ಸಮಾನ ನೀತಿ ಸಂಹಿತೆ ಹಿಂದೂಗಳಿಗೂ ಒಪ್ಪಿಗೆಯೇ?

Update: 2022-06-26 05:54 GMT

ಕೇರಳದ ಹಿಂದೂಗಳು ಮತ್ತು ಕರ್ನಾಟಕದ ಪ್ರಭಾವಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಬಗ್ಗೆ ಯಾರಾದರೂ ಯೋಚಿಸಿದ್ದಾರೆಯೇ? ಸಮಾನ ನಾಗರಿಕ ಸಂಹಿತೆ ಎಂದರೆ ಸ್ಥಳೀಯ ಸಂಪ್ರದಾಯಗಳು ಮತ್ತು ಈ ಜನರಿಗೆ ಅನ್ವಯವಾಗುತ್ತಿದ್ದ ಸ್ಥಳೀಯ ಸಂಪ್ರದಾಯಗಳು ಮತ್ತು ಕಾನೂನುಗಳ ಅಂತ್ಯವೇ? ಉತ್ತರ ಭಾರತದಲ್ಲಿ ಹಿಂದೂಗಳು ಮದುವೆ ಸಮಾರಂಭದಲ್ಲಿ ಸಪ್ತಪದಿ ತುಳಿಯುವ ಸಂಪ್ರದಾಯವನ್ನು ಪಾಲಿಸುತ್ತಾರೆ ಹಾಗೂ ದಕ್ಷಿಣದಲ್ಲಿ ತಾಳಿ ಕಟ್ಟುತ್ತಾರೆ. ಸಮಾನ ನಾಗರಿಕ ಸಂಹಿತೆ ಎಂದರೆ ಸಮಾನ ಪದ್ಧತಿಗಳೇ?

ಮೋದಿ 2.0 ಸರಕಾರವು ಒಂದು ರೀತಿಯ ಅತಿ ಪೌರುಷದಿಂದ ಮುನ್ನುಗ್ಗುತ್ತಿದೆ. ಚುನಾವಣೆಗಳಲ್ಲಿ ನಿರಂತರವಾಗಿ ಯಶಸ್ಸು ಗಳಿಸುತ್ತಿರುವುದರಿಂದ ಬೀಗಿರುವ ಕೇಂದ್ರ ಸರಕಾರ ಮತ್ತು ಮೋದಿಯವರ ಪಕ್ಷದ ಆಡಳಿತವಿರುವ ರಾಜ್ಯಗಳು, ಹಿಂದಿನ ಯಾವ ಸರಕಾರಗಳೂ ಪ್ರವೇಶಿಸಲು ಧೈರ್ಯ ತೋರದ ಕ್ಷೇತ್ರಗಳಿಗೆ ಪ್ರವೇಶಿಸುವ ಅಪರೂಪದ ಹಪಾಹಪಿಯನ್ನು ತೋರಿಸುತ್ತಿವೆ.

ಇದಕ್ಕೆ ಉತ್ತಮ ಉದಾಹರಣೆ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ರಾಜಕೀಯ ಮರುವಿಂಗಡಣೆ. ಅದನ್ನು ಅತ್ಯಂತ ಬುದ್ಧಿವಂತಿಕೆಯಿಂದ, ನಿಗೂಢವಾಗಿ ಶಾಸನದ ಮೂಲಕ ಮಾಡಲಾಗಿದೆ. ಇಂತಹ ಕೃತ್ಯಗಳ ಕಾನೂನುಬದ್ಧತೆಗೆ ಸಂಬಂಧಿಸಿದ ವಿಷಯಗಳನ್ನು ಕಾಲಬದ್ಧವಾಗಿ ಎತ್ತಿಕೊಳ್ಳಲು ಮತ್ತು ತೀರ್ಪು ನೀಡಲು ನ್ಯಾಯಾಲಯಗಳಿಗೂ ಸಾಧ್ಯವಾಗುತ್ತಿಲ್ಲ. ಇದು ನಮ್ಮ ಆಡಳಿತಗಾರರಲ್ಲಿ ಮತ್ತಷ್ಟು ಧೈರ್ಯ ತುಂಬಿದೆ. ಹಾಗಾಗಿ, ‘‘ದೇವತೆಗಳು ಕಾಲಿಡಲು ಹೆದರುವ ಸ್ಥಳದಲ್ಲಿ ನಡೆಯುವ ಧೈರ್ಯವನ್ನು ಮೂರ್ಖರು ತೋರಿಸುತ್ತಾರೆ’’ ಎಂಬ ನಾಣ್ಣುಡಿ ಈಗ ಚುನಾವಣಾ ಯಶಸ್ಸುಗಳ ಬಿರುಗಾಳಿಯಲ್ಲಿ ಕೊಚ್ಚಿ ಹೋಗಿದೆ.

