ಅಗ್ನಿಪಥ್ ಯೋಜನೆ ದೇಶದ ಭದ್ರತೆಗೆ ಅಪಾಯ: ಪಲ್ಲಂ ರಾಜು

Update: 2022-06-26 14:43 GMT

ಬೆಂಗಳೂರು, ಜೂ. 26: ‘ಸೇನಾ ಸಾಮರ್ಥ್ಯ ಹಾಗೂ ದೇಶದ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಆದರೆ, ಕೇಂದ್ರ ರೂಪಿಸಿರುವ ‘ಅಗ್ನಿಪಥ್' ಯೋಜನೆ ಹಿಂಪಡೆಯಬೇಕು. ಸೇನೆಯ ಹೋರಾಟ ಸಾಮರ್ಥ್ಯ ಹಾಗೂ ಭದ್ರತೆ ವಿಚಾರದಲ್ಲಿ ಈ ಯೋಜನೆ ಮೂಲಕ ರಾಜಿ ಮಾಡಿಕೊಳ್ಳುವುದು ಸರಿಯಲ್ಲ' ಎಂದು ಕೆಂದ್ರದ ಮಾಜಿ ಸಚಿವ ಎಂ.ಎಂ.ಪಲ್ಲಂ ರಾಜು ಆಕ್ಷೇಪಿಸಿದ್ದಾರೆ.

ರವಿವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕೃಷಿ ಕರಾಳ ಕಾಯ್ದೆ ಮಾದರಿಯಲ್ಲೇ, ಈ ಯೋಜನೆಯನ್ನು ಕೇಂದ್ರ ಯಾರೊಂದಿಗೂ ಚರ್ಚೆ ಮಾಡದೆ, ಸರಿಯಾದ ಆಲೋಚನೆ ಇಲ್ಲದೆ ಜಾರಿಗೆ ತಂದಿದೆ. ಈ ಯೋಜನೆ ಬಗ್ಗೆ ಸರಕಾರ ಸಂಸತ್ತಿನಲ್ಲಿ ಚರ್ಚೆ ಮಾಡಿಲ್ಲ. ಅಗ್ನಿಪಥ್ ಯೋಜನೆ ದೇಶದ ಸೇನೆಯ ಸಿದ್ಧತೆಯನ್ನು ದುರ್ಬಲಗೊಳಿಸಲಿದೆ. ಇದು ದೇಶದ ಭದ್ರತೆಗೆ ಅಪಾಯ ಹಾಗೂ ಸೇನೆಗೆ ಸೇರುವ ಯುವಕರ ಆಸಕ್ತಿಯನ್ನು ಕಸಿಯುವ ಪ್ರಯತ್ನ' ಎಂದು ದೂರಿದರು.

‘ಯುವಕರು ಸೇನೆಗೆ ಸೇರಬೇಕಾದರೆ, ಹೆಮ್ಮೆಯಿಂದ ಸೇರುವ ಪರಂಪರೆ ಹೊಂದಿದ್ದೇವೆ. ಇದು ಉದ್ಯೋಗವಲ್ಲ, ಇದೊಂದು ಬದ್ಧತೆ. ಇದಕ್ಕೆ ಪ್ರತಿಯೊಬ್ಬರೂ ಹೆಮ್ಮೆ ಪಡುತ್ತಾರೆ. ಆದರೆ ಈ ಯೋಜನೆ ಮೂಲಕ ಇದನ್ನು ಗುತ್ತಿಗೆ ಕೆಲಸವಾಗಿ ಸೀಮಿತಗೊಳಿಸಲಾಗುತ್ತಿದೆ. ಇದು ದೇಶದ ಯುವಕರಿಗೆ ಕೇಂದ್ರ ಸರಕಾರ ಮಾಡಬಹುದಾದ ಅತಿದೊಡ್ಡ ಅಪಮಾನ' ಎಂದು ಪಲ್ಲಂ ರಾಜು ಟೀಕಿಸಿದರು.

‘ಇಂದು ವೇತನ ಹಾಗೂ ಪಿಂಚಣಿ ಬಿಲ್‍ಗಳು ರಕ್ಷಣಾ ಬಜೆಟ್‍ನ ಶೇ.54ರಷ್ಟಿದೆ. ಈ ಆರ್ಥಿಕ ಸ್ಥಿತಿ ನಾವು ಅರ್ಥ ಮಾಡಿಕೊಳ್ಳುತ್ತೇವೆ. ಆದರೆ, ಈ ಆರ್ಥಿಕ ಹೊರೆ ಇಳಿಸಲು ಸೇನಾ ನೇಮಕಾತಿಯಲ್ಲಿ ಬದಲಾವಣೆ ತರಲು ಮುಂದಾಗಿರುವುದು ಸಲ್ಲ. ಜವಾಬ್ದಾರಿಯುತ ಸರಕಾರವಾಗಿ ಸೇನೆಗೆ ಹೆಚ್ಚುವರಿಯಷ್ಟು ಸಂಪನ್ಮೂಲ ಸೇರಿಸುವತ್ತ ಗಮನಹರಿಸಬೇಕು. ಹೀಗಾಗಿ ಈ ಯೋಜನೆ ಹಂಪಡೆಯಬೇಕು ಎಂಬುದು ನಮ್ಮ ಆಗ್ರಹ' ಎಂದು ತಿಳಿಸಿದರು.

