VIDEO- ಟೀಸ್ಟಾ ಸೆಟಲ್ವಾಡ್ ಬಂಧನವನ್ನು ಖಂಡಿಸಿ ಬೆಂಗಳೂರಿನಲ್ಲಿ ವಕೀಲರಿಂದ ಪ್ರತಿಭಟನೆ

Update: 2022-06-27 17:26 GMT

ಬೆಂಗಳೂರು, ಜೂ.27: ಸಾಮಾಜಿಕ ಕಾರ್ಯಕರ್ತೆ ಹಾಗೂ ಮಾನವ ಹಕ್ಕುಗಳ ಹೋರಾಟಗಾರ್ತಿ ಟೀಸ್ಟಾ ಸೆಟಲ್ವಾಡ್  ಅವರನ್ನು ಬಂಧಿಸಿರುವ ಗುಜರಾತ್ ಪೊಲೀಸರ ಕ್ರಮ ಖಂಡಿಸಿ ನಗರದ ಸಿಟಿ ಸಿವಿಲ್ ಕೋರ್ಟ್ ಮುಂಭಾಗ ಬೆಂಗಳೂರು ನಗರದ ವಕೀಲರು ಸೋಮವಾರ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೈಕೋರ್ಟ್ ಹಿರಿಯ ವಕೀಲ ಎಸ್.ಬಾಲನ್ ಅವರು, ಗುಜರಾತ್ ಗೋಧ್ರಾ ದಂಗೆಗಳ ಸಂದರ್ಭದಲ್ಲಿ ದುಷ್ಕರ್ಮಿಗಳು ಅಲ್ಪಸಂಖ್ಯಾತ ಮಹಿಳೆಯರ ಮೇಲೆ ಅತ್ಯಾಚಾರವನ್ನು ನಡೆಸಿ, ಅವರನ್ನು ಕೊಂದು ಹಾಕಿದ್ದರು. ಇದನ್ನು ಖಂಡಿಸಿ ಅವರ ಕುಟುಂಬದವರಿಗೆ ನ್ಯಾಯವನ್ನು ಒದಗಿಸುವುದಕ್ಕಾಗಿ ಟೀಸ್ಟಾ ಸೆಟಲ್ವಾಡ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಗುಜರಾತ್ ಪೊಲೀಸರು, 20 ವರ್ಷಗಳ ಬಳಿಕ ಟೀಸ್ಟಾ ಅವರನ್ನು ಬಂಧಿಸಿದ್ದು, ಇಂತಹ ಕೃತ್ಯ ಹಿಟ್ಲರ್ ಆಡಳಿತದಲ್ಲೂ ನಡೆದಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿದರು.

ಸುಪ್ರೀಂಕೋರ್ಟ್ ಈ ಕೂಡಲೇ ಸುಮೋಟೋ ಅರ್ಜಿಯನ್ನು ದಾಖಲಿಸಿಕೊಂಡು, ವಿಚಾರಣೆ ನಡೆಸಬೇಕು. ಟೀಸ್ಟಾ ಬಂಧನ ಕುರಿತಂತೆ ತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸಿದರು. 

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ, ಹಿರಿಯ ವಕೀಲ ಸಿ.ಎಸ್.ದ್ವಾರಕನಾಥ್ ಅವರು ಮಾತನಾಡಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಟೀಸ್ಟಾ ಅವರು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಜನರಿಗೆ ಅನ್ಯಾಯವಾದಾಗ ಕೋರ್ಟ್ ಮೆಟ್ಟಿಲೇರಿ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಇಂತಹ ಹೋರಾಟಗಾರ್ತಿಯನ್ನೇ ಬಂಧಿಸಿದರೆ, ಸಾಮಾನ್ಯ ಜನರು ನ್ಯಾಯಕ್ಕಾಗಿ ಕೋರ್ಟ್‍ಗೆ ಹೋಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಈ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ, ಕೇಂದ್ರ ಬಿಜೆಪಿ ಸರಕಾರಕ್ಕೆ ನ್ಯಾಯಾಂಗ, ಸಂವಿಧಾನ, ಐಪಿಸಿ, ಸಿಆರ್‍ಪಿಸಿ ಯಾವುದೂ ಬೇಕಾಗಿಲ್ಲ, ಇವರಿಗೆ ಬರೀ ನಾಗಪುರ ಮಾತ್ರ ಬೇಕಾಗಿದೆ ಎಂದು ಕಿಡಿಕಾರಿದರು.

ಟೀಸ್ಟಾ ಅವರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು. ಅವರ ಬಿಡುಗಡೆಗೆ ವಿಳಂಬ ಮಾಡಿದರೇ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ವಕೀಲರಾದ ಬಿ.ಟಿ.ವೆಂಕಟೇಶ್, ಹರಿರಾಮ್, ವಕೀಲೆ ಪೂರ್ಣ ಹಾಜರಿದ್ದರು.  

ಸುಮೋಟೋ ದಾಖಲಿಸಿ, ತನಿಖೆಗೆ ಆದೇಶಿಸಿ

‘ಟೀಸ್ಟಾ ಸೆಟಲ್ವಾಡ್ ಬಂಧನಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಈ ಕೂಡಲೇ ಸುಮೋಟೋ ಅರ್ಜಿಯನ್ನು ದಾಖಲಿಸಿಕೊಂಡು, ವಿಚಾರಣೆ ನಡೆಸಬೇಕು. ಅವರ ಬಂಧನ ಕುರಿತಂತೆ ತನಿಖೆಗೆ ಆದೇಶಿಸಬೇಕು.’

ಎಸ್.ಬಾಲನ್, ಹೈಕೋರ್ಟ್ ಹಿರಿಯ ವಕೀಲ
 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News