ಬಿಜೆಪಿ ಹೆಣದ ರಾಜಕೀಯ ಮಾಡುವ ಉದ್ದೇಶವೇನು?: ದಿನೇಶ್ ಗುಂಡೂರಾವ್

Update: 2022-06-29 12:59 GMT

ಬೆಂಗಳೂರು, ಜೂ. 29: ‘ರಾಜಸ್ಥಾನದ ಕನ್ಹಯ್ಯ ಲಾಲ್ ಹತ್ಯೆಯನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸಲೇಬೇಕು. ಧಮಾರ್ಂಧತೆಯ ಅಮಲು ತಲೆಗೇರಿಸಿಕೊಂಡಿರುವ ರಕ್ತಪಿಪಾಸುಗಳು ಮಾತ್ರ ಇಂತಹ ಹೇಯ ಕೃತ್ಯ ನಡೆಸಲು ಸಾಧ್ಯ. ಈ ಹತ್ಯೆಯನ್ನು ಯಾರೇ ಸಂಭ್ರಮಿಸಿದರೂ ಅವರು ಮನುಷ್ಯತ್ವ ಇಲ್ಲದ ಮೃಗಗಳಿಗೆ ಸಮ. ಅದೇ ರೀತಿ ಪ್ರತಿ ಹತ್ಯೆಯಲ್ಲೂ ರಾಜಕೀಯ ಮಾಡುವವರು ಮೃಗಗಳೆ ಆಗಿರುತ್ತಾರೆ' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಕನ್ಹಯ್ಯ ಹತ್ಯೆಯನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವ ಕಾರಣ ಕನ್ಹಯ್ಯ ಹತ್ಯೆಯಾಗಿದೆ ಎಂದು ಬೊಬ್ಬಿಡುತ್ತಿರುವ ಬಿಜೆಪಿ ವರ್ತನೆ ಬಾಲಿಶತನ. ಇತ್ತೀಚೆಗೆ ಶಿವಮೊಗ್ಗದಲ್ಲಿ ಹರ್ಷ ಎಂಬ ಯುವಕನ ಕೊಲೆಯಾಯ್ತು. ಆಗ ರಾಜ್ಯದಲ್ಲಿದಿದ್ದು ಇದೇ ಬಿಜೆಪಿ ಸರಕಾರ. ಹಾಗಾದರೆ ಹರ್ಷನ ಕೊಲೆಯ ಹೊಣೆಗಾರಿಕೆ ಈಗಿನ ಬಿಜೆಪಿ ಸರಕಾರದ್ದೆ?' ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

‘ಧರ್ಮದ ಅಫೀಮು ತಿಂದಿರುವ ಕೋಮು ಕ್ರಿಮಿಗಳಿಗೆ ಯಾವುದೇ ಸರಕಾರವಿದ್ದರೂ ಅಂಜಿಕೆಯಿರುವುದಿಲ್ಲ. ಇಂತಹ ಕ್ರಿಮಿಗಳನ್ನು ಯಾವುದೇ ಮುಲಾಜಿಲ್ಲದೆ ಹೆಡೆಮುರಿ ಕಟ್ಟಿ ಹುಟ್ಟಡಗಿಸಬೇಕು. ಮನುಷ್ಯತ್ವ ಮರೆತ ಇಂತಹ ಕ್ರಿಮಿಗಳ ಹುಟ್ಟಡಗಿಸಲು ಯಾರ ತಕರಾರು ಇಲ್ಲ. ಹೀಗಿರುವಾಗ ಬಿಜೆಪಿ ಪ್ರತಿ ಹತ್ಯೆಯಲ್ಲೂ ಹೆಣದ ರಾಜಕೀಯ ಮಾಡುವ ಉದ್ದೇಶವೇನು?' ಎಂದು ದಿನೇಶ್ ಗುಂಡೂರಾವ್ ಕೇಳಿದ್ದಾರೆ.

‘ಕನ್ಹಯ್ಯರನ್ನು ಹತ್ಯೆ ಮಾಡಿದ ಇಬ್ಬರು ಪಾತಕಿಗಳನ್ನು ರಾಜಸ್ಥಾನ ಸರಕಾರ ಈಗಾಗಲೇ ಬಂಧಿಸಿದೆ. ಈ ಇಬ್ಬರು ಕಿರಾತಕರ ಕೃತ್ಯ ಯಾವ ಭಯೋತ್ಪಾದಕ ಕೃತ್ಯಕ್ಕೂ ಕಡಿಮೆಯಿಲ್ಲ. ರಾಜಸ್ಥಾನ ಸರಕಾರ ಈ ದುಷ್ಟರ ವಿರುದ್ದ ತ್ವರಿತಗತಿಯ ವಿಚಾರಣೆ ನಡೆಸಿ ಉಗ್ರ ಶಿಕ್ಷೆಯಾಗುವಂತೆ ನೋಡಿಕೊಳ್ಳಲಿ. ಈ ಪ್ರಕರಣದ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಲಿ' ಎಂದು ಅವರು ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News