ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಶಿಂಧೆ ಗುಂಪಿಗೆ ಮತ್ತೊಬ್ಬ ಸಚಿವ

Update: 2022-06-27 02:09 GMT
Photo: PTI

ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು, ಉದ್ಧವ್ ಠಾಕ್ರೆ ಸಂಪುಟಕ್ಕೆ ಮತ್ತೊಬ್ಬ ಸಚಿವ ಉದಯ್ ಸಮಂತ್ ರಾಜೀನಾಮೆ ನೀಡಿ ಏಕನಾಥ ಶಿಂಧೆ ಬಣಕ್ಕೆ ಸೇರ್ಪಡೆಯಾಗಿದ್ದಾರೆ. ಏತನ್ಮಧ್ಯೆ ಉಪಸ್ಪೀಕರ್ ನರಹರಿ ಝಿರ್ವಾಲ್ ನೀಡಿರುವ ಅನರ್ಹತೆ ನೋಟಿಸ್ ವಿರುದ್ಧ 16 ಮಂದಿ ಬಂಡಾಯ ಶಾಸಕರು ಸುಪ್ರೀಂಕೋರ್ಟ್‍ನ ಕದ ತಟ್ಟಿದ್ದಾರೆ. ಏಕನಾಥ್ ಶಿಂಧೆ ಅವರನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕರಾಗಿ ಮಾನ್ಯತೆ ನೀಡಬೇಕು ಎಂಬ ಎರಡನೇ ಅರ್ಜಿಯನ್ನೂ ಸಲ್ಲಿಸಲಾಗಿದೆ.

ರವಿವಾರದ ರಾಜಕೀಯ ಬೆಳವಣಿಗೆಯಲ್ಲಿ ಉನ್ನತ ಶಿಕ್ಷಣ ಸಚಿವ ಉದಯ ಸಾವಂತ್ ಅವರು ಗುವಾಹತಿಗೆ ತೆರಳಿದ್ದಾರೆ. ರವಿವಾರ ರಾತ್ರಿ ಎಂವಿಎ ಮೈತ್ರಿಕೂಟದ ವಿರುದ್ಧ ಟ್ವೀಟ್ ಮಾಡಿರುವ ಶಿಂಧೆ, "ಬಾಳಾಸಾಹೇಬ್ ಅವರ ಶಿವಸೇನೆ, ಬಾಂಬ್ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ ಜತೆ ಸಂಬಂಧ ಇರುವವರನ್ನು ಬೆಂಬಲಿಸಲು ಹೇಗೆ ಸಾಧ್ಯ? ಇದನ್ನು ವಿರೋಧಿಸುವ ಸಲುವಾಗಿ ನಾನು ಈ ಹೆಜ್ಜೆ ಇಟ್ಟಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ.

ಮೊದಲು ಎನ್‍ಸಿಪಿಯಲ್ಲಿದ್ದ ಸಮಂತ್, ಉದ್ಧವ್ ಠಾಕ್ರೆ ಸರ್ಕಾರದಿಂದ ಬಣ ಬದಲಿಸಿದ ಎಂಟನೇ ಸಚಿವರಾಗಿದ್ದಾರೆ. ಇದೀಗ ಸಂಪುಟದಲ್ಲಿ ಶಿವಸೇನೆಯ ಮೂವರು ಸಚಿವರು ಮಾತ್ರ ಉಳಿದುಕೊಂಡಿದ್ದಾರೆ.

ಉಪಸ್ಪೀಕರ್ ನೀಡಿರುವ ಅನರ್ಹತೆ ನೋಟಿಸ್‍ಗೆ ಉತ್ತರಿಸಲು ಸೋಮವಾರ ಸಂಜೆಯ ಗಡುವು ವಿಧಿಸಲಾಗಿದ್ದು, ಇದನ್ನು ವಿಸ್ತರಿಸುವಂತೆಯೂ ಬಂಡಾಯ ಶಾಸಕರು ಮನವಿ ಮಾಡಿಕೊಳ್ಳಲಿದ್ದಾರೆ ಎಂದು ಶಾಸಕ ದೀಪಕ್ ಕೇಸರ್‍ಕರ್ ಹೇಳಿದ್ದಾರೆ. ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ರಾವ್‍ಸಾಹೇಬ್ ದಾನ್ವೆ, ಜಲ್ನಾದಲ್ಲಿ ನಡೆದ ರ್ಯಾಲಿಯೊಂದರಲ್ಲಿ, "ಎರಡು ಮೂರು ದಿನಗಳ ಕಾಲ ನಾವು ವಿರೋಧ ಪಕ್ಷದಲ್ಲೇ ಉಳಿಯುತ್ತೇವೆ" ಎಂದು ಸ್ಪಷ್ಟಪಡಿಸಿದ್ದಾರೆ.

ಬಂಡಾಯ ಶಾಸಕರು ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ ಆರಂಭವಾಗಲಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ.ಬಿ.ಪರ್ದಿವಾಲಾ ಅವರನ್ನು ಒಳಗೊಂಡ ನ್ಯಾಯಪೀಠ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News