ಮೋದಿ ಸರಕಾರವು ತನ್ನ ಚುನಾವಣಾ ಪ್ರಣಾಳಿಕೆಗಳನ್ನು ಒಂದರ ನಂತರ ಒಂದರಂತೆ ಈಡೇರಿಸುತ್ತಾ ಸಾಗುತ್ತಿರುವಂತೆಯೇ, ಅದರ ಸಂಭಾವ್ಯ ಮುಂದಿನ ಕಾರ್ಯಸೂಚಿಯ ಬಗ್ಗೆ ಎಚ್ಚರಿಕೆಯನ್ನು ನೀಡಲು ಬಯಸುತ್ತೇನೆ. ಅದುವೇ ಸಮಾನ ನಾಗರಿಕ ಸಂಹಿತೆ.

ಚುನಾವಣಾ ವಿಷಯವಾಗಿ ಸಮಾನ ನಾಗರಿಕ ಸಂಹಿತೆ

ಉತ್ತರಾಖಂಡದಲ್ಲಿ ಆಡಳಿತ ವಿರೋಧಿ ಅಲೆ ಮತ್ತು ಒಳಜಗಳದಿಂದಾಗಿ ಬಿಜೆಪಿಯು ಹಿನ್ನಡೆ ಅನುಭವಿಸಿತ್ತು. ಪಕ್ಷದ ಒಳಜಗಳದಿಂದಾಗಿ ಎರಡು ಮುಖ್ಯಮಂತ್ರಿಗಳನ್ನು ಬದಲಿಸಲಾಗಿತ್ತು. ಕುತೂಹಲದ ಸಂಗತಿಯೆಂದರೆ, ರಾಜ್ಯದ ಮುಖ್ಯಮಂತ್ರಿಯು ‘ಸಮಾನ ನಾಗರಿಕ ಸಂಹಿತೆ’ಯನ್ನು ವಿಧಾನಸಭಾ ಚುನಾವಣಾ ವಿಷಯವಾಗಿ ಘೋಷಿಸಿದರು. ರಾಜ್ಯದ ಜನಸಂಖ್ಯೆಯಲ್ಲಿ ಹಿಂದೂಗಳೇ ಭಾರೀ ಬಹುಸಂಖ್ಯಾತರು. ಹಾಗಾಗಿ, ಇದನ್ನು ಚುನಾವಣಾ ವಿಷಯವಾಗಿ ಆರಿಸಿದ್ದು ಆಶ್ಚರ್ಯಕ್ಕೆ ಕಾರಣವಾಗಿತ್ತು. ಆದರೆ, ಅದಕ್ಕೂ ಹೆಚ್ಚಿನ ಅಚ್ಚರಿಯೆಂದರೆ, ಪಕ್ಷವು ಸುಲಭವಾಗಿ ಮರಳಿ ಅಧಿಕಾರಕ್ಕೆ ಬಂತು. ಅಧಿಕಾರಕ್ಕೆ ಬಂದ ಕೂಡಲೇ ಮುಖ್ಯಮಂತ್ರಿ ಮಾಡಿದ ಮೊದಲ ಕೆಲಸವೆಂದರೆ, ಸಮಾನ ನಾಗರಿಕ ಸಂಹಿತೆಯನ್ನು ಹೇಗೆ ಜಾರಿಗೆ ತರಬೇಕು ಎನ್ನುವ ವಿಷಯದಲ್ಲಿ ಸಲಹೆ ನೀಡಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶೆ ರಂಜನಾ ದೇಸಾಯಿ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿದ್ದು.

ಸಂವಿಧಾನವು ಸಮಾನ ನಾಗರಿಕ ಸಂಹಿತೆಯನ್ನು ಯಾಕೆ ದೂರವಿಟ್ಟಿತು?

