ್ಯವಹಾರ ನಡೆಸಿರುತ್ತಾರೆ. ಇದರಲ್ಲಿ ಸರಕಾರಿ ಮುದ್ರಣದ ಅಧಿಕಾರಿಗಳು ಸೇರಿದಂತೆ ಸರಕಾರದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ. ಈಗ 60 ಜಿಎಸ್‌ಎಂ ಪೇಪರ್ ಉಪಯೋಗಿಸಿದ್ದಾರೆ ಎಂದು ಮರೆಮಾಚಿದ್ದಾರೆ ಎಂದು ಆಪಾದಿಸಿದ್ದಾರೆ.

ಆಂಧ್ರದ ಬ್ರಹ್ಮತೇಜ ಪ್ರಿಂಟರ್ಸ್‌ಗೆ ಇವರಿಗೆ ಕಳೆದ 3 ವರ್ಷ ಕೇವಲ ಒಂದು ಪ್ಯಾಕೇಜ್ ಕೊಡುತ್ತಿದ್ದರೂ ಸರಿಯಾದ ವೇಳೆಗೆ ಮಕ್ಕಳಿಗೆ ಸರಬರಾಜು ಮಾಡದೇ ದಂಡ ಹಾಕಿಸಿಕೊಂಡಿದ್ದಾರೆ. ಅಂತಹದರಲ್ಲಿ ಈ ವರ್ಷ 3 ಪ್ಯಾಕೇಜ್‌ಗಳನ್ನು ಕೊಟ್ಟಿದ್ದಾರೆ. ಕಳೆದ ಮೂರು ವರ್ಷ ಒಂದು ಪ್ಯಾಕೇಜನ್ನು ವಿಳಂಬ ಮಾಡಿ ಸರಬರಾಜು ಮಾಡುತ್ತಿದ್ದ ಬ್ರಹ್ಮತೇಜ ಪ್ರಿಂಟರ್ಸ್‌ಗೆ ಈ ವರ್ಷ 3 ಪ್ಯಾಕೇಜ್‌ಗಳನ್ನು ಕೊಟ್ಟಿರುವುದು ಅವ್ಯವಹಾರ ಮಾಡಿರುವುದು ಎದ್ದು ಕಾಣುತ್ತದೆ ಎಂದು ಆಪಾದಿಸಿರುವುದು ದೂರಿನಿಂದ ಗೊತ್ತಾಗಿದೆ.

 ಕಳೆದ ವರ್ಷ ಬ್ರಹ್ಮತೇಜ ಹಾಗೂ ಇತರ ಮುದ್ರಕರಿಗೆ ಬ್ಯಾಂಕ್ ಗ್ಯಾರಂಟಿ ತೆಗೆದುಕೊಳ್ಳದೇ ಕಾರ್ಯಾದೇಶ ನೀಡಿರುತ್ತಾರೆ. ಮೂಲ ಬ್ಯಾಂಕ್ ಗ್ಯಾರಂಟಿಯನ್ನು ಲೆಕ್ಕಪತ್ರ ವಿಭಾಗಕ್ಕೆ ಕೊಡದೇ ಇವರೇ ಇಟ್ಟುಕೊಂಡಿರುತ್ತಾರೆ. ಕಾರಣ ಕೆಲವರು ಮೂಲ ಗ್ಯಾರಂಟಿ ಕೊಟ್ಟಿರುವುದಿಲ್ಲ. ಕಲರ್ ಜೆರಾಕ್ಸ್ ಕೊಟ್ಟಿರುತ್ತಾರೆ. ಹಾಗಾಗಿ ಅಕೌಂಟ್ಸ್ ಡಿಪಾರ್ಟ್‌ಮೆಂಟ್‌ಗೆ ಹೆಚ್ಚಿನ ಅಧಿಕಾರ ಕೊಟ್ಟಿ ರುವುದಿಲ್ಲ. ಯಾವುದೇ ಪ್ರಿಂಟರ್ಸ್ ಬ್ಯಾಂಕ್ ಗ್ಯಾರಂಟಿ ಕೊಟ್ಟಾಗ ಆ ಬ್ಯಾಂಕ್‌ಗೆ ಪತ್ರ ಹಾಕಿ ದೃಢೀಕರಿಸಿಕೊಳ್ಳಬೇಕು. ಈ ಪ್ರಕ್ರಿಯೆ ಮಾಡಿರು ವುದಿಲ್ಲ. ಇವೆಲ್ಲ ಅವ್ಯವಹಾರದ ಕುತಂತ್ರಗಳಾಗಿವೆ ಎಂದೂ ಸಾಯಿದತ್ತ ಆರೋಪಿಸಿದ್ದಾರೆ.

‘ತಡವಾಗಿ ಸರಬರಾಜು’

ಮುದ್ರಕರಿಗೆ ಸರಬರಾಜು ಮಾಡಲು ಹೆಚ್ಚುವರಿಯಾಗಿ ದಿನಗಳನ್ನು ಯಾವ ವರ್ಷವೂ ನೀಡಿರುವುದಿಲ್ಲ. ಆದರೆ ಈ ವರ್ಷ ಇಲಾಖೆ ಕಡೆಯಿಂದಲೇ ತಪ್ಪಾಗಿದೆ ಎಂದು ನೆಪ ಹೇಳಿ ಕಳಪೆ ಕಾಗದಗಳನ್ನು ಬಳಸಿರುವ ಬ್ರಹ್ಮತೇಜ ಪ್ರಿಂಟರ್ಸ್, ವಿನಾಯಕ ಪ್ರಿಂಟರ್ಸ್, ವೆಂಕಟೇಶ್ವರ ಪ್ರಿಂಟರ್ಸ್, ರಮ್ಯ ಪ್ರಿಂಟರ್ಸ್‌ಗಳಿಗೆ ಹೆಚ್ಚುವರಿ ದಿನಗಳನ್ನು ಕೊಟ್ಟು ದಂಡ ಕಡಿಮೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಪ್ರಿಂಟರ್ಸ್‌ಗಳು ಶಾಲೆಗಳು ಪ್ರಾರಂಭವಾಗಿ ೨ ತಿಂಗಳ ನಂತರ ಪಠ್ಯಪುಸ್ತಕ ಸರಬರಾಜು ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ದೂರಿನಲ್ಲಿ ವಿವರಿಸಿದ್ದಾರೆ.

ಈ ಮುದ್ರಕರು ೨ ತಿಂಗಳ ನಂತರ ಸರಬರಾಜು ಮಾಡಿದ್ದರೂ ಡಿಸಿಗಳನ್ನು ತಿದ್ದಿ ಅವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಹೇಗೆಂದರೆ ಬಿಇಒ ಕಚೇರಿಯಲ್ಲಿ ಸ್ವೀಕರಿಸಿದ ದಿನಾಂಕಕ್ಕೂ ಪಠ್ಯಪುಸ್ತಕ ಸಮಯದಲ್ಲಿರುವ ಡಿಸಿಯ ದಿನಾಂಕಕ್ಕೂ ವ್ಯತ್ಯಾಸವಿದೆ. ಇದರಿಂದ ಈ ಮೇಲಿನ ನಾಲ್ಕು ಮುದ್ರಕರಿಗೆ ರೂ. ೪ ಕೋಟಿ ದಂಡ ಬೀಳುವುದು ತಪ್ಪಿದೆ. ಇದರಲ್ಲಿ ವ್ಯವಹಾರ ಕುದುರಿಸಲಾಗಿದೆ ಎಂದು ಆರೋಪಿಸಲಾಗಿದೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News