VIDEO- ಪ್ರತಿಭಟನೆ ಮಾಡಲು ಹೋಗಿ ಪೇಚಿಗೆ ಸಿಲುಕಿದ ಎನ್‍ಎಸ್‍ಯುಐ ಕಾರ್ಯಕರ್ತರು!

Update: 2022-06-25 17:56 GMT

ಬೆಂಗಳೂರು, ಜೂ. 25: ‘ಎಐಸಿಸಿ ಮುಖಂಡ ರಾಹುಲ್ ಗಾಂಧಿ ಕಚೇರಿಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿ ಸಂಘಟನೆ ವಿರುದ್ಧ ಪ್ರತಿಭಟನೆ ನೆಪದಲ್ಲಿ ಸಿಪಿಐ ಮತ್ತು ಸಿಪಿಎಂ ಕಚೇರಿಯ ಅರಿವಿಲ್ಲದೆ ಕಮ್ಯುನಿಸ್ಟ್ ಪಕ್ಷದ ಕಚೇರಿಗೆ ಮುತ್ತಿಗೆ ಹಾಕಲು ಹೋಗಿ ಎನ್‍ಎಸ್‍ಯುಐ ಕಾರ್ಯಕರ್ತರು ಪೇಚಿಗೆ ಸಿಲುಕಿ, ಮಹಿಳೆಯರಿಂದ ಛೀಮಾರಿ ಹಾಕಿಸಿಕೊಂಡು ಕಾಲ್ಕಿತ್ತ ಘಟನೆ ನಡೆದಿದೆ.

ಶನಿವಾರ ಮಧ್ಯಾಹ್ನ 12:30ರ ಸುಮಾರಿಗೆ ಕಾಂಗ್ರೆಸ್ ಬಾವುಟ ಹಿಡಿದ 25ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ವೈಯಾಲಿ ಕಾವಲ್‍ನಲ್ಲಿರುವ ಸಿಪಿಐ ಕಚೇರಿಗೆ ಏಕಾಏಕಿ ನುಗ್ಗಿದ್ದು, ಕಮ್ಯುನಿಸ್ಟ್ ಪಾರ್ಟಿಗೆ ಧಿಕ್ಕಾರ ಎಂದು ಘೋಷಣೆ ಕೂಗಲು ಆರಂಭಿಸಿದ್ದಾರೆ. ಆಗ ಕಚೇರಿಯ ಮೊದಲ ಮಹಡಿಯಲ್ಲಿ ಸಭೆ ನಡೆಸುತ್ತಿದ್ದ ಸಿಪಿಐ ಮುಖಂಡರಿಗೆ ಅಚ್ಚರಿಯಾಗಿದೆ.

ಕೂಡಲೇ ಮಹಡಿಯಿಂದ ಕೆಳಗೆ ಧಾವಿಸಿದ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ‘ಯಾರು ನೀವು, ಏಕೆ ಬಂದಿದ್ದೀರಿ' ಎಂದು ಪ್ರಶ್ನಿಸಿದರೆ, ‘ನಾವು ಎನ್‍ಎಸ್‍ಯುಐ ಕಾರ್ಯಕರ್ತರು, ನಮ್ಮ ಪಕ್ಷದ ಮುಖಂಡ ರಾಹುಲ್ ಗಾಂಧಿ ಕಚೇರಿಗೆ ಮುತ್ತಿಗೆ ಹಾಕಿದ ಎಸ್‍ಎಫ್‍ಐ ವಿರುದ್ಧ ಪ್ರತಿಭಟನೆ ಮಾಡಲು ಬಂದಿದ್ದೇವೆ' ಎಂದು ಸಮಜಾಯಿಸಿ ನೀಡಿದರು.

ಇದರಿಂದ ಆಕ್ರೋಶಿತರಾದ ಸಾತಿ ಸುಂದರೇಶ್ ಮತ್ತು ಸಿಪಿಐ ಕಾರ್ಯಕರ್ತರು, ‘ಎನ್‍ಎಸ್‍ಯುಐ ಕಾರ್ಯಕರ್ತರಿಗೆ ಸಿಪಿಐ ಕಚೇರಿ ಎಲ್ಲಿ, ಸಿಪಿಎಂ ಕಚೇರಿ ಎಲ್ಲಿದೆ ಎಂಬ ಅರಿವು, ಕನಿಷ್ಠ ಪರಿಜ್ಞಾನವೂ ಇಲ್ಲವೇ? ಎಸ್‍ಎಫ್‍ಐ ನಮ್ಮ ಪಕ್ಷದ ವಿದ್ಯಾರ್ಥಿ ಸಂಘಟನೆಯಲ್ಲ. ನಮ್ಮ ವಿದ್ಯಾರ್ಥಿ ಸಂಘಟನೆ ಎಐಎಸ್‍ಎಫ್, ನೀವು ಪ್ರತಿಭಟನೆ ಮಾಡಲು ದಾರಿ ತಪ್ಪಿ ಇಲ್ಲಿಗೆ ಬಂದಿದ್ದೀರಿ' ಎಂದು ತಿರುಗೇಟು ನೀಡಿದರು.

