ಜೀವಕ್ಕೆ ಬೆಲೆಯಿಲ್ಲ, ನೋವಿಗೆ ಗಣನೆಯಿಲ್ಲ

Update: 2022-06-25 19:30 GMT

ಶೂನ್ಯ ಸಹನೆಯ ವಲಯವಾಗಿರುವ ಸಂಚಾರ ದಟ್ಟವಾಗಿರುವ ವರ್ತುಲದಲ್ಲಿ ಅವರು ತಿರುಗಿಕೊಳ್ಳುವಾಗ ಒಂದು ಅಪಘಾತವಾಯಿತು. ಆಕೆ ಓಡಿಸುತ್ತಿದ್ದದ್ದು ದ್ವಿಚಕ್ರವಾಹನ ಮತ್ತು ಅವರ ಎಡಬದಿಯಿಂದ ಅವರನ್ನು ಓವರ್ ಟೇಕ್ ಮಾಡಲು ಯತ್ನಿಸಿದ ಗೂಡ್ಸ್ ಗಾಡಿ ಇವರ ಗಾಡಿಯ ಹಿಂಭಾಗವನ್ನು ಗುದ್ದಿದೆ. ಇಬ್ಬರು ಹೆಂಗಸರು ಪಕ್ಕಕ್ಕೆ ಎಸೆಯಲ್ಪಟ್ಟರು. ಆಘಾತವೆಂದರೆ ಒಬ್ಬರೂ ಎತ್ತಲು ಬರದೇ ಇದ್ದದ್ದು. ಗುದ್ದಿದ ಗಾಡಿಯವ ಹಾಗೇ ಓಡಿ ಹೋಗುವ ಪ್ರಯತ್ನ ಮಾಡುತ್ತಿದ್ದಾನೆ. ಸಿಗ್ನಲ್ ಲೈಟುಗಳನ್ನು ನಿರ್ವಹಿಸುತ್ತಿರುವ ಪೊಲೀಸರು ಬಿದ್ದವರು ಎದ್ದು ಹೋಗುತ್ತಾರೆ ಎನ್ನುವ ಧೋರಣೆಯಲ್ಲಿದ್ದಾರೆ. ಪಕ್ಕದಲ್ಲಿ ಹಾದು ಹೋಗುತ್ತಿರುವ ಒಬ್ಬ ಗಂಡಸಂತೂ ‘‘ಈ ಹೆಂಗಸರುಗಳಿಗೆ ಕೊಬ್ಬು, ಮನೆಯಲ್ಲಿ ಸುಮ್ಮನೆ ಇರಕ್ಕಾಗದೇ ಗಾಡಿ ಓಡಿಸ್ಕೊಂಡು ಬಂದು ಸಾಯ್ತೊರೆ’’ ಎಂದು ಬೈದುಕೊಂಡೇ ಹೋಗುತ್ತಿದ್ದಾನೆ. ಕೆಳಗೆ ಬಿದ್ದಿರುವ ಹೆಂಗಸರಿಬ್ಬರೂ ಆಘಾತದಿಂದ ಚೇತರಿಸಿಕೊಂಡು ನೋಡಲು, ಆ ತಾಯಿಯ ಕೈಗೆ ಬಲವಾಗಿ ಪೆಟ್ಟು ಬಿದ್ದಿದೆ, ಎದೆ, ತೊಡೆ ಮತ್ತು ಇತರ ಭಾಗಗಳಿಗೆ ಏಟು ಬಿದ್ದಿದೆ. ಅಷ್ಟರಲ್ಲಿ ಬೇರೆ ಹೆಂಗಸೊಬ್ಬಳು ಓಡಿ ಬಂದು ಪೊಲೀಸರ ಗಮನವನ್ನು ತಪ್ಪಿಸಿ ಹೊರಟು ಹೋಗುತ್ತಿದ್ದ ಗಾಡಿಯನ್ನು ತಡೆಯುವುದರಲ್ಲಿ ಯಶಸ್ವಿಯಾದರು. ಒಂದು ಹಂತಕ್ಕೆ ಅವರು ಮೇಲೆದ್ದು ಹೇಳುವುದನ್ನು ಯಾರಿಗಾದರೂ ಕೇಳಲು ಮೂವತ್ತು ನಿಮಿಷಗಳೇ ಬೇಕಾಯಿತು. ಇನ್ನು ಮುಂದೆ ಇನ್ನು ಹೆಚ್ಚಿನ ವಿವರಣೆಗಿಂತ ಆಘಾತಕಾರಿ ಮನಸ್ಥಿತಿ ಎನಿಸುವ ಅಂಶಗಳನ್ನಷ್ಟೇ ಪ್ರಸ್ತಾಪಿಸುತ್ತೇನೆ. ರಕ್ತಸ್ರಾವವಾಗುತ್ತಿರುವ ಇವರಿಗೆ ಚಿಕಿತ್ಸೆ ಕೊಡಿಸಲು ಅಲ್ಲೇ ಇರುವುದರಲ್ಲಿ ಯಾವುದು ಕನಿಷ್ಠಮಟ್ಟದ ಕ್ಲಿನಿಕ್ ಇದೆ ಎಂದು ನೋಡಿ ಅಲ್ಲಿ ಡ್ರೈವರ್ ಚಿಕಿತ್ಸೆ ಕೊಡಿಸಿ ಹೊರಟು ಹೋಗಲು ಯತ್ನಿಸುತ್ತಿದ್ದಾನೆ. ಡ್ರೈವರ್ ಮತ್ತು ಅವನ ಕಡೆಯವರು ಈ ಹೆಂಗಸರೇ ನಮಗೆ ಬಂದು ಗುದ್ದಿದರು ನಾವು ಅಮಾಯಕರು ಎಂದು ಹೇಳುತ್ತಿದ್ದರೆ, ಪೊಲೀಸರು ಯಾರು ತಮಗೆ ಮಾತಿನಲ್ಲಿ ಮನವರಿಕೆ ಮಾಡುತ್ತಾರೋ ಅವರ ಮಾತನ್ನು ಒಪ್ಪುವುದಕ್ಕೆ ಸಿದ್ಧವಾಗುತ್ತಿದ್ದಾರೆ. ತಾವು ಅದನ್ನು ಪರೀಕ್ಷಿಸಲು, ನೋಡಲು ಸಮಯ ತೆಗೆದುಕೊಳ್ಳಲು ಮುಂದಾಗುತ್ತಲೇ ಇಲ್ಲ. ದೊಡ್ಡ ಗಾಡಿಯವನ ಪ್ರಕಾರ ಮುಂದೆ ಚಲಿಸುತ್ತಿದ್ದ ಈ ದ್ವಿಚಕ್ರವಾಹನವು ರಿವರ್ಸ್ ಗೇರಿನಲ್ಲಿ ಹಿಂದಕ್ಕೆ ಬಂದು ತನ್ನ ಪಾಡಿಗೆ ತಾನು ಬರುತ್ತಿರುವಾಗ ಹಿಂಭಾಗದಿಂದ ಗುದ್ದಿ ತಾವೇ ಬಿದ್ದು ತೊಂದರೆಗೀಡಾಗಿದ್ದಾರೆ. ಪೊಲೀಸರಿಗೆ ಪರಿಶೀಲಿಸುವ ವಿಧಾನಗಳೇ ಇಲ್ಲವೇ? ಅಲ್ಲೊಂದು ತಂತ್ರಗಾರಿಕೆ, ತರ್ಕ ಏನೂ ಇಲ್ಲವೇ? ಪೊಲೀಸರಿಗೆ ದೂರು ಸಲ್ಲಿಸಿ, ಅದಕ್ಕೆ ಬೇಕಾದ್ದನ್ನು ಮಾಡಿ ಹೋಗೋಣ, ನ್ಯಾಯಬದ್ಧವಾಗಿ ವ್ಯವಸ್ಥಿತವಾಗಿ ನಡೆದು ಹೋಗಲಿ ಎಂಬುದು ಒಬ್ಬರ ಅಭಿಪ್ರಾಯವಾದರೆ, ಮತ್ತೊಬ್ಬರು ಇವೆಲ್ಲಾ ರೇಜಿಗೆ, ಬೇಡ. ನೀವೇ ಮಾತಾಡಿಕೊಂಡು ರಾಜಿ ಮಾಡಿಕೊಳ್ಳಿ ಎಂಬ ಧೋರಣೆ. ಸರಿ, ಈಗ ಸಿಸಿ ಕ್ಯಾಮರಾ ಫುಟೇಜ್ ತೆಗೆಸುವ ಅಂದರೆ ಪೊಲೀಸರಲ್ಲೇ ಸಮ್ಮತಿ ಇಲ್ಲ. ‘‘ಅಲ್ಲಿ ಸರಿಯಾಗಿ ಕಾಣಲ್ಲ. ಮರ ಎಲ್ಲಾ ಅಡ್ಡ ಇರತ್ತೆ’’ ಎಂದು ಒಬ್ಬರಾದರೆ, ಮತ್ತೊಬ್ಬರು ‘‘ಅದು ವರ್ಕ್ ಆಗಲ್ಲಾಂತನ್ನಿಸುತ್ತೆ’’ ಅನ್ನೋದೇ?

