ತಿಂಗಳ ನಾಲ್ಕನೇ ರವಿವಾರ ಠಾಣೆಗಳಲ್ಲೇ ಎಸ್ಸಿ-ಎಸ್ಟಿ ಸಭೆ: ಋಷಿಕೇಶ್ ಭಗವಾನ್ ಸೋಣಾವನೆ

Update: 2022-06-26 11:47 GMT

ಮಂಗಳೂರು, ಜೂ.26: ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಳ್ಳುವ ಸಲುವಾಗಿ ಪ್ರತೀ ತಿಂಗಳ ನಾಲ್ಕನೇ ರವಿವಾರ ಠಾಣೆಗಳಲ್ಲೇ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆಗಳನ್ನು ಆಯೋಜಿಸಲಾಗುವುದು ಎಂದು ದ.ಕ.ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋಣಾವನೆ ತಿಳಿಸಿದ್ದಾರೆ.

ನಗರದ ಎಸ್ಪಿ ಕಚೇರಿಯ ಸಭಾಂಗಣದಲ್ಲಿ ರವಿವಾರ ನಡೆದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಹೆಚ್ಚಿನ ಠಾಣೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದುಕೊರತೆ ಸಭೆ ಸಕಾಲಕ್ಕೆ ನಡೆಯುತ್ತಿಲ್ಲ. ನಡೆಸುವುದಿದ್ದರೂ ಮುಂಚಿನ ದಿನ ರಾತ್ರಿ ಮಾಹಿತಿ ನೀಡಲಾಗುತ್ತದೆ. ಇದರಿಂದ ದಲಿತರು ಎದರಿಸುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ದಲಿತ ಮುಖಂಡರು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಮುಂದಿನ ತಿಂಗಳಿನಿಂದ ಪ್ರತೀ ಠಾಣೆಯಲ್ಲೂ ನಾಲ್ಕನೇ ರವಿವಾರ ಪೂ.11ಕ್ಕೆ ಸಭೆಗಳನ್ನು ನಡೆಸಲು ಕ್ರಮ ಜರಗಿಸಲಾಗುವುದು. ತಮ್ಮ ಅಹವಾಲುಗಳನ್ನು ಅಲ್ಲೇ ಹೇಳಬಹುದು. ಠಾಣಾ ಮಟ್ಟದಲ್ಲಿ ಪರಿಹಾರ ಸಿಗದಿದ್ದರೆ ಡಿವೈಎಸ್ಪಿ ಹಂತದ ಸಭೆಯಲ್ಲಿ ಪರಿಹಾರ ಕಲ್ಪಿಸಲಾಗುವುದು. ಅಲ್ಲೂ ನ್ಯಾಯ ಸಿಗದಿದ್ದರೆ ಜಿಲ್ಲಾ ಮಟ್ಟದ ಸಭೆಯಲ್ಲಿ ಸಮಸ್ಯೆಗಳನ್ನು ಪ್ರಸ್ತಾಪಿಸಿ ನ್ಯಾಯ ಪಡೆಯಬಹುದಾಗಿದೆ ಎಂದು ಹೇಳಿದರು.

*ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೂತ್ಕುಂಜ ಗ್ರಾಮದ ವಿದ್ಯಾರ್ಥಿಗೆ ಸರಕಾರಿ ಶಾಲೆಯ ಶಿಕ್ಷಕರು ಹಲ್ಲೆ ನಡೆಸಿದ್ದರು. ಈ ಬಗ್ಗೆ ದೂರು ನೀಡಲು ಹೋದ ವಿದ್ಯಾರ್ಥಿ ಮತ್ತಾತನ ತಾಯಿಯನ್ನು ರಾತ್ರಿ 12ರವರೆಗೂ ಠಾಣೆಯಲ್ಲೇ ಕುಳ್ಳಿರಿಸಲಾಗಿದೆ. ಅವರು ಠಾಣೆಯಿಂದ ಸುಮಾರು 25 ಕಿ.ಮೀ. ದೂರವಿರುವ ತಮ್ಮ ಮನೆಗೆ ತೆರಳಲು ತುಂಬಾ ಪ್ರಯಾಸ ಪಟ್ಟಿದ್ದಾರೆ. ಪೊಲೀಸರ ಈ ನಡೆ ಖಂಡನೀಯ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಮುಖಂಡ ವಿಶ್ಚನಾಥ ಅಲೆಕ್ಕಾಡಿ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಸಂಜೆ 6 ಗಂಟೆಯ ಬಳಿಕ ಮಕ್ಕಳನ್ನೂ ಅವರ ಮನೆಯಲ್ಲೇ ವಿಚಾರಣೆ ನಡೆಸಬೇಕಿದೆ. ಪೊಲೀಸರು ರಾತ್ರಿ 12ರವರೆಗೆ ಠಾಣೆಯಲ್ಲಿ ವಿದ್ಯಾರ್ಥಿಯನ್ನು ಕುಳ್ಳಿರಿಸಿದ್ದು ಸರಿಯಲ್ಲ. ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

*ನಾಲ್ಕು ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುವ ಮಂಗಳೂರಿನಲ್ಲಿ ಕಚೇರಿ ಹೊಂದಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಸಿಬ್ಬಂದಿಯ ಕೊರತೆಯಿದೆ. ಯಾವುದೇ ಅರ್ಜಿ ಸಕಾಲದಲ್ಲಿ ವಿಲೇವಾರಿಯಾಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನ ಸೆಳೆಯಬೇಕು ಎಂದು ವಿಶ್ವನಾಥ ಅಲೆಕ್ಕಾಡಿ ಮನವಿ ಮಾಡಿದರು.

*ಬಂಟ್ವಾಳ ತಾಲೂಕಿನ ಬುಡೋಳಿ, ರಾಯಿ, ಕೊಯಿಲ ಮತ್ತಿತರ ಕಡೆ ದಲಿತರಿಗೆ ಮೀಸಲಿಟ್ಟ ಜಮೀನನ್ನು ಅರಣ್ಯ ಇಲಾಖೆಯವರು ಅತಿಕ್ರಮಿಸಿ ಗಿಡಗಳನ್ನು ನೆಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಮೀಸಲು ಜಮೀನು ದಲಿತರಿಗೆ ಸಿಗುವಂತೆ ಮಾಡಬೇಕು ಎಂದು ದಲಿತ ಮುಖಂಡ ಹಾಗೂ ನಿವೃತ್ತ ತಹಶೀಲ್ದಾರ್ ಎ. ಚಂದ್ರಕುಮಾರ್ ಒತ್ತಾಯಿಸಿದರು.


ಪೊಲೀಸ್ ಬೀಟ್ ವ್ಯವಸ್ಥೆಗೆ ಬಲ

ಪ್ರತೀ ಠಾಣಾ ವ್ಯಾಪ್ತಿಯ ಬೀಟ್ ವ್ಯವಸ್ಥೆಗಿದ್ದ ಸಿಬ್ಬಂದಿ ಕೊರತೆಯನ್ನು ನೀಗಿಸಲಾಗುವುದು. ಪ್ರತೀ ಬೀಟ್‌ಗೆ ತಲಾ ಇಬ್ಬರು ಪೊಲೀಸರನ್ನು ನಿಯುಕ್ತಿಗೊಳಿಸಲಾಗುವುದು. ಪೊಲೀಸರು ತಿಂಗಳಿಗೆ ಎರಡು ಬಾರಿ ಕಡ್ಡಾಯವಾಗಿ ನಿಗದಿತ ಸ್ಥಳಗಳಲ್ಲಿ ಗಸ್ತು ನಿರತರಾಗಬೇಕು. ಈ ಬೀಟ್ ಪೊಲೀಸರನ್ನು ಠಾಣೆಯ ಇತರ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳುವುದಿಲ್ಲ ಎಂದು ಎಸ್ಪಿ ಋಷಿಕೇಶ್ ಭಗವಾನ್ ಸೋಣಾವನೆ ಸುದ್ದಿಗಾರರಿಗೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News