100 ಕೋಟಿ ರೂ. ಮೌಲ್ಯದ ಬಿಡಿಎ ಆಸ್ತಿ ವಶ

Update: 2022-06-28 12:18 GMT

ಬೆಂಗಳೂರು, ಜೂ.28: ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಸಿರುವ ಬಿಡಿಎ ಅಧಿಕಾರಿಗಳು ಇಲ್ಲಿನ ನಗರದ ಎಚ್‍ಬಿಆರ್ ಬಡಾವಣೆಯ ಎರಡನೆ ಹಂತದ ನಾಗವಾರದಲ್ಲಿ 100 ಕೋಟಿ ಮೌಲ್ಯದ ಜಾಗ ವಶಕ್ಕೆ ಪಡೆದಿದ್ದಾರೆ.

ಮಂಗಳವಾರ ಬೆಳಗ್ಗೆ ಜೆಸಿಬಿಗಳ ಮೂಲಕ ಕಾರ್ಯಾಚರಣೆ ನಡೆಸಿದ ಬಿಡಿಎ ಅಧಿಕಾರಿಗಳು, 15 ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ಮತ್ತು ಶೆಡ್‍ಗಳನ್ನು ತೆರವುಗೊಳಿಸಿ ಸುಮಾರು 100 ಕೋಟಿ ಮೌಲ್ಯದ ಒಂದೂಕಾಲು ಎಕರೆ ಜಾಗವನ್ನು ವಶಕ್ಕೆ ಪಡೆದರು.

ನಗರದ ಎಚ್‍ಬಿಆರ್ ಬಡಾವಣೆಯ ಎರಡನೇ ಹಂತದ ನಾಗವಾರದಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡ ಸರ್ವೆ ನಂಬರ್ 75ರ ಒಂದೂಕಾಲು ಎಕರೆ ಜಾಗವನ್ನು ಬಿಟ್ಟುಕೊಡದೇ ಭೂಮಾಲಕರು ಆ ಜಾಗದಲ್ಲಿ 15ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ಮತ್ತು ಶೆಡ್‍ಗಳನ್ನು ನಿರ್ಮಿಸಿದ್ದರು.

ಈ ಸರ್ವೇ ಸಂಖ್ಯೆ 6 ಎಕರೆ ಜಮೀನನ್ನು ಎಚ್‍ಬಿಆರ್ 2ನೆ ಹಂತದ ಬಡಾವಣೆ ನಿರ್ಮಾಣಕ್ಕೆ 1989 ರಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಈ ಪೈಕಿ ಒಂದೂವರೆ ಎಕರೆ ಜಾಗವನ್ನು ವರ್ತುಲ ರಸ್ತೆಗೆ ಬಳಸಿಕೊಳ್ಳಲಾಗಿತ್ತು. ಉಳಿದ ನಾಲ್ಕೂವರೆ ಎಕರೆ ಪೈಕಿ ಒಂದೂವರೆ ಎಕರೆ ಜಾಗವನ್ನು ಬಿಟ್ಟುಕೊಟ್ಟಿರಲಿಲ್ಲ.

ಬಿಡಿಎ ಸ್ವಾಧೀನವನ್ನು ಪ್ರಶ್ನಿಸಿ ಮಾಲಕರು 1989ರಲ್ಲಿ ಸಿಟಿ ಸಿವಿಲ್ ಕೋರ್ಟಿನ ಮೊರೆ ಹೋಗಿದ್ದರಾದರೂ, ಬಿಡಿಎ ಪರವಾಗಿ ತೀರ್ಪು ಬಂದಿತ್ತು. ಇದಲ್ಲದೇ, ಎರಡು ಬಾರಿ ಹೈಕೋರ್ಟ್‍ಗೆ ಹೋಗಿದ್ದರೂ ಅಲ್ಲಿಯೂ ಅವರಿಗೆ ಸೋಲುಂಟಾಗಿತ್ತು. ಆದರೂ, ಈ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿ ಅದರಿಂದ ಆದಾಯ ಗಳಿಸುತ್ತಿದ್ದರು. ಹಲವು ಬಾರಿ ಬಿಡಿಎ ಎಚ್ಚರಿಕೆ ನೀಡಿದ್ದರೂ ತೆರವು ಮಾಡಿರಲಿಲ್ಲ.

ಈ ಹಿನ್ನೆಲೆಯಲ್ಲಿ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಭಾಸ್ಕರ್ ಮತ್ತು ರವಿಕುಮಾರ್ ನೇತೃತ್ವದಲ್ಲಿ ಕಾರ್ಯಪಾಲಕ ಇಂಜಿನಿಯರ್ ಜಿ.ಕುಮಾರ್ ಅವರನ್ನೊಳಗೊಂಡ ಅಧಿಕಾರಿಗಳ ತಂಡವು ಸ್ಥಳೀಯ ಪೊಲೀಸರ ನೆರವಿನಿಂದ 15ಕ್ಕೂ ಹೆಚ್ಚು ಜೆಸಿಬಿಗಳನ್ನು ಬಳಸಿ ವಾಣಿಜ್ಯ ಮಳಿಗೆಗಳು ಹಾಗೂ ಶೆಡ್‍ಗಳನ್ನು ನೆಲಸಮ ಮಾಡಿ ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದೆ.

ಕ್ರಿಮಿನಲ್ ಪ್ರಕರಣ ದಾಖಲು

ಬಿಡಿಎ ಉಸ್ತುವಾರಿಯನ್ನೂ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎμÉ್ಟೀ ಪ್ರಭಾವಿಗಳು ಬಿಡಿಎ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಜಾಗವನ್ನು ವಶಕ್ಕೆ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ. ಅದರಂತೆ ಬಿಡಿಎ ಕ್ರಮ ಕೈಗೊಳ್ಳುತ್ತಿದೆ. ಅಲ್ಲದೆ, ಸ್ವಯಂಪ್ರೇರಿತವಾಗಿ ಜಾಗ ವಾಪಸ್ ಕೊಡದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು.

-ಎಸ್.ಆರ್.ವಿಶ್ವನಾಥ್, ಬಿಡಿಎ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News