ಪಠ್ಯದಲ್ಲಿ ನಾರಾಯಣಗುರು ವಿಚಾರ ಸೇರ್ಪಡೆಗೊಳಿಸದಿದ್ದರೆ ಹೋರಾಟ: ಬಿಲ್ಲವ ಸಂಘಗಳ ಪ್ರತಿನಿಧಿಗಳ ಸಭೆ ಎಚ್ಚರಿಕೆ

Update: 2022-06-26 13:32 GMT

ಮಂಗಳೂರು : ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ವಿಚಾರವನ್ನು ಸೇರ್ಪಡೆಗೊಳಿಸಲು ರಾಜ್ಯ ಸರಕಾರ ಕ್ರಮ ಜರಗಿಸದೇ ಇದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾ ಗುವುದು ಎಂದು  ಅಖಿಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ ಎಚ್ಚರಿಸಿದ್ದಾರೆ.

ನಗರದ ನಾರಾಯಣಗುರು ಕಾಲೇಜಿನಲ್ಲಿ ರವಿವಾರ ನಡೆದ ಬಿಲ್ಲವ ಸಂಘಗಳ ಪ್ರತಿನಿಧಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಬ್ರಹ್ಮಶ್ರೀ ನಾರಾಯಣಗುರು ಒಂದು ಜಾತಿ, ವರ್ಗ, ಧರ್ಮಕ್ಕೆ ಸೀಮಿತವಾಗಿ ಬೆಳೆದವರಲ್ಲ. ಮೂಢನಂಬಿಕೆ, ಜಾತೀಯತೆ, ಗುಲಾಮಗಿರಿ, ಅಸ್ಪ್ರಶ್ಯತೆ, ಬಾಲ್ಯವಿವಾಹ ಪದ್ಧತಿ ಇತ್ಯಾದಿ ಅನಿಷ್ಟ ಆಚರಣೆಗಳ ವಿರುದ್ಧ ಧ್ವನಿಯಾಗಿ ವಿಶ್ವಕ್ಕೆ ಬೆಳಕಾದವರು. ಇಂತಹ ಸಾಮಾಜಿಕ ಸುಧಾರಕರ ಪಠ್ಯವನ್ನು ಸರಕಾರ ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಕೈಬಿಟ್ಟು ಅವಮಾನಿಸಿದೆ. ಕೂಡಲೇ ರಾಜ್ಯ ಸರಕಾರ ಸಮಾಜ ವಿಜ್ಞಾನದಲ್ಲೇ ಪಠ್ಯವನ್ನು ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ಪೀಠಾಧಿಪತಿ ವಿಖ್ಯಾತನಂದ ಸ್ವಾಮೀಜಿ ಮಾತನಾಡಿ, ರಾಜ್ಯ ಸರಕಾರ ಪಠ್ಯ ಕೈಬಿಡುವ ಮೂಲಕ ನಾರಾಯಣ ಗುರುಗಳನ್ನು ಅವಮಾನಿಸಿದ್ದರಿಂದ ಬಿಲ್ಲವ ಸಮುದಾಯಕ್ಕೆ ನೋವಾಗಿದೆ. ನಾರಾಯಣಗುರುಗಳ ವಿಚಾರಧಾರೆಯನ್ನು ಸ್ಥಾಪಿತ ಹಿತಾಸಕ್ತಿಗಳು ಮೂಲೆಗುಂಪು ಮಾಡುವ ಹುನ್ನಾರ ಮಾಡುತ್ತಿದ್ದಾರೆ. ಇಂತಹ ಸಂದರ್ಭ ಸಮಾಜ ಸಂಘಟಿತವಾಗಿ ಶಕ್ತಿಪ್ರದರ್ಶನ ಮಾಡಬೇಕಿದೆ ಎಂದರು.

ನಾರಾಯಣಗುರು ಯುವ ವೇದಿಕೆ ಮುಖಂಡ ಎಂ.ಎಸ್. ಕೋಟ್ಯಾನ್ ಮಾತನಾಡಿ ‘ಗುರುಗಳ ವಿಚಾರಧಾರೆ ಮತ್ತು ಪ್ರಸ್ತುತ ಅನಿವಾರ್ಯತೆ’ ಬಗ್ಗೆ ವಿಚಾರ ಮಂಡಿಸಿದರು.

ವೇದಿಕೆಯಲ್ಲಿ ಆತ್ಮಶಕ್ತಿ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಆಡಳಿತ ಮೊಕ್ತೇಸರ ಚಿತ್ತರಂಜನ್ ಕೆ., ಮಡಿಕೇರಿ ಬಿಲ್ಲವ ಸಂಘದ ನಿಕಟಪೂರ್ವ ಅಧ್ಯಕ್ಷ ರಾಜಶೇಖರ್, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಟ್ರಸ್ಟಿ  ಶೇಖರ್ ಪೂಜಾರಿ ಉಪಸ್ಥಿತರಿದ್ದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.

೧೦ನೆ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲೇ ನಾರಾಯಣಗುರು ಪಠ್ಯ ಸೇರ್ಪಡೆ ಮಾಡಬೇಕು, ನಾರಾಯಣ ಗುರು ನಿಗಮ ಮಂಡಳಿ ಸ್ಥಾಪಿಸಬೇಕು, ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ತಲಾ ೪ ಲಕ್ಷ ರೂ. ಅನುದಾನ ನೀಡಲಾಗುತ್ತಿದ್ದು, 3 ವರ್ಷದಿಂದ ಸಿಗುತ್ತಿಲ್ಲ. ಸರಕಾರ ತಕ್ಷಣ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು ಎಂದು ಸಭೆ ನಿರ್ಣಯಿಸಿದೆ.

ಈ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮುಖ್ಯಮಂತ್ರಿಗಳ ಭೇಟಿ ಮಾಡುವುದು ಮತ್ತು ೧೫ ದಿನದೊಳಗೆ ಸರಕಾರ ಸ್ಪಂದಿಸದಿದ್ದರೆ ಹಿಂದುಳಿದ ವರ್ಗಗಳು ಒಂದಾಗಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂಬ ನಿರ್ಣಯವನ್ನು ಅಖಿಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News