ಗುದ್ದಿದವರು ಮತ್ತು ಬಿದ್ದವರ ನಡುವೆ ನಡೆಯುತ್ತಿರುವ ಚೌಕಾಶಿ ನೋಡಿದರೆ ಜೀವಕ್ಕಿಂತ ಲೌಕಿಕ ವಸ್ತುಗಳಿಗಷ್ಟೇ ಬೆಲೆ ಎನ್ನುವುದು ತಿಳಿಯುತ್ತದೆ.

ಗಾಡಿಯ ಹಿಂದೆ ಎಲ್ಲಾ ಡ್ಯಾಮೇಜ್ ಆಗಿದೆ. ‘‘ಮೂರೂವರೆ ಸಾವಿರ ಆಗತ್ತೆ’’ ಎಂದು ಇವರು. ‘‘ನನ್ನ ಹತ್ತಿರ ಅಷ್ಟೆಲ್ಲಾ ಇಲ್ಲ. ನಾನು ತಪ್ಪೇ ಮಾಡಿಲ್ಲ. ಐನೂರು ರುಪಾಯಿ ಕೊಡ್ತೀನಿ’’ ಹೀಗೊಂದು ಜಗ್ಗಾಟ. ಅದನ್ನು ಹೊರಗಿನಿಂದ ನಿಂತು ನೋಡಲು,

1. ಆರೋಪಿಯೋ, ಸಂತ್ರಸ್ತರೋ; ಅವರವರು ಅವರವರ ಮೂಗಿನ ನೇರಕ್ಕೇ ಹೇಳುತ್ತಾರೆಂದುಕೊಳ್ಳೋಣ. ಪೊಲೀಸ್ ಅಂತ ಒಂದು ವ್ಯವಸ್ಥೆ ಇಲ್ಲವೇ? ವಿಚಾರಿಸುವ ಮತ್ತು ಅದನ್ನು ಗಣಿಸುವ ಕ್ರಮಮಗಳಿಲ್ಲವೇ?

2. ಸಂತ್ರಸ್ತರು ನಾವೇ ಆಗಿರುವಾಗ ನಮಗೆ ಎರಡು ಆಯ್ಕೆಗಳಿರುತ್ತವೆ. ಒಂದೋ ನಮಗೆ ನೋವಾದರೂ, ತೊಂದರೆಯಾದರೂ ಅಪಘಾತವೆಂಬುದು ಉದ್ದೇಶಪೂರ್ವಕವಾಗಿರುವುದಲ್ಲ, ಹಾಗಾಗಿ ಆತನ ಹೊಣೆಗೇಡಿತನವನ್ನು ಮತ್ತು ಆತುರಗೇಡಿತನವನ್ನು ಅವನ ಗಮನಕ್ಕೆ ತಂದು ಕ್ಷಮಿಸಿಬಿಡುವುದು. ಅವರವರು ಅವರವರ ದಾರಿಯಲ್ಲಿ ತೆರಳುವುದು ಅಥವಾ ಆತನ ಹೊಣೆಗೇಡಿತನಕ್ಕೆ ಮತ್ತು ಆತುರಗೇಡಿತನಕ್ಕೆ ತಕ್ಕ ಶಾಸ್ತಿಯಾಗಬೇಕು, ತಕ್ಕ ಬೆಲೆ ತೆರಬೇಕು ಎಂದರೆ ಪೊಲೀಸ್ ಮತ್ತು ಕಾನೂನಿನ ಮೂಲಕವಾಗಿ ಮುಂದೆ ನಡೆಯಬೇಕು.

