ಹಜ್‍ಯಾತ್ರಿಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ: ರವೂಫುದ್ದೀನ್ ಕಚೇರಿವಾಲೆ

Update: 2022-06-25 14:35 GMT

ಬೆಂಗಳೂರು, ಜೂ.25: ರಾಜ್ಯದ ಹಜ್ ಯಾತ್ರಿಗಳಿಗೆ ಯಾವುದೆ ರೀತಿಯ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ ವರ್ಷ ರಾಜ್ಯದ ಎಲ್ಲ ಯಾತ್ರಿಗಳು ಬೆಂಗಳೂರಿನಿಂದಲೆ ಹೋಗಿದ್ದರಿಂದ ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳು ಆಗಿರಬಹುದು ಎಂದು ರಾಜ್ಯ ಹಜ್ ಸಮಿತಿ ಅಧ್ಯಕ್ಷ ರವೂಫುದ್ದೀನ್ ಕಚೇರಿವಾಲೆ ತಿಳಿಸಿದರು.

ಶನಿವಾರ ನಗರದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಜ್‍ಯಾತ್ರಿಗಳು ತೆರಳುವ ವಿಮಾನಗಳ ವೇಳಾಪಟ್ಟಿ ನಮಗೆ ಜೂ.7ರಂದು ಸಿಕ್ಕಿತು. ಜೂ.9ರಂದು ಬೆಳಗ್ಗೆ ಮೊದಲ ವಿಮಾನ ರವಾನೆಯಾಯಿತು. ಕೇವಲ ಎರಡು ದಿನಗಳಲ್ಲಿ ರಾಜ್ಯ ಹಜ್ ಸಮಿತಿಯು ತನ್ನ ಶಕ್ತಿ ಮೀರಿ ಕೆಲಸ ಮಾಡುವ ಮೂಲಕ ಯಾತ್ರಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿದೆ ಎಂದರು.

ಹಜ್‍ಭವನ ನಿರ್ಮಾಣದ ಸಂದರ್ಭದಲ್ಲೆ ಸ್ಯಾನಿಟರಿ ಸೌಲಭ್ಯ ಸಮರ್ಪಕವಾಗಿ ಕಲ್ಪಿಸದೆ ಇದ್ದಿದ್ದರಿಂದ ಕೆಲವೊಂದು ಸಮಸ್ಯೆಗಳು ಆಗಿತ್ತು. ಆಗಲೂ, ತುರ್ತು ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿತ್ತು. ಪ್ರತಿಯೊಂದು ವಿಮಾನದಲ್ಲಿ 450 ಮಂದಿ ಯಾತ್ರಿಗಳು ತೆರಳಿದರು. ಒಂದು ದಿನ ಎರಡು ವಿಮಾನಗಳು ಸಂಚರಿಸಿವೆ ಎಂದು ಅವರು ಹೇಳಿದರು.

ಒಟ್ಟು 2,560 ಯಾತ್ರಿಗಳು ಹಾಗೂ ಅವರ ಸಂಬಂಧಿಕರು ಸೇರಿದಂತೆ ಸುಮಾರು 15 ಸಾವಿರ ಜನರಿಗೆ ಇಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಸುತ್ತಮುತ್ತಲಿನ ಕಲ್ಯಾಣ ಮಂಟಪಗಳು ಮೊದಲೆ ಮದುವೆ ಸಮಾರಂಭಗಳಿಗೆ ಕಾಯ್ದಿರಿಸಿದ್ದರಿಂದ ಹಾಗೂ ಮದ್ರಸಾಗಳಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರಿಂದ ನಮಗೆ ಅದರ ಸೌಲಭ್ಯ ಸಿಕ್ಕಿಲ್ಲ. ಅದಾಗ್ಯೂ, ಪಕ್ಕದಲ್ಲಿರುವ ಕಾಲೇಜಿನ ಮೈದಾನದಲ್ಲಿ ತಾತ್ಕಾಲಿಕವಾಗಿ ಮೂರು ಟೆಂಟ್‍ಗಳನ್ನು ಹಾಕಿ, ಪ್ರತಿಯೊಂದರಲ್ಲೂ 100 ಹಾಸಿಗೆಗಳನ್ನು ಹಾಕಲಾಗಿತ್ತು ಎಂದು ರವೂಫುದ್ದೀನ್ ಕಚೇರಿವಾಲೆ ತಿಳಿಸಿದರು.

ಹಜ್‍ಭವನದ ಮಸೀದಿಯಲ್ಲಿ, ಆಡಿಟೋರಿಯಂನ ಖಾಲಿ ಜಾಗದಲ್ಲಿಯೂ ನಾವು ಹಾಜಿಗಳು ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದೆವು. ಆದರೂ, ಕೆಲವು ಉದ್ದೇಶಪೂರ್ವಕವಾಗಿ ಮಾಧ್ಯಮಗಳಲ್ಲಿ ರಾಜ್ಯ ಹಜ್ ಸಮಿತಿ ವಿರುದ್ಧ ಇಲ್ಲಸಲ್ಲದ ಆಪಾದನೆಗಳನ್ನು ಮಾಡುತ್ತಿರುವುದು ಬೇಸರದ ಸಂಗತಿ. ರಾಜ್ಯದ ಯಾತ್ರಿಗಳಿಗೆ ಕೇವಲ ಬೆಂಗಳೂರಿನಲ್ಲಿ ಅಷ್ಟೇ ಅಲ್ಲ, ಮಕ್ಕಾ ಹಾಗೂ ಮದೀನಾದಲ್ಲಿಯೂ ಹಜ್ ಸಮಿತಿ ವತಿಯಿಂದ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ರಾಜ್ಯದ ಮಂಗಳೂರು ಹಾಗೂ ಕಲಬುರಗಿಯಲ್ಲಿ ಆದಷ್ಟು ಬೇಗ ಹಜ್ ಭವನ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳಲಾಗುವುದು. ಮಂಗಳೂರು ಹಾಗೂ ಕಲಬುರಗಿಯಲ್ಲಿ ಹಜ್‍ಭವನ ನಿರ್ಮಿಸಲು ಈಗಾಗಲೆ ಜಾಗವನ್ನು ಗುರುತಿಸಲಾಗಿದ್ದು, ಮುಂದಿನ ಹಜ್ ಸಮಿತಿಯ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ರವೂಫುದ್ದೀನ್ ಕಚೇರಿವಾಲೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಹಜ್ ಸಮಿತಿ ಸದಸ್ಯರಾದ ಮುಹಮ್ಮದ್ ಕಬೀರ್ ಅಹ್ಮದ್, ಚಾಂದ್ ಪಾಷ ಹಾಗೂ ಮುಯಿನುದ್ದೀನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News