ಪಾಕಿಸ್ತಾನ ನಿರ್ಮಾಣ ಚಳವಳಿಯು ನಮ್ಮ ಸಂವಿಧಾನ ರಚನೆ ಪ್ರಕ್ರಿಯೆಯನ್ನು ಹಲವು ತಿಂಗಳುಗಳ ಕಾಲ ಒತ್ತೆಯಾಳಾಗಿರಿಸಿತ್ತು. ಮುಹಮ್ಮದಲಿ ಜಿನ್ನಾರ ಮುಸ್ಲಿಮ್ ಲೀಗ್ ಸಂವಿಧಾನ ರಚನಾ ಸಭೆ ಕಾರ್ಯನಿರ್ವಹಿಸಲು ಬಿಡಲಿಲ್ಲ. ಜಿನ್ನಾಗೆ ಕೊನೆಗೂ ಅವರ ಪಾಕಿಸ್ತಾನವನ್ನು ನೀಡಿದ ಬಳಿಕ, ಪುನರ್‌ರಚಿತ ಸಂವಿಧಾನ ರಚನಾ ಸಭೆಯು, ದೇಶ ವಿಭಜನೆ, ಭೀಕರ ಜನಾಂಗೀಯ ಹತ್ಯೆ ಮತ್ತು ಸಮುದಾಯಗಳ ಬೃಹತ್ ವಲಸೆಗಳ ದಟ್ಟ ನೆರಳಿನಲ್ಲಿ ಭಾರತದ ಭವಿಷ್ಯದ ಸಾಂವಿಧಾನಿಕ ವ್ಯವಸ್ಥೆಯ ಕುರಿತ ಸಮಾಲೋಚನೆ ಪ್ರಕ್ರಿಯೆಗಳನ್ನು ಮುಂದುವರಿಸಿತು. ಭಾರತದ ನೈತಿಕ ಶ್ರೇಷ್ಠತೆಯು ಅದರ ಸರ್ವರನ್ನೂ ಒಳಗೊಳಿಸುವಿಕೆಯ ಗುಣದಿಂದ ಬಂದಿದೆ ಎಂಬುದಾಗಿ ಅಭಿಪ್ರಾಯ ಪಡಲಾಗಿದೆ.

ಭಾರತದ ಮುಸ್ಲಿಮರ ಏಕೈಕ ವಕ್ತಾರ ತಾನು ಎಂಬ ಜಿನ್ನಾರ ಹಠದಿಂದಾಗಿ ಮಧ್ಯಂತರ ಸಚಿವ ಸಂಪುಟರಚನಾ ಪ್ರಕ್ರಿಯೆಯು ಹೇಗೆ ಹಳಿ ತಪ್ಪಿತು ಎನ್ನುವುದನ್ನು ನಮ್ಮ ಸ್ಥಾಪಕ ಪಿತೃಗಳು (ಮತ್ತು ರಾಜಕುಮಾರಿ ಅಮೃತಾ ಕೌರ್ ಮುಂತಾದ ಕೆಲವು ಸ್ಥಾಪಕ ಮಾತೃಗಳು) ನೆನಪಿಸಿಕೊಳ್ಳುತ್ತಾರೆ.

ವೈಸ್‌ರಾಯ್‌ರ ಸಚಿವ ಸಂಪುಟದಲ್ಲಿರುವ ಎಲ್ಲ ಮುಸ್ಲಿಮ್ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನೇಮಿಸುವ ಹಕ್ಕು ಮುಸ್ಲಿಮ್ ಲೀಗ್‌ಗೆ ಬೇಕು ಎಂಬುದಾಗಿ ಜಿನ್ನಾ ಬಯಸಿದರು. ಅಷ್ಟೇ ಅಲ್ಲದೆ, ಆಝಾದ್‌ರನ್ನು ನೇಮಿಸಲು ಕಾಂಗ್ರೆಸ್ ತನ್ನದೇ ಕೋಟಾವನ್ನು ಬಳಸುವುದನ್ನೂ ಅವರು ತೀವ್ರವಾಗಿ ವಿರೋಧಿಸಿದರು. ಆಝಾದ್ ಹಿಂದೂ ಪಕ್ಷದ ‘‘ಪ್ರದರ್ಶನ ಮಾದರಿ’’ಯಷ್ಟೆ ಎಂದರು.

ಅಂತಿಮವಾಗಿ, ಎಲ್ಲ ಭಾರತೀಯರಿಗೆ ಸೇರಿದ ಹಾಗೂ ಯಾವುದೇ ಸಮುದಾಯದ ಏಕೈಕ ವಕ್ತಾರ ಎಂಬುದಾಗಿ ಯಾವುದೇ ವ್ಯಕ್ತಿ ಅಥವಾ ಪಕ್ಷ ಹೇಳಿಕೊಳ್ಳಲು ಸಾಧ್ಯವಾಗದ ಸರಕಾರವಿರುವ ದೇಶವೊಂದನ್ನು ರೂಪಿಸಲು ಸಂವಿಧಾನ ನಿರ್ಮಾತೃಗಳಿಗೆ ಸಾಧ್ಯವಾಯಿತು. ಆದರೆ, ನಾಗರಿಕ ಸಂಹಿತೆಯ ವಿಷಯಕ್ಕೆ ಬಂದಾಗ, ಆಶ್ಚರ್ಯವೆಂಬಂತೆ ಸಂವಿಧಾನ ರಚನಾ ಸಭೆಯು ರಾಜಿಗೆ ಮುಂದಾಯಿತು. ಅದನ್ನು ಜಾರಿ ಕಡ್ಡಾಯವಲ್ಲದ ಗುರಿಯನ್ನಾಗಿ ಸಂವಿಧಾನದಲ್ಲಿ ಸೇರ್ಪಡೆಗೊಳಿಸಲಾಯಿತು.

ವಿಭಜನೆಯ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದ ಅಲ್ಪಸಂಖ್ಯಾತ ಸಮುದಾಯವು ಇಂಥ ಕ್ರಾಂತಿಕಾರಿ ಬದಲಾವಣೆಗೆ ಸಿದ್ಧವಾಗಿರಲಿಲ್ಲ. ಮುಂದೊಂದು ದಿನ ಸಮುದಾಯದ ಒಳಗಿನಿಂದಲೇ ಇಂಥ ಬೇಡಿಕೆ ಬರುವವರೆಗೆ ವಿಷಯವನ್ನು ಅದು ಮುಂದೂಡಿತು.

ಈಗ, ಭಾರತೀಯ ಮುಸ್ಲಿಮರ ‘ಏಕೈಕ ವಕ್ತಾರ’ ಇಲ್ಲದಿದ್ದರೆ, ಈ ಬೇಡಿಕೆಯನ್ನು ಮುಂದಿಡುವವರು ಯಾರು?

ತ್ರಿವಳಿ ತಲಾಖ್

ತ್ರಿವಳಿ ತಲಾಖನ್ನು ಮೊದಲು ನ್ಯಾಯಾಲಯಗಳು ಮತ್ತು ಬಳಿಕ ಸಂಸತ್ತು ಅಪರಾಧವನ್ನಾಗಿಸಿತು. ಹಿಂದಿನ ಶಾ ಬಾನು ಪ್ರಕರಣಕ್ಕೆ ಹೋಲಿಸಿದರೆ ಇದಕ್ಕೆ ಸಮುದಾಯದಿಂದ ವ್ಯಕ್ತವಾದ ಪ್ರತಿಕ್ರಿಯೆ ತೀರಾ ಭಿನ್ನವಾಗಿತ್ತು. ಇದು ಭಿನ್ನ ಭಾರತವಾಗಿತ್ತು.

ಇದು ಆಡಳಿತ ಪಕ್ಷವನ್ನು ಮತ್ತಷ್ಟು ಹುರಿದುಂಬಿಸಿತು. ಸಮಾನ ನಾಗರಿಕ ಸಂಹಿತೆಯು ಈ ಸರಕಾರ ಕಠಿಣವಾಗಿದೆ ಎನ್ನುವ ಅಭಿಪ್ರಾಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ಭಾವನೆಯಿದೆ. ಸಮಾನ ನಾಗರಿಕ ಸಂಹಿತೆಯು ಬಹುಸಂಖ್ಯಾತರಿಗಿಂತಲೂ ಹೆಚ್ಚು ಅಲ್ಪಸಂಖ್ಯಾತರ ಮೇಲೆ ಪರಿಣಾಮ ಬೀರುತ್ತದೆ ಎಂಬ ಲೆಕ್ಕಾಚಾರವಿದೆ.

