ಮೆಟ್ರೋದಲ್ಲಿ ಸಾವರ್ಕರ್ ಜಾಹೀರಾತು ಸರಿಯಲ್ಲ: ಕೆಪಿಸಿಸಿ ವಕ್ತಾರ ರಮೇಶ್ ಬಾಬು

Update: 2022-06-29 14:36 GMT

ಬೆಂಗಳೂರು, ಜೂ.29: ಮೆಟ್ರೋ ರೈಲುಗಳಲ್ಲಿ ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಪ್ರಯಾಣ ಮಾಡುವ ಅವಧಿಯಲ್ಲಿ ಸಾವರ್ಕರ್ ಅವರ ವಿಚಾರದ ಬಗ್ಗೆ ಜಾಹೀರಾತು ನೀಡಲಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮೆಟ್ರೋದವರು ನಾಮಫಲಕದಲ್ಲಿ ಹಿಂದಿ ಹೇರಿಕೆ ಮಾಡಲು ಮುಂದಾದಾಗ ಕನ್ನಡಿಗರ ಹೋರಾಟದ ನಂತರ ಕನ್ನಡ ಅಳವಡಿಸಿದ್ದರು. ಈಗ ಮತ್ತೆ ಅದೇ ರೀತಿಯ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಎಚ್ಚರಿಸಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ, ದೇಶದ ಮೊದಲ ರಾಷ್ಟ್ರಪತಿ, ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣನವರ ವಿಚಾರವನ್ನು ತಿಳಿಸದೆ ಸಾವರ್ಕರ್ ಅವರ ಕುರಿತು ಜಾಹೀರಾತು ನೀಡುತ್ತಿರುವುದು ಸರಿಯಲ್ಲ, ಈ ಜಾಹೀರಾತು ನೀಡಿದವರು ಯಾರು ಎಂದು ನಮ್ಮ ಗಮನಕ್ಕೆ ಬಂದಿಲ್ಲ. ಕೂಡಲೇ ಮೆಟ್ರೋ ಅಧಿಕಾರಿಗಳು ಈ ಜಾಹೀರಾತನ್ನು ತೆಗೆಯಬೇಕು ಎಂದು ಕಾಂಗ್ರೆಸ್ ಪಕ್ಷದ ಪರವಾಗಿ ಆಗ್ರಹಿಸುತ್ತೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News