ಅಗ್ನಿಪಥ್ ಮತ್ತಷ್ಟು ಯುವಕರನ್ನು ನಿರುದ್ಯೋಗಿಯನ್ನಾಗಿಸುವ ಯೋಜನೆ: ರಮಾನಾಥ ರೈ

Update: 2022-06-27 06:54 GMT

ಮಂಗಳೂರು, ಜೂ.27: ಕೇಂದ್ರ ಸರಕಾರದ ಅಗ್ನಿಪಥ್ ಯೋಜನೆ ಈಗಾಗಲೇ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಯೋಜನೆಯಾಗಿದ್ದು, ಇದನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ರಮಾನಾಥ ರೈ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಗ್ನಿಪಥ್ ನಿರುದ್ಯೋಗಿಗಳಿಗೆ ಸಹಾಯ ಮಾಡುವಂಥದ್ದು, ಸೇನೆಯ ಸಾಮರ್ಥ್ಯ ಹೆಚ್ಚಿಸುವಂಥದ್ದು ಎಂಬ ಹೇಳಿ ಮೂಲಕ ಯುವಕರನ್ನು ದಾರಿ ತಪ್ಪಿಸಲಾಗುತ್ತಿದೆ. ದೇಶದ ಸುರಕ್ಷತೆಯ ದೃಷ್ಟಿಯಿಂದ ಸೇನೆಯ ವಿಚಾರದಲ್ಲಿ ಇಂತಹ ಯೋಜನೆ ಅಸಮರ್ಪಕ. ಇದು ಈಗಾಗಲೇ ಸೇನೆಗೆ ಭರ್ತಿಗಾಗಿ ಆಯ್ಕೆಗೊಂಡು ವೈದ್ಯಕೀಯ ಪ್ರಮಾಣ ಪತ್ರವನ್ನು ಎದುರು ನೋಡುತ್ತಿರುವ ಆಕಾಂಕ್ಷಿಗಳಿಗೆ ಮಾಡುತ್ತಿರುವ ಅನ್ಯಾಯ ಎಂದು ಹೇಳಿದರು.

ಸರಕಾರಿ ಸೇವೆಯಲ್ಲಿ ಐದು ವರ್ಷ ಸೇವೆ ಸಲ್ಲಿಸಿದವರಿಗೆ ಪಿಂಚಣಿ ದೊರೆಯುತ್ತದೆ. ಅಗ್ನಿಪಥ್ ಯೋಜನೆಯ ಮೂಲಕ ಬುದ್ಧಿವಂತಿಕೆ ಉಪಯೋಗಿಸಿ ಈ ಸೇವೆಯನ್ನು ನಾಲ್ಕು ವರ್ಷಗಳಿಗೆ ಸೀಮಿತಗೊಳಿಸಲಾಗಿದೆ. ಪ್ರತಿ ವರ್ಷ ಸೇನೆಗೆ ಸುಮಾರು 70,000 ಮಂದಿಯನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಪ್ರಕ್ರಿಯೆ ನಡೆದಿದ್ದರೂ ಸೇರ್ಪಡೆಯಾಗಿಲ್ಲ. ಈಗಾಗಲೇ ಲಕ್ಷಾಂತರ ಮಂದಿ ಅರ್ಹರು ಸೇನೆಯಲ್ಲಿ ಭರ್ತಿಗೆ ಕಾಯುತ್ತಿರುವಾಗ ಇಂತಹ ನಿರ್ಧಾರ ಖಂಡನೀಯ ಎಂದು ರೈ ಹೇಳಿದರು.

ಈ ಯೋಜನೆಯಡಿ ಮಾಸಿಕ 30 ಸಾವಿರ ರೂ. ವೇತನದಲ್ಲಿ 9 ಸಾವಿರ ರೂ.ಗಳನ್ನು ಭವಿಷ್ಯ ನಿಧಿ ಬದಲಿಗೆ ಸೇವಾ ನಿಧಿ ರೂಪದಲ್ಲಿ ನೀಡವುದು. ಸೇವಾನಿಧಿಗೆ ಬಡ್ಡಿದರವೂ ಕಡಿಮೆ. ಇತ್ತ ನಾಲ್ಕು ವರ್ಷ ದುಡಿದವರಿಗೆ ಪಿಂಚಣಿ ಸೌಲಭ್ಯವೂ ಇಲ್ಲ. ಬಳಿಕ ಅವರಿಗೆ ಸೆಕ್ಯೂರಿಟಿ ಗಾರ್ಡ್‌ನಂತಹ ಕೆಲಸ ಸಿಗುತ್ತದೆ ಎಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಹೇಳುತ್ತಿದ್ದರೆ, ನಾವು ಕೆಲಸ ನೀಡುವುದಾಗಿ ಕೆಲವು ಕಂಪೆನಿಗಳು ಹೇಳಿಕೊಂಡಿವೆ. ಅಷ್ಟು ಮಂದಿಗೆ ಕೆಲಸ ಕೊಡಲು ಕಂಪೆನಿಗಳಿಗೆ ಸಾಧ್ಯವೇ? ಪೊಲೀಸ್ ಇಲಾಖೆಯಲ್ಲಿ ನೇಮಕ ಮಾಡಲಾಗುತ್ತದೆ ಎನ್ನುತ್ತಿದ್ದಾರೆ. ಆ ನೇಮಕದ ಕಾರ್ಯವನ್ನು, ಕಂಪೆನಿಗಳಲ್ಲಿ ಕೆಲಸ ಕೊಡುವ ಕಾರ್ಯವನ್ನು ಈಗಲೂ ಮಾಡಬಹುದಲ್ಲವೇ ಎಂದವರು ಪ್ರಶ್ನಿಸಿದರು.

