ವಾಹನ ಚಾಲಕರಿಂದ ಹಣ ವಸೂಲಿ ಆರೋಪ: ಎಎಸ್ಸೈ ಸೇರಿ ಇಬ್ಬರು ಅಮಾನತು

Update: 2022-06-27 14:47 GMT

ಬೆಂಗಳೂರು, ಜೂ.27: ವಾಹನ ದಾಖಲಾತಿ ಪರಿಶೀಲನೆ ಸಂದರ್ಭದಲ್ಲಿ ಹೊರ ರಾಜ್ಯದ ಚಾಲಕರಿಂದ ದಂಡದ ನೆಪದಲ್ಲಿ ರಶೀದಿ ನೀಡದೆ ಹಣವಸೂಲಿ ಮಾಡಿದ ಆರೋಪದಡಿ ಸಂಚಾರ ಪೊಲೀಸ್ ವಿಭಾಗದ ಎಎಸ್ಸೈ ಸೇರಿ ಇಬ್ಬರು ಅಮಾನತುಗೊಂಡಿದ್ದಾರೆ.

ಸೋಮವಾರ ಈ ಕುರಿತು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಆದೇಶ ಹೊರಡಿಸಿದ್ದು, ಇಲ್ಲಿನ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯ ಎಎಸ್ಸೈ ಮಹೇಶ್ ಹಾಗೂ ಹೆಡ್‍ಕಾನ್‍ಸ್ಟೇಬಲ್ ಗಂಗಾಧರಪ್ಪ ಅವರನ್ನು ಅಮಾನತು ಮಾಡಲಾಗಿದೆ.

ಜೂ.10ರಂದು ನಗರದ ದೇವಾಂಗ ಜಂಕ್ಷನ್‍ನಲ್ಲಿ ಕರ್ತವ್ಯದಲ್ಲಿದ್ದ ಎಎಸ್ಸೈ ಮಹೇಶ್ ಹಾಗೂ ಹೆಡ್‍ಕಾನ್‍ಸ್ಟೇಬಲ್ ಗಂಗಾಧರಪ್ಪ ಅವರು ಕೇರಳ ಮೂಲದ ಸಂತೋಷ್ ಕುಮಾರ್ ಎಂಬಾತನ ಕಾರು ತಡೆದು ನಿಲ್ಲಿಸಿದ್ದರು. ಆನಂತರ, 2,500 ರೂ. ಅಕ್ರಮವಾಗಿ ಸಂತೋಷ್ ರಿಂದ ವಸೂಲಿ ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು.

ಹಣ ಪಡೆದುಕೊಂಡಿದಕ್ಕೆ ರಶೀದಿ ಸಹ ನೀಡಿರಲಿಲ್ಲ. ಈ ಸಂಬಂಧ ಇಮೇಲ್ ಮೂಲಕ ನಗರ ಸಂಚಾರ ಪೊಲೀಸರಿಗೆ ಸಂತೋಷ್ ದೂರು ನೀಡಿದ್ದರು. ಪ್ರಾಥಮಿಕ ತನಿಖೆಯಲ್ಲಿ ಕರ್ತವ್ಯದ ವೇಳೆ ಪೊಲೀಸರು ಬಾಡಿ ವೋರ್ನ್ ಕ್ಯಾಮರಾ ಧರಿಸದಿರುವುದು ಕಂಡುಬಂದಿತ್ತು. ಮೇಲ್ನೋಟಕ್ಕೆ ಸಿಬ್ಬಂದಿ ನಿರ್ಲಕ್ಷ್ಯತೆ ಹಾಗೂ ದುರ್ನಡತೆ ಆರೋಪದಡಿ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ರವಿಕಾಂತೇಗೌಡ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News