ಸಜೀಪನಡು ಘನತ್ಯಾಜ್ಯ ಘಟಕಕ್ಕೆ ಬೀಗ ಜಡಿದ ಶಾಸಕ ಯು.ಟಿ.ಖಾದರ್

Update: 2022-06-28 16:40 GMT

ಬಂಟ್ವಾಳ, ಜೂ.28: ತಾಲೂಕಿನ ಸಜಿಪನಡು ಕಂಚಿನಡ್ಕ ಪದವಿನಲ್ಲಿರುವ ಬಂಟ್ವಾಳ ಪುರಸಭೆಯ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯ ರಾಶಿ ಹಾಕಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಯು.ಟಿ.ಖಾದರ್ ಘಟಕಕ್ಕೆ ಬೀಗ ಜಡಿದರು. 

ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯ ರಾಶಿ ಹಾಕಿರುವುದರಿಂದ ಪರಿಸರದಲ್ಲಿ ಕೆಟ್ಟ ವಾಸನೆ ಬೀರುತ್ತಿದ್ದು ಘಟಕದ ಸಮೀಪದ ಕೆಲವು ಮನೆಗಳ ಜನರಿಗೆ ನಿರಂತರ ಆರೋಗ್ಯದ ಸಮಸ್ಯೆ ಕಾಡುತ್ತಿದ್ದೆ. ಈ ಬಗ್ಗೆ ಗ್ರಾಮಸ್ಥರ ದೂರಿನ ಮೇರೆಗೆ ಮಂಗಳವಾರ ಶಾಸಕ ಯು.ಟಿ.ಖಾದರ್ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಯು‌.ಟಿ.ಖಾದರ್ ಅವರು ಪರಿಶೀಲನೆ ನಡೆಸಿದ ವೇಳೆ ಘಟಕದ ತುಂಬಾ ಅವ್ಯವಸ್ಥೆ ಹಾಗೂ ಅವೈಜ್ಞಾನಿಕವಾಗಿ ತ್ಯಾಜ್ಯ ಸುರಿದಿರುವುದು ಕಂಡು ಬಂತು. ತ್ಯಾಜ್ಯದ ಮೇಲೆ ಬೀಳುವ ಮಳೆ ನೀರು ಘಟಕದ ಒಳಗಿನ ತುಂಬಿದ್ದು ಕಪ್ಪು ಬಣ್ಣಕ್ಕೆ ತಿರುಗಿದೆ. ತ್ಯಾಜ್ಯಕ್ಕೆ ಯಾವುದೇ ರಸಾಯನಿಕ ಸಿಂಪಡಿಸದೆ ಇರುವುದನ್ನು ಕೂಡಾ ಗಮನಿಸಿದ ಯು.ಟಿ.ಖಾದರ್ ಘಟಕದ ಮುಖ್ಯ ಗೇಟ್ ಗೆ ಬೀಗ ಜಡಿದರು. 

ಪರಿಶೀಲನೆ ಬಳಿಕ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಯು.ಟಿ.ಖಾದರ್ ಅಧಿಕಾರಿಗಳ ಮೇಲೆ ಗರಂ ಆದರು. ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡಲು ವ್ಯವಸ್ಥೆ ಮಾಡುವ ವರೆಗೆ ಘಟಕಕ್ಕೆ ತ್ಯಾಜ್ಯ ತರದಂತೆ ತಾಕೀತು ಮಾಡಿದರು. 

ಬಳಿಕ ಮಾತನಾಡಿದ ಯು.ಟಿ.ಖಾದರ್, ಘಟಕದಲ್ಲಿ ಒಣ ಕಸ ಸಂಸ್ಕರಣೆ ಅವಕಾಶ ನೀಡಲಾಗಿತ್ತು. ಆದರೆ ಬಂಟ್ವಾಳ ಪುರಸಭೆಯಿಂದ ಅವೈಜ್ಞಾನಿಕವಾಗಿ ಹಸಿ ತ್ಯಾಜ್ಯ ರಾಶಿ ಹಾಕಲಾಗಿದೆ. ಇದು ಗ್ರಾಮಸ್ಥರ ಆರೋಗ್ಯಕ್ಕೆ ಮಾರಕವಾಗಿದೆ. ಇನ್ನು ಇಲ್ಲಿ ತ್ಯಾಜ್ಯ ಸುರಿಯದಂತೆ ಘಟಕಕ್ಕೆ ಬೀಗ ಜಡಿಯಲಾಗಿದೆ. ಮುಂದಕ್ಕೆ ಅವೈಜ್ಞಾನಿಕವಾಗಿ ಇಲ್ಲಿ ತ್ಯಾಜ್ಯ ತಂದು ಸುರಿದರೆ ಅದರ ವಿರುದ್ಧದ ಹೋರಾಟ ನನ್ನ ನೇತೃತ್ವದಲ್ಲೇ ನಡೆಯಲಿದೆ ಎಂದರು. 

2007ರಲ್ಲಿ ನಿರ್ಮಾಣವಾದ ಈ ಘಟಕದಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡದಂತೆ ಗ್ರಾಮಸ್ಥರಿಂದ ಭಾರೀ ಹೋರಾಟ ನಡೆದಿತ್ತು. ಎರಡು ವರ್ಷದ ಹಿಂದೆ ಶಾಸಕ ಯು.ಟಿ.ಖಾದರ್, ರಾಜೇಶ್ ನಾಯ್ಕ್ ಹಾಗೂ ಜಿಲ್ಲಾಧಿಕಾರಿ ಜೊತೆ ನಡೆದ ಸಭೆಯಲ್ಲಿ ಇಲ್ಲಿ ಒಣ ಕಸ ಮಾತ್ರ ಸಂಸ್ಕರಣೆ ಮಾಡಲು ತೀರ್ಮಾನಿಸಲಾಗಿತ್ತು. ಆರಂಭದ ಕೆಲವು ಸಮಯ ಒಣ ಕಸ ಮಾತ್ರ ಸಂಸ್ಕರಣೆ ಮಾಡುತ್ತಿದ್ದ ಇಲ್ಲಿ ಬಳಿಕ ಹಸಿ ತ್ಯಾಜ್ಯವನ್ನು ತಂದು ರಾಶಿ ಹಾಕಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News