ನಿವೃತ್ತಿ ಆದ ಬಳಿಕ ಮಿಲಿಟರಿ ಕ್ಯಾಂಟೀನ್ ಸೌಲಭ್ಯ, ವೈದ್ಯಕೀಯ ಸೌಲಭ್ಯದ ಬಗ್ಗೆ ಆದೇಶ ಪತ್ರದಲ್ಲಿ ಉಲ್ಲೇಖವಿಲ್ಲ. ಆರ್ಮಿಯವರಿಗೆ ಸಿಗುವ ಎಲ್ಲಾ ವ್ಯವಸ್ಥೆ ಇದೆ ಎನ್ನುತ್ತಾರೆ. ಆದರೆ ಸೇನೆಯವರಿಗೆ ಸಿಗುವ ಬ್ಯಾಜ್ ಇಲ್ಲ. ಈಗಲೂ ಹಾಲಿ ಸೈನಿಕರು ಭೂಮಿಯ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಹಾಗಾಗಿ ಇದು ಸೇನೆಗೆ ಬಲ ತುಂಬುವ, ನಿರುದ್ಯೋಗ ಸಮಸ್ಯೆ ನಿವಾರಿಸುವ ಯೋಜನೆ ಅಲ್ಲ. ಈ ಯೋಜನೆಯನ್ನು ವಿರೋಧಿಸಿ ಕಾಂಗ್ರೆಸ್ ಆಂದೋಲನ ನಡೆಸುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಹೋರಾಟಕ್ಕೆ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ಪಿಯೋನ್ ಸೇರಿದಂತೆ ಸಣ್ಣಪುಟ್ಟ ಕೆಲಸಕ್ಕೆ ಅರ್ಜಿ ಕರೆದಾಗಲೂ ಸಾವಿರಾರು ಮಂದಿ ಅರ್ಜಿ ಸಲ್ಲಿಸುತ್ತಾರೆ. ಹಾಗಾಗಿ ಅಗ್ನಿಪಥ್‌ಗೆ ಸೇರ್ಪಡೆಗೊಳ್ಳುತ್ತಿರುವವರು ಎಲ್ಲರೂ ಯೋಜನೆಯ ಲಾಭ ಅಥವಾ ದೇಶಸೇವೆಯ ಉದ್ದೇಶದಿಂದಲೇ ಸೇರುತ್ತಿಲ್ಲ. ನಾಲ್ಕು ವರ್ಷ ತರಬೇತಿಯಲ್ಲೇ ಕಳೆದುಹೋಗಲಿದೆ. ಇನ್ನು ದೇಶಸೇವೆ ಮಾಡುವ ಸಂದರ್ಭದಲ್ಲಿ ನಿರುದ್ಯೋಗಿಗಳಾಗುತ್ತಾರೆ. ತರಬೇತಿ ಪಡೆದ ಬಳಿಕ ಶೇ. 75 ಮಂದಿಯನ್ನು ಕೈಬಿಡಲಾಗುತ್ತದೆ. ತರಬೇತಿ ಪಡೆದು ದೇಶಸೇವೆಗೆ ಮುಂದಾಗುವ ಸಂದರ್ಭದಲ್ಲಿ ಕೆಲಸದಿಂದ ಕೈಬಿಡುವುದು ಯಾವ ರೀತಿಯಲ್ಲಿ ದೇಶಸೇವೆಗೆ ಅವಕಾಶ ನೀಡಿದಂತಾಗುತ್ತದೆ ಎಂದು ಪ್ರಶ್ನಿಸಿದ ರಮಾನಾಥ ರೈ, ದೇಶದ ರಕ್ಷಣೆಯ ವ್ಯವಸ್ಥೆಯಾದ ಮಿಲಿಟರಿಯನ್ನು ಹೊರಗುತ್ತಿಗೆ ನೀಡುವುದನ್ನು ದೇಶಪ್ರೇಮಿಗಳು ಒಪ್ಪಲು ಸಾಧ್ಯವೇ ಇಲ್ಲ ಎಂದರು.

