ಕುಂದಾಪುರ; ದಲಿತರಿಬ್ಬರ ಮನೆ ಸೇರಿ ಹಲವು ಮನೆಗಳು ಜಲಾವೃತ್ತ

Update: 2022-06-30 13:45 GMT

ಕುಂದಾಪುರ : ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಪಂ ವ್ಯಾಪ್ತಿಯ ಪಡು ಚಾವಡಿಬೆಟ್ಟು ಎಂಬಲ್ಲಿನ ಎಂಟತ್ತು ಮನೆಗಳು ಜಲಾವೃತ್ತಗೊಂಡಿದ್ದು, ಹೆಂಗಸರು, ಮಕ್ಕಳು ಸೇರಿದಂತೆ ಹತ್ತಾರು ಮಂದಿ ಜಲ ದಿಗ್ಭಂಧನಕ್ಕೊಳಗಾಗಿದ್ದಾರೆ.

ಇಲ್ಲಿನ ನಿವಾಸಿಗಳಾದ ಪರಿಶಿಷ್ಟ ಜಾತಿಯ ರಾಧಾ, ಗಿರಿಜಾ ಅವರ ಮನೆ ಸಹಿತ ಅಕ್ಕಪಕ್ಕದ ಐದಾರು ಮನೆಗಳು ಮಳೆಯಿಂದ ಜಲಾವೃತವಾದ ಬಗ್ಗೆ ವರದಿಯಾಗಿದೆ. ಮನೆಯಿಂದ ಹೊರಗೆ ಬರಬೇಕಾದರೆ ಎದೆ ಎತ್ತರಕ್ಕೆ ನಿಂತಿರುವ  ನೀರಲ್ಲಿ ಹೆಜ್ಜೆಹಾಕಿ ಬರಬೇಕಾದ ಅನಿವಾರ್ಯತೆ ಇದೆ.

ಬೀಜಾಡಿ, ಗೋಪಾಡಿ ಭಾಗದ ರಾಷ್ಟ್ರೀಯ ಹೆದ್ದಾರಿಯಿಂದ ಹಿಡಿದು ಅಕ್ಕ ಪಕ್ಕದಿಂದ ಹರಿದು ಬರುವ ಮಳೆ ನೀರು,  ಹೊಳೆ ಸಾಲು ಎಂದು ಕರೆಯ್ಪಡುವ ಕಾಲುವೆ ಮೂಲಕವಾಗಿ ಸಮುದ್ರ ಸೇರುತ್ತಿತ್ತು. ಇತ್ತೀಚೆಗೆ ಕೆಲ ವರ್ಷಗಳಿಂದ ನೀರಿನ ಪ್ರಮಾಣ ಜಾಸ್ತಿಯಾಗಿದ್ದು ಹೊಳೆಸಾಲು ಕಿರಿದಾಗಿದೆ. ಮಾತ್ರವಲ್ಲದೆ ಹೂಳೆತ್ತದ ಕಾರಣ ಕಾಲುವೆಯಲ್ಲಿ ಸರಿಯಾಗಿ ನೀರು ಹರಿಯದೆ ಸಮೀಪದ ಕೃಷಿಭೂಮಿಗಳಿಗೆ ನುಗ್ಗುತ್ತಿದೆ. ಇನ್ನು ಗೋಪಾಡಿ ಕಾಂತೇಶ್ವರ ದೇವಸ್ಥಾನ ಸಮೀಪದಿಂದ ಸಮುದ್ರ ಕಿನಾರೆಯತ್ತ ಸಾಗುವ ರಸ್ತೆಯಿಂದ ಸಾಗಿದಾಗ ಸಿಗುವ ಸ್ವಾಮಿ ವಿವೇಕಾನಂದ ರಸ್ತೆಯ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿದೆ.

ಅನಾರೋಗ್ಯ ಪೀಡಿತರು ಕಂಗಾಲು: ಪಡುಚಾವಡಿಬೆಟ್ಟು ಪ್ರದೇಶದಲ್ಲಿ ಎರಡು ಪ.ಜಾತಿ ಕುಟುಂಬ ಸಹಿತ ಐದಾರು ಮನೆಗಳಿಗೆ ಮಳೆ ನೀರು ನುಗ್ಗಿದೆ. ಇಲ್ಲಿನ ಶೀನ ಮೊಗವೀರ ಪ್ಯಾರಾಲಿಸಿಸ್ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಮನೆಯೂ ಜಲಾವೃತವಾಗಿದೆ. ಮಿಣ್ಕ ಮೊಗವೀರ ಎನ್ನುವವರ ಮಗಳು ತುಂಬು ಗರ್ಭಿಣಿಯಾಗಿದ್ದು ಮನೆ ನೀರಲ್ಲಿ ಮುಳುಗಡೆಯಾಗಿ ಜಲ ದಿಗ್ಭಂಧನ ಪರಿಸ್ಥಿತಿ ನಿರ್ಮಾಣವಾಗಿದೆ. 

