VIDEO - ಅಯೋಧ್ಯೆ ರಥಯಾತ್ರೆವರೆಗೆ ಆಂತರಿಕವಾಗಿ ಉಗ್ರಗಾಮಿಗಳು ಇರಲಿಲ್ಲ: ವೀರಪ್ಪ ಮೊಯ್ಲಿ

Update: 2022-06-29 18:42 GMT

ಬೆಂಗಳೂರು, ಜೂ.29: ನಮ್ಮ ದೇಶದಲ್ಲಿ ಅಯೋಧ್ಯೆ ರಥಯಾತ್ರೆ ಆಗುವವರೆಗೆ ಸ್ಥಳೀಯವಾಗಿ ಭಯೋತ್ಪಾದನೆ, ಆಂತರಿಕವಾಗಿ ಉಗ್ರಗಾಮಿಗಳು ಇರಲಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಡಾ.ಎಂ.ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ನಡೆದ ಘಟನೆ ಕುರಿತು ಬುಧವಾರ ನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂತಹ ಘಟನೆಗಳು ಆಗಲೇಬಾರದು. ಕೇಂದ್ರದಲ್ಲಿ ಯುಪಿಎ-1 ಹಾಗೂ ಯುಪಿಎ-2 ಸರಕಾರ ಅಧಿಕಾರದಲ್ಲಿದ್ದಾಗ ಇಂತಹ ಘಟನೆಗಳಿಗೆ ಅವಕಾಶ ಕೊಟ್ಟಿರಲಿಲ್ಲ ಎಂದರು.

ಅಯೋಧ್ಯೆ ಘಟನೆ ಸಂದರ್ಭದಲ್ಲಿ ನಾನು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದೆ. ಒಂದೂವರೆ ದಿನದಲ್ಲಿ ಇಲ್ಲಿನ ಗಲಭೆ ನಿಂತು ಹೋಯಿತು. ಅದೇ ರೀತಿ ಉರ್ದು ಸುದ್ದಿ ಪ್ರಸಾರದ ವಿಚಾರದಲ್ಲಿ ನಡೆದ ಗಲಭೆಯನ್ನು ಒಂದೇ ದಿನದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಲಾಗಿತ್ತು. ರಾಜ್ಯ ಹಾಗೂ ರಾಷ್ಟ್ರದ ಆಡಳಿತ ಇದನ್ನು ನಿಯಂತ್ರಿಸಬೇಕು ಎಂದು ಅವರು ಹೇಳಿದರು. 

ನಮ್ಮ ದೇಶದಲ್ಲಿ ಅಯೋಧ್ಯೆ ರಥಯಾತ್ರೆ ಆಗುವವರೆಗೆ ಸ್ಥಳೀಯವಾಗಿ ಭಯೋತ್ಪಾದನೆ, ಆಂತರಿಕವಾಗಿ ಉಗ್ರಗಾಮಿಗಳು ಇರಲಿಲ್ಲ. ರಥಯಾತ್ರೆ ನಂತರ ದೇಶಿಯ ಉಗ್ರಗಾಮಿಗಳನ್ನು ತಯಾರು ಮಾಡುವ, ಪ್ರಲೋಭನೆ ನೀಡುವ ಕೆಲಸವನ್ನು ಅಂತರರಾಷ್ಟ್ರೀಯ ಮಟ್ಟದ ಉಗ್ರಗಾಮಿಗಳು ಮಾಡಿದರು. ಉಗ್ರಗಾಮಿಗಳ ಚಟುವಟಿಕೆಗಳನ್ನು ಸಂಪೂರ್ಣವಾಗಿ ಹತ್ತಿಕ್ಕುವ ಕೆಲಸ ಮಾಡಬೇಕು ಎಂದು ವೀರಪ್ಪ ಮೊಯ್ಲಿ ತಿಳಿಸಿದರು.

ಘಟನೆ ನಡೆದ ನಂತರ ತನಿಖೆ ಮಾಡುವುದು ಬೇರೆ ವಿಚಾರ. ಆದರೆ, ಇಂತಹ ಘಟನೆಗಳಿಗೆ ಎಲ್ಲಿ ಪ್ರೋತ್ಸಾಹ, ಕುಮ್ಮಕ್ಕು, ತರಬೇತಿ ಸಿಗುತ್ತಿದೆ ಅನ್ನೋದನ್ನು ಕಂಡು ಹಿಡಿಯಬೇಕು. ಇದರ ಜೊತೆಗೆ, ಮತ್ತೊಂದು ಕಡೆಯಿಂದ ಪ್ರಚೋದನೆಯೂ ಬರಬಾರದು. ಶಾಂತಿ, ನೆಮ್ಮದಿ ಸ್ಥಾಪನೆ ಮಾಡುವ ಕೆಲಸ ಸರಕಾರ ಮಾಡಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News