ಮಂಗಳೂರು ವಿವಿ; ಬಸವರಾಜ ಕಟ್ಟೀಮನಿ, ಸಾರಾ ಅಬೂಬಕ್ಕರ್ ಬದುಕು ಸಾಧನೆ ಕುರಿತ ವಿಚಾರಸಂಕಿರಣ, ಪ್ರಶಸ್ತಿ ಪ್ರದಾನ

Update: 2022-06-29 13:34 GMT

ಕೊಣಾಜೆ: ನವೋದಯ ಸಾಹಿತ್ಯ, ನವ್ಯ ಸಾಹಿತ್ಯಗಳ ನಡುವೆ ಬಂದ ಸಾಹಿತ್ಯ ಪಂಥವೇ ಪ್ರಗತಿಶೀಲ ಸಾಹಿತ್ಯ ಪಂಥ.  ಈ ಪ್ರಗತಿಶೀಲ ಸಾಹಿತ್ಯ ಪಂಥದ ಸಾಹಿತಿಗಳಲ್ಲಿ ಬಸವರಾಜ ಕಟ್ಟೀಮನಿ ಹಾಗೂ ಸಾರಾ ಅಬೂಬಕ್ಕರ್ ಅವರ ಬರಹಗಳು  ಸರ್ವಶ್ರೇಷ್ವವಾದುದು ಎಂದು ಮಂಗಳೂರು ವಿವಿ ಪ್ರಾಧ್ಯಾಪಕ , ಜಾನಪದ ವಿದ್ವಾಂಸ ಪ್ರೊ. ಅಭಯಕುಮಾರ್ ಅವರು ಹೇಳಿದರು.

ಅವರು ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಬೆಳಗಾವಿ, ಮಂಗಳೂರು ವಿವಿಯ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಬಸವರಾಜ್ ಕಟ್ಟೀಮಣಿ ಮತ್ತು ಸಾರಾ ಅಬೂಬಕ್ಕರ್ ಅವರ ಬದುಕು ಸಾಧನೆ ಕುರಿತ ವಿಚಾರ ಸಂಕಿರಣ ಹಾಗೂ ಸಾರಾ ಅಬೂಬಕ್ಕರ್ ಅವರಿಗೆ 2021 ನೇ ಸಾಲಿನ ಬಸವರಾಜ ಕಟ್ಟೀಮನಿ ಕಾದಂಬರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಾವ್ಯ ಪ್ರಕಾರವನ್ನು ಬಿಟ್ಟು ಕಾದಂಬರಿ ಪ್ರಕಾರ ಆಯ್ಕೆ ಮಾಡುವಾಗ ವಿಶಿಷ್ಟವಾದ ಸಿದ್ದಾಂತವನ್ನು ಕೂಡ ಪ್ರಗತಿಶೀಲ ಸಾಹಿತಿಗಳು ಒದಗಿಸಿಕೊಟ್ಟಿದ್ದಾರೆ. ಸಾರಾ ಅಬೂಬಕ್ಕರ್  ಅವರಿಗೆ ಸಮುದಾಯದಲ್ಲಿ ಹಲವಾರು ತೊಂದರೆಗಳು ಎದುರಾದರೂ ಅವನ್ನೆಲ್ಲ ಎದುರಿಸಿ ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆ ಕೊಟ್ಟವರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ 'ಬಸವರಾಜ ಕಟ್ಟೀಮನಿ ಸಾಹಿತ್ಯವಲೋಕನ' ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಪೂವಪ್ಪ ಕಣಿಯೂರು ಅವರು, ಕತ್ತಲಾದ ಮೇಲೆ ಬೆಳಕು ಹರಿಯಲೇ ಬೇಕು ಎಂಬ ಭರವಸೆಯ ಚಿಂತನೆಗಳು ಕಟ್ಟೀಮನಿ ಅಥವಾ ಪ್ರಗತಿಪರ ಚಿಂತಕರ ಬರವಣಿಗೆಯಲ್ಲಿ ಕಾಣಲು ಸಾಧ್ಯವಾಗುತ್ತದೆ. ಪ್ರಗತಿಪರ ಚಿಂತನೆಗಳಲ್ಲಿ ತೊಡಗಿಸಿಕೊಂಡವರಿಗೆ ಸೋಲೇ ಆಗಿರಬಹುದು. ಪ್ರಗತಿಪರ ರನ್ನು  ಇಂದು ತಮಾಷೆಯ ರೂಪದಲ್ಲಿ ನೋಡುವ ಪರಿಸ್ಥಿತಿಯೂ ಇರಬಹುದು. ಆದರೆ ಜಡತ್ವದ ಸಮಾಜವನ್ನು ಈ ಪ್ರಗತಿಪರ ಚಿಂತನೆಗಳು ಎಚ್ಚರಗೊಳಿಸಿವೆ ಎಂಬುದನ್ನು  ಮರೆಯಲು ಸಾಧ್ಯವಿಲ್ಲ. ಬಸವರಾಜ ಕಟ್ಟೀಮಣಿ ಅವರ ಬರವಣಿಗೆಯಲ್ಲಿ‌ ಇಂತಹ ಸಂಗತಿಗಳನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.