ಪ್ರತಿಭಟನೆಗೆ ಬಂದಿದ್ದ ‘ಕೈ' ಕಾರ್ಯಕರ್ತರು ಕ್ಷಣಕಾಲ ವಿಚಲಿತರಾಗಿ ‘ಸಿಪಿಎಂ ಕಚೇರಿ ಎಲ್ಲಿ? ಎಸ್‍ಎಫ್‍ಐ ಕಚೇರಿ ಎಲ್ಲಿ?' ಎಂದು ಸಿಪಿಐ ಕಾರ್ಯಕರ್ತರನ್ನು ಪ್ರಶ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಸಿಪಿಐನ ಮಹಿಳಾ ಕಾರ್ಯಕರ್ತೆಯರು, ‘ನಮ್ಮದು ಅಂಚೆ ಕಚೇರಿಯಲ್ಲ ನಿಮಗೆ ವಿಳಾಸ ಹೇಳಲಿಕ್ಕೆ. ಮೊದಲು ನಮ್ಮ ಪಕ್ಷದ ಕಚೇರಿಯಿಂದ ಹೊರಗೆ ನಡೆಯಿರಿ. ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿಗೆ ಧಿಕ್ಕಾರ' ಎಂದು ಘೋಷಣೆ ಕೂಗಲು ಆರಂಭಿಸಿದರು.

ಯಾರ ವಿರುದ್ಧ ಪ್ರತಿಭಟನೆ ಮಾಡಲು ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರೇ ಸಿಪಿಐ ಕಾರ್ಯಕರ್ತರ ಪ್ರತಿಭಟನೆಗೆ ಆಹಾರವಾಗಿದ್ದು ನಿಜಕ್ಕೂ ವಿಲಕ್ಷಣ. ಸಿಪಿಐ ಕಾರ್ಯಕರ್ತರ ದಿಢೀರ್ ಆಕ್ರೋಶದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಬಂದಿದ್ದ ಕೈ ಕಾರ್ಯಕರ್ತರು ತಮ್ಮೊಂದಿಗೆ ತಂದಿದ್ದ ಬಾವುಟಗಳನ್ನು ಮಡಿಚಿಟ್ಟುಕೊಂಡು ‘ಬಂದ ದಾರಿಗೆ ಸುಂಕವಿಲ್ಲ' ಎಂಬಂತೆ ಸಿಪಿಐ ಕಚೇರಿಯಿಂದ ಕಾಲ್ಕಿತ್ತರು ಎಂದು ಗೊತ್ತಾಗಿದೆ.

‘ಎನ್‍ಎಸ್‍ಯುಐ ಕಾರ್ಯಕರ್ತರ ಪ್ರತಿಭಟನೆ ನೆಪದಲ್ಲಿ ಅರಿವಿಲ್ಲದೆ ನಮ್ಮ ಪಕ್ಷದ ಕಚೇರಿಗೆ ನುಗ್ಗಿದ್ದನ್ನು ಪಕ್ಷ ಖಂಡಿಸುತ್ತದೆ. ಸೈದ್ಧಾಂತಿಕ ತಿಳಿವಳಿಕೆಯ ಕೊರತೆ ಮತ್ತು ಗಲಭೆಕೋರ ಮನಸ್ಥಿತಿ ಹೊಂದಿರುವ ಕಾಂಗ್ರೆಸ್ ಪಕ್ಷದ ಯುವಕರ ಕೃತ್ಯಗಳು ಇಂದಿನ ಸಂದರ್ಭದಲ್ಲಿ ತಮ್ಮ ಪಕ್ಷದ ಘನತೆಗೆ ಧಕ್ಕೆಯುಂಟು ಮಾಡಲಿವೆ. ಅಲ್ಲದೆ, ಫ್ಯಾಸಿಸ್ಟ್‍ವಾದಿ ಶಕ್ತಿಗಳನ್ನು ಸೋಲಿಸಲು ನಾವೆಲ್ಲ ಒಂದಾಗಬೇಕಾಗಿರುವ ಈ ಕಾಲಘಟ್ಟದಲ್ಲಿ ಇಂತಹ ದುರ್ಘಟನೆಗಳು ನಡೆಯುತ್ತಿರುವುದು ವಿಷಾದನೀಯ. ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಬಂಧಪಟ್ಟವರಿಗೆ ಸೂಕ್ತ ತಿಳಿವಳಿಕೆ ನೀಡಿ ಅವರಿಗೆ ಸರಿಯಾದ ಮಾರ್ಗ ತೋರಿಸಬೇಕಾದ ಅಗತ್ಯವಿದೆ'

-ಸಾತಿ ಸುಂದರೇಶ್ ಸಿಪಿಐ ರಾಜ್ಯ ಕಾರ್ಯದರ್ಶಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News