ಅಘೋಷಿತ ತುರ್ತು ಪರಿಸ್ಥಿತಿ ಮೋದಿ ಆಡಳಿತದಲ್ಲಿದೆ

ಪ್ರಧಾನಿಯಾಗಿದ್ದಾಗ ಇಂದಿರಾ ಗಾಂಧಿತುರ್ತು ಪರಿಸ್ಥಿತಿಯನ್ನು ಹೇರಿದ್ದನ್ನು ವಿರೋಧಿಸಲಾಗುತ್ತಿದೆ. ನಾನು ವೈಯಕ್ತಿಕವಾಗಿ ತುರ್ತು ಪರಿಸ್ಥಿತಿಯನ್ನು ಸಮರ್ಥಿಸುತ್ತಿಲ್ಲ. ಆದರೆ ನನ್ನ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿಯಿಂದ ದೀನ ದಲಿತರು, ಭೂ ಹೀನರಿಗೆ ಅನ್ಯಾಯವಾಗಿಲ್ಲ. ಸಾಮಾಜಿಕ ಕಾರ್ಯಕರ್ತರು ಜೈಲುವಾಸ ಅನುಭವಿಸಿದ್ದಾರೆ. ಆದರೆ ಇದೀಗ ತುರ್ತು ಪರಿಸ್ಥಿತಿ ಇಲ್ಲದಿದ್ದರೂ ಪ್ರಧಾನಿಯೊಬ್ಬರನ್ನು ವಿರೋಧಿಸಿದ ಕಾರಣಕ್ಕೆ ದೇಶದ್ರೋಹಿಯಾಗಿ ಜೈಲುವಾಸ ಸೇರುವಂತಹ, ಧ್ವನಿ ಅಡಗಿಸುವಂತಹ ಅಘೋಷಿತ ತುರ್ತು ಪರಿಸ್ಥಿತಿಯನ್ನು ಸಾಮಾಜಿಕ ಕಾರ್ಯಕರ್ತರು ಎದುರಿಸುತ್ತಿದ್ದಾರೆ. ಐಟಿ, ಈ.ಡಿ. ದಾಳಿ ತಪ್ಪಿಸುವುದಕ್ಕೆ ಜನರಿಗೆ ಸುಲಭದ ಮಾರ್ಗ ಬಿಜೆಪಿ ಸೇರುವುದು. ಅಲ್ಲಿ ಹೋದರೆ ಎಲ್ಲವೂ ಕ್ಲೀನ್‌ಚಿಟ್. ಗುಜರಾತ್ ಹತ್ಯಾಕಾಂಡದಲ್ಲೂ ಕ್ಲೀನ್‌ಚಿಟ್. ಮೋದಿ ಆಡಳಿತದಲ್ಲಿ ಪ್ರಶ್ನೆ ಮಾಡುವವರಿಗೆ ಜೈಲು, ಪ್ರಜಾಸತ್ತೆಯ ಹೆಸರಿನಲ್ಲಿ ಹಿಟ್ಲರ್ ಶಾಹಿ ಆಡಳಿತ ನಡೆಸಲಾಗುತ್ತಿದೆ ಎಂದು ರೈ ಆರೋಪಿಸಿದರು.

ನಳಿನ್ ಹಾಸ್ಯಗಾರ

ಅಗ್ನಿಪಥ್ ಯೋಜನೆಯನ್ನು ಕಾಂಗ್ರೆಸ್ ಮಾತ್ರ ವಿರೋಧಿಸುತ್ತಿರುವುದಲ್ಲ. ಈ ದೇಶದ ಮಕ್ಕಳು ವಿರೋಧಿಸುತ್ತಿದ್ದಾರೆ. ಇನ್ನು ನಳಿನ್ ಕುಮಾರ್ ಕಟೀಲು ಹಾಸ್ಯಗಾರ ಇದ್ದ ಹಾಗೆ. ಡಾಲರ್ ವಿಷಯದಲ್ಲೂ ಬಾಲಿಶವಾಗಿ ಮಾತನಾಡುವ ಅವರ ಬಗ್ಗೆ ನಾನು ಪ್ರತಿಕ್ರಿಯಿಸಬೇಕಾಗಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ರಮನಾಥ ರೈ ಪ್ರತಿಕ್ರಿಯಿಸಿದರು.

ದೇಶಕ್ಕೆ ಹೋರಾಟ ಮಾಡಿದ ನೆಹರೂ ಕುಟುಂಬದ ಹೆಸರಿನಲ್ಲಿದ್ದ ಮೈದಾನವನ್ನು ಕೇಂದ್ರ ಮೈದಾನ ಎಂದು ಬ್ರಿಟಿಷರ ಹೆಸರನ್ನು ಪ್ರಚಲಿತಗೊಳಿಸುವವರು ದೇಶಪ್ರೇಮಿಗಳೇ? ಇದು ಶ್ರೀನಿವಾಸ ಮಲ್ಯ, ಕಿಲ್ಲೆಯಂತಹ ಮಹನೀಯರಿಗೆ ಮಾಡಿರುವ ಅವಮಾನ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಶಾಲೆಟ್ ಪಿಂಟೋ, ಹರಿನಾಥ್, ನವೀನ್ ಡಿಸೋಜ, ಅಪ್ಪಿ, ರಮಾನಂದ ಪೂಜಾರಿ, ಸಿ.ಎಂ.ಮುಸ್ತಫ, ನೀರಜ್ ಪಾಲ್, ಶಾಹುಲ್ ಹಮೀದ್, ಜಯಶೀಲ ಅಡ್ಯಂತಾಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News