ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ವಿವಾದಾತ್ಮಕ ಟ್ವೀಟ್; ಚಿತ್ರ ನಿರ್ಮಾಪಕ ರಾಮ್‍ಗೋಪಾಲ್ ವರ್ಮಾ ವಿರುದ್ಧ ದೂರು

Update: 2022-06-26 03:02 GMT
ರಾಮ್‍ಗೋಪಾಲ್ ವರ್ಮಾ

ಹೊಸದಿಲ್ಲಿ: ತಮ್ಮ ಟ್ವೀಟ್‍ಗಳಿಂದ ಪದೇ ಪದೇ ತೊಂದರೆಗಳಿಗೆ ಸಿಲುಕಿಕೊಳ್ಳುವ ಚಿತ್ರ ನಿರ್ಮಾಪಕ ರಾಮ್‍ಗೋಪಾಲ್ ವರ್ಮಾ ಇದೀಗ ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಬಗ್ಗೆ ಮಾಡಿದ ಟ್ವೀಟ್‍ನಿಂದಾಗಿ ಹೊಸ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ ಎಂದು ndtv.com ವರದಿ ಮಾಡಿದೆ.

"ದ್ರೌಪದಿ ರಾಷ್ಟ್ರಪತಿಯಾದರೆ ಪಾಂಡವರು ಯಾರು? ಎಲ್ಲಕ್ಕಿಂತ ಮುಖ್ಯವಾಗಿ ಕೌರವರು ಯಾರು?" ಎಂದು ರಾಮ್‍ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದರು.

ಅವರ ಈ ಟ್ವೀಟ್ ವಿರುದ್ಧ ಬಿಜೆಪಿ ನಾಯಕ ಗುಡೂರ್ ನಾರಾಯಣ ರೆಡ್ಡಿ ದೂರು ನೀಡಿದ್ದು, ಎಸ್ಸಿ/ಎಸ್ಟಿ ಸಮುದಾಯವನ್ನು ಅವಮಾನಿಸಿದ ಆರೋಪ ಹೊರಿಸಲಾಗಿದೆ.

"ರಾಮ್‍ಗೋಪಾಲ್ ವರ್ಮಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಆ ಬಳಿಕ ಇಂಥ ಅವಮಾನಕಾರಿ ಹೇಳಿಕೆಗಳನ್ನು ಯಾರ ವಿರುದ್ಧವೂ ಮಾಡುವುದಿಲ್ಲ ಅಥವಾ ಇಂಥ ಟ್ವೀಟ್ ಮಾಡುವುದಿಲ್ಲ ಎನ್ನುವುದು ನನ್ನ ಭಾವನೆ" ಎಂದು ಗುಡೂರ್ ನಾರಾಯಣ ರೆಡ್ಡಿ ಹೇಳಿದ್ದಾರೆ.

ಆ ಬಳಿಕ ಸ್ಪಷ್ಟನೆ ನೀಡಿರುವ ಚಿತ್ರ ನಿರ್ಮಾಪಕ, "ಮಹಾಭಾರತದ ದ್ರೌಪದಿ ನನ್ನ ಫೇವರಿಟ್ ಪಾತ್ರ. ಆದರ ಅಂಥ ಅಪರೂಪದ ಹೆಸರಿನಿಂದಾಗಿ ನಾನು ಸಹ ಪಾತ್ರಗಳನ್ನು ನೆನಪಿಸಿಕೊಂಡಿದ್ದೇನೆ ಹಾಗೂ ಆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಯಾರ ಭಾವನೆಗಳನ್ನೂ ಘಾಸಿಗೊಳಿಸುವುದು ನನ್ನ ಉದ್ದೇಶವಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ರಾಮ್‍ಗೋಪಾಲ್ ವರ್ಮಾ ಅವರನ್ನು ತೆಲಂಗಾಣದ ಮತ್ತೊಬ್ಬ ಬಿಜೆಪಿ ಶಾಸಕ ಟೀಕಿಸಿದ್ದು, "ಕುಡಿದ ಅಮಲಿನ ಸ್ಥಿತಿಯಲ್ಲಿ" ಚಿತ್ರ ನಿರ್ಮಾಪಕ ಇಂಥ ಟ್ವೀಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇಂಥ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ರಾಮ್‍ಗೋಪಾಲ್ ವರ್ಮಾ ಸದಾ ಸುದ್ದಿಯಲ್ಲಿರಲು ಪ್ರಯತ್ನಿಸುತ್ತಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News