ಸಮಾಜದ ಅಜ್ಞಾನ, ಬಡತನ ಸೇರಿದಂತೆ ಅಸಮಾನತೆಯನ್ನು ಎತ್ತಿ ತೋರಿಸುವ ಅವರ ಬರಹಗಳಲ್ಲಿ ಸತ್ಯ, ನ್ಯಾಯದ ದೃಷ್ಟಿಯನ್ನು ಕಾಣುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ಕರಾವಳಿ ಲೇಖಕಿಯರ ಹಾಗೂ ವಾಚಕಿಯರ ಸಂಘದ ಅಧ್ಯಕ್ಷರಾದ , ಪ್ರಾಧ್ಯಾಪಕಿ ಜ್ಯೋತಿ ಚೇಳ್ಯಾರು ಅವರು, 'ಸಾರಾ ಅಬೂಬಕ್ಕರ್: ವ್ಯಕ್ತಿ ಅಭಿವ್ಯಕ್ತಿ' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ,  ಹೆಣ್ಣು ಮಕ್ಕಳು ಶಿಕ್ಷಣ ಪಡೆಯಬೇಕು, ಬದಲಾವಣೆ ಕುಟುಂಬದಿಂದಲೇ ಆಗಬೇಕು ಎನ್ನುವ  ಧೋರಣೆ ಸಾರಾ ಅಬೂಬಕ್ಕರ್ ಅವರದಾಗಿತ್ತು. ಅವರ ಬರಹಗಳಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ರಾಜಕೀಯ ಪ್ರಜ್ಞೆ, ಜಾಗೃತಿಯ ತುಡಿತವನ್ನು ಕಾಣಬಹುದು.

ಸ್ತ್ರೀಪರ ಚಿಂತಕಿಯಾಗಿದ್ದು ಕೊಂಡು ಸತ್ಯದ ಧಾರೆಯ ನಿರೂಪಕಿ, ಸಾಮಾಜಿಕ ಬದ್ಧತೆಯ ಶೋಧವುಳ್ಳ  ಸಾರಾ ಅಬೂಬಕ್ಕರ್ ಅವರು  ಯುವ ಲೇಖಕರಿಗೆ, ಸಾಹಿತಿಗಳಿಗೆ ಮಾದರಿಯಾಗಿದ್ದಾರೆ ಎಂದರು.

ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ.ಸೋಮಣ್ಣ ಹೊಂಗಳ್ಳಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಬೆಳಗಾವಿ ಬಸವರಾಜ ಕಟ್ಟೀಮನಿ ಪ್ರತಿಷ್ಟಾನದ ಅಧ್ಯಕ್ಷರಾದ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಅವರು ಅಧ್ಯಕ್ಷತೆ ಯನ್ನು ವಹಿಸಿ ಮಾತನಾಡಿ,  ಕಟ್ಟೀಮನಿ ಹಾಗೂ ಸಾರಾ ಇಬ್ಬರೂ ಲೇಖಕರು ವೈಚಾರಿಕತೆ, ಸಾಮಾಜಿಕ ಬದ್ಧತೆಯನ್ನು ಹೊಂದಿದ ಚಿಂತನಾಶೀಲರು. ಇಬ್ಬರೂ ಗಟ್ಟಿತನದ ಬರಹದ ಹೋರಾಟಗಾರರಾಗಿದ್ದಾರೆ. ಹೀಗಾಗಿ ಕಟ್ಟೀಮನಿ ಪ್ರಶಸ್ತಿ ಅರ್ಹವಾಗಿಯೇ ಸಾರಾ ಅಬೂಬಕ್ಕರ್ ಅವರಿಗೆ ದೊರೆತಿದೆ. ಸಾರಾ ಅಬೂಬಕ್ಕರ್ ಅವರಿಗೆ ಆರೋಗ್ಯ ತೊಂದರೆಯಿದ್ದು ಆಸ್ಪತ್ರೆಗೆ ದಾಖಲಾಗಿರುವ ಕಾರಣ ಅಲ್ಲಿಯೇ ತೆರಳಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ನಾಗಪ್ಪ ಗೌಡ, ಡಾ.ಧನಂಜಯ ಕುಂಬ್ಳೆ, ಡಾ.ಲತಾ ಅಭಯ್ ಕುಮಾರ್, ಕಟ್ಟೀಮನಿ ಪ್ರತಿಷ್ಠಾನದ ವಿದ್ಯಾವತಿ ಭಜಂತ್ರಿ, ಶಿವಕುಮಾರ್ ಕಟ್ಟೀಮನಿ, ಪ್ರೊ.ಚಂದ್ರಶೇಖರ, ಡಾ.ಬಾಳಸಾಹೇಬ, ಡಾ.ಬಸವರಾಜ ಸಾದರ, ಶಿರೀಷ ಜೋಶಿ ಹಾಗೂ ಕನ್ನಡ ವಿಭಾಗದ ಸಂಶೋಧಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸದಸ್ಯರಾದ ಡಾ.ಕೆ.ಆರ್. ದುರ್ಗಾದಾಸ್ ಅವರು ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಡಾ.ರಾಮಕೃಷ್ಣ ಮರಾಠೆ ಅವರು ವಂದಿಸಿದರು. ಉಪನ್ಯಾಸಕರಾದ ಡಾ.ಯಶು ಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News