ಹಿಂದೂಗಳು ನಿಜವಾಗಿಯೂ ಸಮಾನ ನಾಗರಿಕ ಸಂಹಿತೆಯನ್ನು ಸ್ವೀಕರಿಸುವರೇ?

ಇದು ಮುಂದೆ ಏನಾಗುತ್ತದೆ ಎನ್ನುವುದು ಕುತೂಹಲಕರವಾಗಿದೆ. ಭಾರತೀಯ ಹಿಂದುಗಳಲ್ಲಿ ಬಹುಪತ್ನಿತ್ವವು ಮುಸ್ಲಿಮರಿಗಿಂತಲೂ ಹೆಚ್ಚು ಚಾಲ್ತಿಯಲ್ಲಿದೆ ಎನ್ನುವುದು ವಾಸ್ತವ. ಮಾದರಿಯ ಬಗ್ಗೆ ಹೇಳುವುದಾದರೆ, ಯಾವ ಮಾದರಿ ಸೂಕ್ತವಾಗುತ್ತದೆ? ಗೋವಾದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಪೋರ್ಚುಗೀಸ್ ಸಮಾನ ಸಂಹಿತೆಯನ್ನು ಪರಿಗಣಿಸಲಾಗುತ್ತದೆಯೇ? ಈ ಮಾದರಿಯಡಿಯಲ್ಲಿ, ಮದುವೆಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕಾಗುತ್ತದೆ ಮತ್ತು ಅದು ಮದುವೆ ಆದ ತಕ್ಷಣ ಹಿಂದೂ ಪತ್ನಿಗೆ ಗಂಡನ ಆಸ್ತಿಯಲ್ಲಿ ಅರ್ಧ ಪಾಲನ್ನು ನೀಡುತ್ತದೆ. ಹಿಂದೂ ಅವಿಭಕ್ತ ಕುಟುಂಬಕ್ಕೆ ಏನಾಗುತ್ತದೆ? ಹಿಂದೂ ಅವಿಭಕ್ತ ಕುಟುಂಬ ಎನ್ನುವುದು ಆಡಳಿತಾರೂಢ ಪಕ್ಷದ ಹೆಚ್ಚಿನ ನಿಷ್ಠ ಬೆಂಬಲಿಗರಿಗೆ ತೆರಿಗೆ ತಪ್ಪಿಸುವ ಮತ್ತು ಉದ್ಯಮಗಳನ್ನು ರೂಪಿಸುವ ಕಲ್ಪನೆಯಾಗಿದೆ. ಸಮಾನ ನಾಗರಿಕ ಸಂಹಿತೆಗೆ ಹಿಂದೂ ಅವಿಭಕ್ತ ಕುಟುಂಬ ಬಲಿಯಾಗುವುದೇ?

ಪಂಜಾಬ್‌ನ ಹಿಂದೂಗಳ ಕೃಷಿ ಭೂಮಿಗಳ ಬಗ್ಗೆ ಮಾತನಾಡೋಣ. ಕುಟುಂಬದ ಹಿರಿಯ ಗಂಡಿಗೆ ಕೃಷಿ ಭೂಮಿ ವರ್ಗಾವಣೆಯಾಗುವ ನಿಯಮ ಅಲ್ಲಿ ಜಾರಿಯಲ್ಲಿದೆ. ಇತರ ಸಹೋದರ-ಸಹೋದರಿಯರು ಯಾರಿಗೂ ಸಿಗುವುದಿಲ್ಲ. ಕೃಷಿ ಭೂಮಿಗಳ ವರ್ಗಾವಣೆ ಕಾನೂನು ಸಮಾನವಾಗಿರುತ್ತದೆಯೇ? ಈಶಾನ್ಯ ರಾಜ್ಯಗಳ ಹಿಂದೂಗಳು ಮತ್ತು ಬುಡಕಟ್ಟು ಜನರು ಈಗಲೂ ಬುಡಕಟ್ಟು ಕಾನೂನುಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಅವರ ಸ್ಥಿತಿ ಏನು? ಸಮಾನ ನಾಗರಿಕ ಸಂಹಿತೆಯು ಬಂಗಾಳಕ್ಕೂ ಆಚೆ ವಿಸ್ತರಿಸುವುದೇ?