‘ಎರಡು ವರ್ಷಗಳಿಂದ ಸೇನೆ ನೇಮಕಾತಿ ನಡೆಸದಿರುವುದು ಆಗಾಗಲೇ ಸೇನೆ ಸಾಮಥ್ರ್ಯದ ಮೇಲೆ ಪ್ರಭಾವ ಬೀರಿದೆ. ಈ ಮಧ್ಯೆ ಕೇವಲ 6 ತಿಂಗಳ ಕಾಲ ತರಬೇತಿ ನೀಡಿ ಕೇವಲ 4 ವರ್ಷಗಳ ಸೇವಾವಧಿ ಸೀಮಿತಗೊಳಿಸಲಾಗಿದೆ. ಜತೆಗೆ ಇದರಲ್ಲಿ ಶೇ.25ರಷ್ಟು ಯೋಧರನ್ನು ಉಳಿಸಿಕೊಂಡು ಉಳಿದ ಶೇ.75ರಷ್ಟು ಯೋಧರನ್ನು ಸೇನೆಯಿಂದ ಹೊರಹಾಕುವುದು ದೊಡ್ಡ ಪ್ರಮಾದ' ಎಂದು ಅವರು ವಾಗ್ದಾಳಿ ನಡೆಸಿದರು.

‘26 ಲಕ್ಷ ಉದ್ಯೋಗಗಳು ಕೇಂದ್ರದ ವ್ಯಾಪ್ತಿಯಲ್ಲಿದ್ದು, ಇತರೆ ವಲಯ ಸೇರಿದಂತೆ ಒಟ್ಟು 60 ಲಕ್ಷ ಉದ್ಯೋಗಗಳು ಖಾಲಿ ಇವೆ. ಈ ವಿಚಾರವಾಗಿ ಸರಕಾರ ಪರಿಣಾಮಕಾರಿ ಚರ್ಚೆ ನಡೆಸಬೇಕು. ಕೇಂದ್ರ ಸರಕಾರ ಏಕ ಶ್ರೇಣಿ ಏಕ ಪಿಂಚಣಿಯ ಚರ್ಚೆ ಮೂಲಕ ಅಧಿಕಾರಕ್ಕೆ ಬಂದು ಈಗ ಶ್ರೇಣಿರಹಿತ ಪಿಂಚಣಿ ರಹಿತ ವ್ಯವಸ್ಥೆಗೆ ಬಂದು ನಿಂತಿದೆ. ಇದು ಈ ಸರಕಾರದ ಕೊಡುಗೆ. ದೇಶದ ಭದ್ರತೆ ಪೂರ್ವಸಿದ್ಧತೆಯಲ್ಲಿ ಸರಕಾರ ವಿಫಲವಾಗಿದೆ' ಎಂದು ಅವರು ದೂರಿದರು.

‘ಅಗ್ನಿಪಥ್ ಯೋಜನೆ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಸುವುದನ್ನು ಪಕ್ಷ ಖಂಡಿಸುತ್ತದೆ. ಆದರೆ, ಸರಕಾರದ ನಿರ್ಧಾರದಿಂದ ಜನತೆ ಆಕ್ರೋಶಗೊಂಡು ಈ ರೀತಿ ವರ್ತನೆ ತೋರಿದ್ದಾರೆ. ದೇಶಕ್ಕೆ ಸೇವೆ ಸಲ್ಲಿಸಲು ಹಾಗೂ ಜೀವನವಿಡಿ ವೃತ್ತಿಯನ್ನು ಕಂಡುಕೊಳ್ಳಲು ಯುವಕರು ಸೇನೆಯನ್ನು ಗುರಿಯಾಗಿಸಿದ್ದರು. ಸರಕಾರ ಅದನ್ನು ಕಸಿದುಕೊಂಡಾಗ ಸಹಜವಾಗಿ ಯುವಕರು ಆಕ್ರೋಶಗೊಂಡಿದ್ದಾರೆ. ದೇಶ ಇತಿಹಾಸದಲ್ಲೇ ಕಾಣದಷ್ಟು ನಿರುದ್ಯೋಗ ಪ್ರಮಾಣ ಹೆಚ್ಚಾಗಿರುವಾಗ ಉದ್ಯೋಗ ನೀಡುವಲ್ಲಿ ಸರಕಾರ ವಿಫಲವಾಗಿದ್ದು, ಯುವಕರಿಗೆ ಕೌಶಲ್ಯ ತರಬೇತಿ ನೀಡಲು ವಿಫಲವಾಗಿದೆ’ 

-ಎಂ.ಎಂ.ಪಲ್ಲಂ ರಾಜು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News