ಪಠ್ಯ ಪರಿಷ್ಕರಣೆಗೆ ವಿಲಕ್ಷಣ ಮನಸ್ಥಿತಿಯವರನ್ನು ನೇಮಿಸಬಾರದು: ಡಾ.ನಂಜಾವಧೂತ ಸ್ವಾಮಿ

Update: 2022-06-27 10:59 GMT

ಬೆಂಗಳೂರು, ಜೂ.27: ಶಾಲಾ ಮಕ್ಕಳು ಕಲಿಕೆಯ ಪಠ್ಯ ಪುಸ್ತಕಗಳ ಪರಿಷ್ಕರಣೆ ಸಮಿತಿಗಳಿಗೆ ಸರಕಾರಗಳು ವಿಲಕ್ಷಣ ಮನಸ್ಥಿತಿಯ ವ್ಯಕ್ತಿತ್ವದವರನ್ನು ಯಾವುದೇ ಕಾರಣಕ್ಕೂ ನೇಮಿಸಬಾರದು. ಅಂತಹ ಸಮಿತಿಗಳಿಗೆ ನೇಮಕ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕಾದುದು ಅಗತ್ಯ ಎಂದು ಪಟ್ಟನಾಯಕನಹಳ್ಳಿ ಸ್ಫಟಿಕಪುರ ಮಠದ ಶ್ರೀ ಡಾ.ನಂಜಾವಧೂತ ಸ್ವಾಮಿ ಸಲಹೆ ಮಾಡಿದ್ದಾರೆ.

ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಾಡಪ್ರಭು ಕೆಂಪೇಗೌಡರ 513ನೆ ಜಯಂತಿ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಪಠ್ಯ ಪುಸ್ತಕಗಳ ಪರಿಷ್ಕರಣೆಗೆ ರೋಹಿತ್ ಚಕ್ರತೀರ್ಥ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಸರಿಯಲ್ಲ ಎಂದು ಮುಖ್ಯಮಂತ್ರಿಯಿದ್ದ ವೇದಿಕೆಯಲ್ಲೇ ಆಕ್ಷೇಪಿಸಿದರು.

ಸರಕಾರಿ ಶಾಲೆ-ಕಾಲೇಜುಗಳಲ್ಲಿ ಕಲಿಯುವ ಮಕ್ಕಳು ಸರಕಾರ ರೂಪಿಸಿದ ಪಠ್ಯವನ್ನು ಓದಿ, ಕಲಿತು, ಪರೀಕ್ಷೆ ಬರೆಯಬೇಕು. ಅಂತಹ ಪಠ್ಯ ರೂಪಿಸುವವರು ಯಾವುದೇ ಕಾರಣಕ್ಕೂ ಎಡ ಅಥವಾ ಬಲ, ಇನ್ನಿತರ ಸಿದ್ಧಾಂತದ ಹಿಂಬಾಲಕರು ಆಗಿರಬಾರದು. ಅವರು ಎಲ್ಲವನ್ನೂ ಸಮಚಿತ್ತದಿಂದ ನೋಡುವ ಪ್ರಾಜ್ಞರು, ಅಧ್ಯಯನಶೀಲತೆ ಹೊಂದಿದ ವ್ಯಕ್ತಿಗಳನ್ನು ಶಾಲಾ ಪಠ್ಯ ಪುಸ್ತಕಗಳನ್ನು ರೂಪಿಸಲು ನಿಯೋಜಿಸಬೇಕು’ ಎಂದು ನಂಜಾವಧೂತ ಸ್ವಾಮಿ ತಿಳಿಸಿದರು.

ಅತ್ಯಂತ ಪವಿತ್ರವಾದ ನಾಡಧ್ವಜವನ್ನು ಯಾವುದೋ ಬಟ್ಟೆಗೆ ಹೋಲಿಸಿದ ವ್ಯಕ್ತಿಯನ್ನು ಪಠ್ಯಪುಸ್ತಕ ಪರಿಷ್ಕರಣೆಗೆ ನೇಮಿಸಿದ್ದು ಸರಿಯಲ್ಲ. ರಾಷ್ಟ್ರಕವಿ ಕುವೆಂಪು, ಸಮಾಜ ಸುಧಾರಕ ಬಸವಣ್ಣ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಇನ್ನಿತರ ಮಹನೀಯರಿಗೆ ಅವಮಾನ ಹೊಸದೇನೂ ಅಲ್ಲ. ಆದರೆ, ಇದೀಗ ಶಾಲಾ ಪಠ್ಯ ಪುಸ್ತಕಗಳಲ್ಲಿ ಅವಮಾನ ಆಗಿರುವುದಕ್ಕೆ ಹೆಚ್ಚು ವಿರೋಧ ವ್ಯಕ್ತವಾಗಿದೆ. ಲೋಪವನ್ನು ಸರಿಪಡಿಸಿ ಮಹನೀಯರನ್ನು ಗೌರವಿಸುವ ಕೆಲಸ ಸರಕಾರ ಮಾಡಬೇಕು’ ಎಂದು ಸ್ವಾಮೀಜಿ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News