ಕೇರಳದ ಹಿಂದೂಗಳು ಮತ್ತು ಕರ್ನಾಟಕದ ಪ್ರಭಾವಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಬಗ್ಗೆ ಯಾರಾದರೂ ಯೋಚಿಸಿದ್ದಾರೆಯೇ? ಸಮಾನ ನಾಗರಿಕ ಸಂಹಿತೆ ಎಂದರೆ ಸ್ಥಳೀಯ ಸಂಪ್ರದಾಯಗಳು ಮತ್ತು ಈ ಜನರಿಗೆ ಅನ್ವಯವಾಗುತ್ತಿದ್ದ ಸ್ಥಳೀಯ ಸಂಪ್ರದಾಯಗಳು ಮತ್ತು ಕಾನೂನುಗಳ ಅಂತ್ಯವೇ? ಉತ್ತರ ಭಾರತದಲ್ಲಿ ಹಿಂದೂಗಳು ಮದುವೆ ಸಮಾರಂಭದಲ್ಲಿ ಸಪ್ತಪದಿ ತುಳಿಯುವ ಸಂಪ್ರದಾಯವನ್ನು ಪಾಲಿಸುತ್ತಾರೆ ಹಾಗೂ ದಕ್ಷಿಣದಲ್ಲಿ ತಾಳಿ ಕಟ್ಟುತ್ತಾರೆ. ಸಮಾನ ನಾಗರಿಕ ಸಂಹಿತೆ ಎಂದರೆ ಸಮಾನ ಪದ್ಧತಿಗಳೇ?

ಮದುವೆ ಕಾನೂನುಗಳಿಗೆ ಸುಧಾರಣೆ ಬೇಕು

ಅಂಬೇಡ್ಕರ್ ಎಲ್ಲ ವಿರೋಧಗಳನ್ನು ನಿರ್ಲಕ್ಷಿಸಿ ಹಿಂದೂ ಸಂಹಿತೆಯು ಅಪರಿಪೂರ್ಣ ರೂಪದಲ್ಲಿ ಅಂಗೀಕಾರಗೊಳ್ಳುವಂತೆ ಮಾಡಿದರು. ಹಿಂದೂ ಉತ್ತರಾಧಿಕಾರ ಕಾಯ್ದೆಯು ಹಿಂದೂ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಿದೆ. ಆದರೆ, ಹಿಂದೂ ತಂದೆ ಅಥವಾ ಗಂಡ ಮಹಿಳೆಯರನ್ನು ತನ್ನ ಉತ್ತರಾಧಿಕಾರಿಯಾಗಿ ಮಾಡದಿರಲು ಅಥವಾ ಅವರ ಹಕ್ಕುಗಳನ್ನು ಕಡಿಮೆಗೊಳಿಸಲು ಕಾನೂನಿನಲ್ಲಿ ಅವಕಾಶವಿದೆ.

ಆದರೆ, ಇದಕ್ಕೆ ಭಿನ್ನವಾಗಿ ಶರಿಯಾದ ಪ್ರಕಾರ ಓರ್ವ ವ್ಯಕ್ತಿಯು ತನ್ನ ಪತ್ನಿ ಮತ್ತು ಮಗಳಿಗೆ ಪುರುಷ ಉತ್ತರಾಧಿಕಾರಿಗೆ ಸಿಗುವ ಆಸ್ತಿಯ ಅರ್ಧದಷ್ಟನ್ನು ನೀಡಬೇಕಾಗುತ್ತದೆ. ಅದೂ ಅಲ್ಲದೆ, ಕೇವಲ ವೀಲುನಾಮೆಯಲ್ಲಿ ಕೊಡುವಂತೆ ಮಾಡಿ ಮಹಿಳೆಯರ ಪಾಲನ್ನು ಪುರುಷನು ಲಪಟಾಯಿಸುವುದನ್ನೂ ಶರಿಯಾ ನಿಷೇಧಿಸುತ್ತದೆ. ಹಾಗಾದರೆ, ಸಮಾನ ನಾಗರಿಕ ಸಂಹಿತೆ ಕಾನೂನು ಯಾವ ಮಾದರಿಯನ್ನು ಅನುಸರಿಸುತ್ತದೆ?

ಕೃಪೆ: thequint.com

Writer - ಸಂಜಯ್ ಘೋಷ್

contributor

Editor - ಸಂಜಯ್ ಘೋಷ್

contributor

Similar News