3. ಗಂಭೀರ ವಿಷಯವೆಂದರೆ, ಸಂತ್ರಸ್ತರ ಜೀವಕ್ಕೆ ಬೆಲೆಗೊಡದೆ, ಅವರ ನೋವನ್ನು ಪರಿಗಣಿಸದೆ ಆದ್ಯತೆಯನ್ನು ಹಣಕ್ಕೆ ನೀಡುತ್ತಾ ಚೌಕಾಶಿ ಮಾಡುತ್ತಾ ನಿಲ್ಲುವುದು ಜೀವಕ್ಕೆ ಮಾಡುವ ಅವಮಾನ ಮತ್ತು ನೋವಿಗೆ ಮಾಡುವ ವ್ಯಂಗ್ಯ. ‘‘ಸೆಟ್ಲ್ ಮಾಡಿಕೊಳ್ಳಿ’’ ಎನ್ನುವುದು ಅತ್ಯಂತ ಅಪಮಾನಕರ ಮತ್ತು ಲಜ್ಜೆಗೇಡಿತನ. ನೋವನ್ನು ಪರಿಗಣಿಸದೆ, ಜೀವದ ಮೌಲ್ಯವನ್ನು ಗೌರವಿಸದೆ, ಚೌಕಾಶಿಯಲ್ಲಿ ಹಣವನ್ನು ಹಿಡಿದು ಜಗ್ಗಾಡುವುದನ್ನು ‘ಸೆಟ್ಲ್’ ಅನ್ನುತ್ತಾರೆ. ಮಾಡಿರುವ ಪಾಪವನ್ನು ಪರಿಹರಿಸಿಕೊಳ್ಳಲು ದೇವರ ಹುಂಡಿಗೆ ಹಣ ಹಾಕುವ ಜನರಲ್ಲವೇ ಇವರು? ನೈತಿಕ ಪ್ರಜ್ಞೆಯೂ ಇಲ್ಲ, ಅಪರಾಧ ಪ್ರಜ್ಞೆಯೂ ಇಲ್ಲ. ಮಾಡುವ ವೆಚ್ಚ, ಕೊಡುವ ಹಣವೆಲ್ಲಾ ಅನಿವಾರ್ಯದ ಮತ್ತು ಅಗತ್ಯದ ವಿಷಯಗಳು ನಿಜ. ಆದರೆ, ಆಡುವ ಮಾತಿನಲ್ಲಿ, ನೋಡುವ ಬಗೆಯಲ್ಲಿ, ನಡೆದುಕೊಳ್ಳುವ ರೀತಿಯಲ್ಲಿ, ಭಾವಿಸುವ ಪರಿಯಲ್ಲಿ ಜೀವ ಮತ್ತು ಜೀವಕ್ಕೆ ಕಾಡುವ ನೋವಿನ ಬಗ್ಗೆ ಕಿಂಚಿತ್ತು ಕಾಳಜಿಯೂ ಇಲ್ಲ, ಗೌರವವೂ ಇಲ್ಲ. ಇದು ಮನುಷ್ಯರ ಕುಲದಲ್ಲಿ ಗುರುತಿಸಿಕೊಂಡಿರುವ ನನ್ನ ಆಘಾತ. ಅಂದ ಹಾಗೆ ಅವನು ತನ್ನ ಪಾಪಪ್ರಜ್ಞೆಯಿಂದ ತಪ್ಪಿಸಿಕೊಳ್ಳಲು ಮಾಡಿಕೊಂಡ ಸೆಟ್ಲ್‌ಮೆಂಟ್ ರೂ. 1,500. ವ್ಯಕ್ತಿ ಹೀಗೆ ಭಾವ ಶೂನ್ಯನಾಗುವುದು ಅವನ ಮಾನಸಿಕ ಮತ್ತು ಭಾವನಾತ್ಮಕ ಅಗತ್ಯಗಳನ್ನು ಪೂರೈಸದೇ ಬರಿಯ ಭೌತಿಕ ಅಥವಾ ಆರ್ಥಿಕ ಅಗತ್ಯಗಳನ್ನು ಪೂರೈಸುವುದರಿಂದ ಮತ್ತು ಅದನ್ನೇ ಪ್ರಧಾನ ಎಂದುಕೊಂಡಿರುವುದರಿಂದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News