ದೇರಳಕಟ್ಟೆಯಲ್ಲಿ ರಕ್ತದಾನ ಶಿಬಿರ

Update: 2022-06-26 13:49 GMT

ದೇರಳಕಟ್ಟೆ: ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ದೇರಳಕಟ್ಟೆ ಇದರ ಆಶ್ರಯದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ದೇರಳಕಟ್ಟೆ ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ರವಿವಾರ ನಡೆಯಿತು.

ದುಆ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಬದ್ರಿಯಾ ಜುಮ್ಮಾ ಮಸೀದಿ ಖತೀಬ್ ಇಸ್ಹಾಕ್ ಫೈಝಿ ಮಾತನಾಡಿ, ರಕ್ತದಾನದಲ್ಲಿ ಜಾತಿ ಧರ್ಮ ಇಲ್ಲ. ಇಸ್ಲಾಂ ರಕ್ತದಾನಕ್ಕೆ ಪ್ರೋತ್ಸಾಹ ನೀಡಿದೆ. ಬುದ್ಧಿವಂತರ ಜಿಲ್ಲೆಯಲ್ಲಿ ಎಲ್ಲರೂ ಸೌಹಾರ್ದತೆಗೆ ಒತ್ತು ಕೊಟ್ಟವರು. ಇದನ್ನು ಉಳಿಸಬೇಕಾದ ಜವಾಬ್ದಾರಿ ನಮ್ಮದು ಎಂದು ಹೇಳಿದರು.

ವಿವಿ ಪ್ರಾಧ್ಯಾಪಕ ಡಾ.ನಾಗಪ್ಪ ಗೌಡ ಮಾತನಾಡಿ, ರಕ್ತಕ್ಕೆ ಜಾತಿ ಧರ್ಮ ಇಲ್ಲದಿದ್ದರೂ ಸಮಾಜದಲ್ಲಿ ಕೆಲವು ಬಿನ್ನ ರೀತಿಯಲ್ಲಿ ನೋಡಲಾಗುತ್ತದೆ. ಆದರೆ ನಮ್ಮದು ಮಾನವ ಧರ್ಮ ಎಂದು ತಿಳಿದು ಕೊಳ್ಳಬೇಕು. ನಾವು ಮಾನವೀಯ ಮೌಲ್ಯಗಳನ್ನು ಕಳೆದು ಕೊಳ್ಳುತ್ತಿದ್ದೇವೆ. ಸಮಾಜ ಯಾವ ದಿಕ್ಕಿಗೆ ಸಾಗುತ್ತಿದೆ ಎಂದು ನೋಡಿದರೆ ಆತಂಕ ಆಗುತ್ತದೆ. ಮನುಷ್ಯ ಸಂಬಂಧ ಅಗತ್ಯ ಆಗಿ ಇರಬೇಕು. ಇದಕ್ಕೆ ಶಿಕ್ಷಣ  ವ್ಯವಸ್ಥೆ ಬೆಳೆಸಿ ಸಮಾಜ ಕಟ್ಟುವ ಕೆಲಸ ನಾವು ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಹಾಜಿ, ಉಪಾಧ್ಯಕ್ಷ ಹಸನ್ ಬಾವಾ ಎಂ.ಎಚ್, ಪ್ರ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಇಲ್ಯಾಸ್, ಕೋಶಾಧಿಕಾರಿ ಮೊಹಮ್ಮದ್,  ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷ ಸತ್ತಾರ್, ಸದಸ್ಯ ಇಕ್ಬಾಲ್ ಬೆಳ್ಮ, ಬ್ಲಡ್ ಲೈನ್  ನಾಸೀರ್ ಆರ್.ಬಿ, ಅಬ್ಬಾಸ್ ಹಾಜಿ ದೇರಳಕಟ್ಟೆ  ಮತ್ತಿತರರು ಉಪಸ್ಥಿತರಿದ್ದರು.

ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಕಾರ್ಯದರ್ಶಿ ಅಬ್ದುಲ್ ಲತೀಫ್  ಸ್ವಾಗತಿಸಿದರು.ಕಲೀಂ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News