ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ | ಈದ್ ನಮಾಝ್‍ಗೆ ತಡೆ ಇಲ್ಲ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

Update: 2022-06-29 11:23 GMT
ಫೈಲ್ ಚಿತ್ರ- ಈದ್ಗಾ ಮೈದಾನ

ಬೆಂಗಳೂರು, ಜೂ.29:ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದ ಸಂಬಂಧ ಮೂಲ ಮಾಲಕರಿಗೆ ದಾಖಲೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದರೆ, ಬಕ್ರೀದ್ ಹಬ್ಬದ ಸಾಮೂಹಿಕ ನಮಾಝ್ ನಿರ್ವಹಿಸಲು ಯಾವುದೇ ತಡೆ ಇಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಬುಧವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದು, ಅದರಂತೆ ಮಕ್ಕಳ ಕ್ರೀಡಾ ಚಟುವಟಿಕೆ, ಮುಸ್ಲಿಮರ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ.ಆದರೆ, ಈ ಜಾಗದ ಮಾಲಕತ್ವ ಯಾರಿಗೂ ಸೇರಿಲ್ಲ. ಒಂದು ವೇಳೆ ಯಾರಾದರೂ, ತಮ್ಮದೆಂದು ಭಾವಿಸಿದ್ದರೆ, ಸೂಕ್ತ ದಾಖಲೆಗಳನ್ನು ಸಲ್ಲಿಕೆ ಮಾಡಲಿ ಎಂದು ತಿಳಿಸಿದರು.

ಈ ಪ್ರಕರಣದಲ್ಲಿ ಸೆಂಟ್ರಲ್ ಮುಸ್ಲಿಮ್ ಅಸೋಸಿಯೇಷನ್(ಸಿಎಂಎ) ಅವರ ಪಾತ್ರ ಇಲ್ಲ.ಇನ್ನೂ, ವಕ್ಫ್ ಬೋರ್ಡ್ ಮಾಲಕತ್ವದ ಕುರಿತು ದಾಖಲೆ ಸಲ್ಲಿಕೆ ಮಾಡಿದರೆ, ಕಾನೂನು ರೀತಿ ಪರಿಶೀಲನೆ ನಡೆಸಿ ಖಾತೆ ಮಾಡಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.

ಈ ಹಿಂದೆ ಚಾಮರಾಜಪೇಟೆ ಮೈದಾನ ಬಿಬಿಎಂಪಿ ಸ್ವತ್ತಲ್ಲ ಎಂದು ಮಾಧ್ಯಮಗಳಲ್ಲಿ ನನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ.ಆದರೆ, ನಾನು ಯಾರು ಸೂಕ್ತ ರೀತಿಯಲ್ಲಿ ದಾಖಲೆ ಸಲ್ಲಿಸಿದರೆ, ಅವರಿಗೆ ಖಾತಾ ಮಾಡಿ ಕೊಡುವುದಾಗಿ ಹೇಳಿದ್ದೇ. ಈಗಲೂ ಈ ಹೇಳಿಕೆಗೆ ಬದ್ಧವಾಗಿದ್ದೇನೆ ಎಂದು ನುಡಿದರು.

1965 ರಲ್ಲಿ ವಕ್ಫ್ ಬೋರ್ಡ್ ಒಂದು ಅಧಿಸೂಚನೆ ಮಾಡಿದೆ. ಇದು ಸುನ್ನಿ ಬೋರ್ಡ್ ಗೆ ಸೇರಿದ ಜಾಗ ಎಂದೂ ಉಲ್ಲೇಖಿಸಲಾಗಿದೆ. ಮತ್ತೊಂದೆಡೆ, ಇದೂವರೆಗೂ ಇದು ನಮ್ಮ ಜಾಗವೆಂದು ವಕ್ಫ್ ಬೋರ್ಡ್ ಸಹ ದಾಖಲೆ ನೀಡಿಲ್ಲ. 1974ರಲ್ಲಿ ಸಮೀಕ್ಷೆ ನಡೆದಾಗಲೂ ವಕ್ಫ್ ಬೋರ್ಡ್ ಆಕ್ಷೇಪಣೆ ಸಲ್ಲಿಸಿಲ್ಲ ಎಂದು ತಿಳಿಸಿದರು.

ಸ್ಥಳೀಯ ಶಾಸಕ ಝಮೀರ್ ಅಹ್ಮದ್ ಖಾನ್ ಅವರ ಒತ್ತಡಕ್ಕೆ ಬಿಬಿಎಂಪಿ ಮಣಿದಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಯಾರ ಒತ್ತಡಕ್ಕೂ ಮಣಿದಿಲ್ಲ. ಒಮ್ಮೆ ಅವರು ಸಿಎಂಎ ವತಿಯಿಂದ ದಾಖಲಾತಿ ತಂದಿದ್ದರೂ, ಆದರೆ, ನಾವು ಸಿಎಂಎಗೆ ಯಾವುದೇ ಅಧಿಕಾರ ಇಲ್ಲ ಎಂದಿದ್ದೇ ಎಂದು ತುಷಾರ್ ಗಿರಿನಾಥ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News