ಶಿಕ್ಷಕರ ವಸತಿಗೃಹ ನಿರ್ಮಾಣಕ್ಕಾಗಿ ಅನುದಾನಕ್ಕೆ ಆದ್ಯತೆ: ಯು.ಟಿ.ಖಾದರ್

Update: 2022-06-28 17:16 GMT

ಕೊಣಾಜೆ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯ ಅಭಿವೃದ್ಧಿಯೊಂದಿಗೆ ವಿದ್ಯಾರ್ಥಿ ವಸತಿಗೃಹ ವಿಸ್ತರಣೆ ಮತ್ತು ಶಿಕ್ಷಕರ ವಸತಿಗೃಹಕ್ಕೆ ಅನುದಾನಕ್ಕೆ ಆದ್ಯತೆ ನೀಡಲಾಗುವುದು ಎಂದು  ವಿಧಾನಸಭಾ ಪ್ರತಿಪಕ್ಷದ ಉಪನಾಯಕ ಹಾಗೂ ಶಾಕ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ಕರ್ನಾಟಕ ಸರಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕೊಣಾಜೆ ಅಸೈಗೋಳಿಯ ಮೊರಾರ್ಜಿ ದೇಸಾಯಿವಸತಿ ಶಾಲೆ ಮತ್ತು ಮೊರಾರ್ಜಿ ದೇಸಾಯಿ ವಸತಿ ಪದವಿಪೂರ್ವ ಕಾಲೇಜು ಇಲ್ಲಿ ಶಿಕ್ಷಕ - ಪೋಷಕರ ಸಭೆ ಮತ್ತು 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಚಾಲನೆ ನೀಡಿ ಮಾತನಾಡಿದರು.

ಈ ಬಾರಿ ಪದವಿಪೂರ್ವ ಕಾಲೇಜು ಶೇ. 100 ಫಲಿತಾಂಶದೊಂದಿಗೆ ಅತ್ಮ ಸಾಧನೆ ಮಾಡಿದ್ದು, ಮೊರಾರ್ಜಿ ದೇಸಾಯಿ ಶಿಕ್ಷಣ ಸಂಸ್ಥೆಗಳಲ್ಲಿ ಈ ಬಾರಿಯ ಎಸ್‍ಎಸ್‍ಎಲ್‍ಸಿಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದಿರುವುದು ಈ ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ತೋರಿಸುತ್ತದೆ. ಈ ಶೈಕ್ಷಣಿಕ ವರ್ಷದಿಂದ ಸಿಬಿಎಸ್‍ಸಿ ಪಠ್ಯಕ್ರಮ ಆರಂಭಗೊಂಡಿರುವುದರಿಂದ ಉಚಿತವಾಗಿ ಸಿಗುವ ಈ ಶಿಕ್ಷಣದ ಸದುಪಯೋಗವನ್ನು ಎಲ್ಲಾ ಬಡ ವಿದ್ಯಾರ್ಥಿಗಳು ಪಡೆಯುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ರಾಮಕೃಷ್ಣ ಪ್ರೌಢಶಾಲೆ ಹರೇಕಳ ಇಲ್ಲಿನ ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ಕೊಣಾಜೆ ದಿಕ್ಸೂಚಿ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ  ಚಂಚಲಾಕ್ಷಿ  ಮಾಜಿ ಅಧ್ಯಕ್ಷರಾದ ಅಚ್ಯುತ ಗಟ್ಟಿ, ನಝರ್ ಪಟ್ಟೋರಿ, ಗ್ರಾಮ ಪಂಚಾಯತ್ ಸದಸ್ಯ ದೇವಣ್ಣ ಶೆಟ್ಟಿ, ಜಿಲ್ಲಾ ಆಲ್ಪಸಂಖ್ಯಾತ ಇಲಾಖೆಯ ಅಧಿಕಾರಿ ಅಂಜನಪ್ಪ, ತಾಲೂಕು ಅಧಿಕಾರಿ ಮಂಜುನಾಥ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಾಬಲೇಶ್, ಪ್ರೌಢಶಾಲಾ ಮುಖ್ಯ ಶಿಕ್ಷಕ  ನಾಗರಾಜ್ ರೆಡ್ಡಿ, ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News