ಉಳಿದಂತೆ ಹರೀಶ್, ಗಿರೀಶ್ ಎನ್ನುವವರ ಮನೆ ಸಹಿತ ಮಿಕ್ಕ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ.  ಗುರುವಾರ ಬೆಳಗಿನಿಂದ ಈ ಭಾಗದ ಮಂದಿ ಕೃತಕ ನೆರೆಯಿಂದಾಗಿ ಸಮಸ್ಯೆ ಅನುಭವಿಸುತ್ತಿದ್ದರೂ ಕೂಡ ಸಂಜೆ ತನಕ ಸ್ಥಳಿಯಾಡಳಿತ ಮಾತ್ರ ಯಾವುದೇ ಪೂರಕ ಸ್ಪಂದನೆ ನೀಡಿಲ್ಲ ಎನ್ನಲಾಗಿದೆ. ಸಂಜೆ ವೇಳೆ ಸ್ಥಳಿಯಾಡಳಿತ ಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿದ್ದು ಆಗ ಸ್ಥಳೀಯರು ಅಸಮಾಧಾನ ಹೊರಹಾಕಿದರು.

ಸ್ಥಳಕ್ಕೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ ಭೇಟಿ ನೀಡಿ ಸಮಸ್ಯೆಗೊಳಗಾದ ಕುಟುಂಬಗಳಿಗೆ ಧೈರ್ಯ ತುಂಬಿದರು.

"ಪೂರ್ವಜರ ಕಾಲದಿಂದಲೂ ಇಲ್ಲೇ ವಾಸಿಸುತ್ತಿದ್ದೇವೆ. ವಿದ್ಯಾರ್ಥಿಗಳು, ಅನಾರೋಗ್ಯ ಪೀಡಿತರು ಇಲ್ಲಿ ತಿರುಗಾಡಲು ಹರಸಾಹಸ ಪಡಬೇಕು. ಸಂಬಂಧ ಪಟ್ಟವರಿಗೆ ತಿಳಿಸಿ ಸಾಕಾಗಿದೆ. ನಾವು ಸರಕಾರದವರ ಲೆಕ್ಕಕ್ಕೆ ಇಲ್ಲ ಅನ್ನಿಸುತ್ತಿದೆ".
-ರಾಧಾ, ಸ್ಥಳೀಯ ದಲಿತ ಮಹಿಳೆ

"ಕಳೆದ ಮೂರ್ನಾಲ್ಕು ದಶಕಗಳಿಂದ ಪ.ಜಾತಿ ಕುಟುಂಬ ಇಲ್ಲಿ ಸಮಸ್ಯೆ ಅನುಭವಿಸುತ್ತಿದೆ. ಈ ಬಾರೀ ಮಾತ್ರ ಮಳೆಯಿಂದಾಗಿ ಮನೆಯಿಂದ ಹೊರಗೆ ಕಾಲಿಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದು ನಾಚಿಕೆಗೇಡಿನ ವ್ಯವಸ್ಥೆ. ಎಸ್ಸಿ-ಎಸ್ಟಿ ಅನುದಾನವನ್ನು ಅಗತ್ಯವಿಲ್ಲದಲ್ಲಿ ಬಳಸದೇ, ಇಂತಹ ಪ್ರದೇಶದಲ್ಲಿ ರಸ್ತೆ ಮೊದಲಾದ ಸೌಕರ್ಯಕ್ಕೆ ಉಪಯೋಗಿಸಬೇಕು. ಮುಂದಿನ ಮಳೆಗಾಲ ದೊಳಗೆ ಎರಡು ಮನೆಗಳು ಆಗಬೇಕು. ಈ ಹಿಂದೆ ಜಿಲ್ಲಾಧಿಕಾರಿಗಳ ಸಹಿತ ಸಂಬಂದಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ನಮ್ಮ ತಾಳ್ಮೆಯನ್ನು ಅಸಹಾಯಕತೆ ಎಂದು ತಿಳಿದು ವ್ಯವಸ್ಥೆ ದುರುಪಯೋಗ ಮಾಡಲು ಹೊರಟರೆ ಗ್ರಾಮಪಂಚಾಯತ್ ಕಚೇರಿ ಮುಂದೆ ಅಹೋರಾತ್ರಿ ಧರಣಿ ಮಾಡಲಾಗುತ್ತದೆ".

-ರಾಜು ಬೆಟ್ಟಿನಮನೆ,
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ
ಕುಂದಾಪುರ ತಾಲೂಕು ಸಂಚಾಲಕ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News