ಸಮಾಜದ ತಳಕ್ಕೆ ಅಂಟಿಕೊಂಡ ಜನರ ಗುರುತಿನ ಚೀಟಿಯಂತಹ ಕವಿತೆಗಳು

Update: 2022-07-01 07:11 GMT

ಸಿನೆಮಾ ಪ್ರಿಯ ಬಹುಜನರಿಗೆ ನಾಗರಾಜ ಮಂಜುಳೆ ಸಿನೆಮಾ ನಿರ್ದೇಶಕ ಎಂದು ಗೊತ್ತು. ಫಂಡ್ರಿ, ಸೈರಾಟ್, ಈಚಿನ ಝಂಡ್ ಸಿನೆಮಾಗಳ ಮೂಲಕ ಭಾರತೀಯ ಸಿನೆಮಾ ರಂಗಕ್ಕೆ ಅವರದೇ ಆದ ಒಂದು ಮಾದರಿಯನ್ನು ಪರಿಚಯಿಸುತ್ತಿದ್ದಾರೆ. ದಲಿತ, ದಮನಿತ, ಅಲಕ್ಷಿತ ಸಮುದಾಯಗಳ ನಾಡಿ ಮಿಡಿತ ಹಿಡಿಯುವ ಅವರ ದೃಶ್ಯಸಂಯೋಜನೆ ವಿಶೇಷವಾಗಿದೆ. ಬಹುಶಃ ಈ ಸೂಕ್ಷ್ಮತೆ ಸಾಧ್ಯವಾಗಿದ್ದಕ್ಕೆ ಅವರೊಳಗೊಬ್ಬ ಕವಿ ಅಡಗಿ ಕೂತಿರುವ ಪರಿಣಾಮವೂ ಇರಬಹುದು. ಕಾರಣ ಮಂಜುಳೆ ಸಿನೆಮಾ ರಂಗಕ್ಕೆ ಬರುವ ಮೊದಲೆ ಅವರೊಬ್ಬ ಕವಿ. ಅವರ ಕವಿತೆಗಳು ಈಗ ಕನ್ನಡಕ್ಕೂ ಬಂದಿವೆ. ಯುವ ಲೇಖಕ ಸಂವರ್ಥ ಸಾಹಿಲ್ ಮಂಜುಳೆ ಅವರ ಕವಿತೆಗಳನ್ನು ‘ಬಿಸಿಲಿನ ಷಡ್ಯಂತ್ರದ ವಿರುದ್ಧ’ ಎನ್ನುವ ಹೆಸರಲ್ಲಿ ಪುಸ್ತಕ ಪ್ರಕಟಿಸಿದ್ದಾರೆ. ಅಂತೆಯೇ ಈ ಸಂಕಲನದ ಬಿಡುಗಡೆಗೆ ಸ್ವತಃ ಮಂಜುಳೆ ಉಡುಪಿಗೂ ಬಂದಿದ್ದರು. ಐವತ್ತಾರು ಕವಿತೆಗಳ ಎಪ್ಪತ್ತೆರಡು ಪುಟದ ಈ ಕವಿತೆಗಳ ಕಟ್ಟನ್ನು ಓದಿ ಮುಗಿಸಿದ ನಂತರ ಒಂದು ಬಗೆಯ ಮೌನ ಆವರಿಸುತ್ತದೆ. ಮನದೊಳಗೆ ತಾಕಲಾಟ ಶುರುವಾಗುತ್ತವೆ. ಮನದ ದಡಕ್ಕೆ ಈ ಕವಿತೆಗಳ ಅಲೆಗಳು ಮತ್ತೆ ಮತ್ತೆ ಅಪ್ಪಳಿಸತೊಡಗುತ್ತವೆ. ದಿಕ್ಕೆಟ್ಟ ಅನಾಥ ಮಗುವಿನ ಮನದೊಳಗೆ ಸುಳಿವ ನಾನಾ ಬಗೆಯ ಭಾವಗಳು ನಮ್ಮನ್ನು ಸುತ್ತುವರಿಯುತ್ತವೆ. ಸರಳವಾಗಿ ನಮ್ಮ ಸುತ್ತಮುತ್ತಣ ಸುಳಿವ ಗಾಳಿ, ಸುಡುವ ಬಿಸಿಲು, ಧೋ ಎಂದು ಸುರಿವ ಮಳೆ, ನಡೆದಾಡುವ ನೆಲ ನಮಗೆ ಹೊಸದಾಗಿ ಎದುರಾಗುತ್ತವೆ. ಕನ್ನಡದ ಸಂದರ್ಭದಲ್ಲಿ ಬಂಡಾಯ ಸಂಘಟನೆಯು ‘ಖಡ್ಗವಾಗಲಿ ಕಾವ್ಯ’ ಎಂದು ಘೋಷಿಸುತ್ತದೆ. ಅಂತೆಯೇ ಲೇಖನಿಯೇ ಖಡ್ಗವಿದ್ದಂತೆ ಎನ್ನುವುದೂ ಇದೆ. ಆದರೆ ಮಂಜುಳೆ ಲೇಖನಿ ‘ಇಲ್ಲದೆ ಹೋಗಿದ್ದಲ್ಲಿ’ ಎನ್ನುವ ಕವಿತೆಯಲ್ಲಿ ‘ಒಂದುವೇಳೆ/ ನನ್ನ ಕೈಯಲ್ಲಿ/ ಲೇಖನಿ ಇಲ್ಲದೆ ಹೋಗಿದ್ದರೆ/ ಬಹುಶಃ/ ಉಳಿ ಇರುತ್ತಿತ್ತು/ಇಲ್ಲ/ಸಿತಾರ್ ಕೊಳಲು/ ಕುಂಚ ಇರುತ್ತಿತ್ತೋ ಏನೋ/ ಏನಿರುತ್ತಿತ್ತೋ ಅದನ್ನು ಬಳಸಿ/ನನ್ನೊಳಗಿನ ಅತೀವ ಕೋಲಾಹಲವನ್ನು/ಅಗೆದು ಹೊರ ಹಾಕುತ್ತಿದ್ದೆ’ ಎನ್ನುವ ಮೂಲಕ ಮಾಧ್ಯಮ ಯಾವುದಾದರೂ ಅದನ್ನು ಸಿಟ್ಟಿನ ಅಭಿವ್ಯಕ್ತಿಗೆ ಬಳಸುತ್ತಿದ್ದೆ ಎನ್ನುವುದು ಹೊಸ ಬಗೆಯ ಪ್ರತಿರೋಧವನ್ನು ಕಟ್ಟಿಕೊಡುತ್ತಾರೆ. ಇಡೀ ಸಂಕಲನದಲ್ಲಿ ‘ಸಾವು’, ‘ಆತ್ಮಹತ್ಯೆ’ ಮತ್ತೆ ಮತ್ತೆ ಸುಳಿಯುತ್ತದೆ. ವ್ಯವಸ್ಥೆಯೇ ಪ್ರಾಯೋಜಿಸಿದ ಈ ಸಾವುಗಳು ದಮನಿತ ಜನರನ್ನು ಹೇಗೆ ಮುತ್ತಿಕೊಳ್ಳುತ್ತವೆ ಎನ್ನುವುದನ್ನು ಈ ಕವಿತೆಗಳು ಕಡುದುಃಖದಿಂದ ಮಂಡಿಸುತ್ತವೆ. ‘ಅ ಮತ್ತು ಆ’ ಎನ್ನುವ ಕವಿತೆಯಲ್ಲಿ ‘ಅ/ಕಾಣೆಯಾದವರ ಮನೆಯಲ್ಲಿ/ಜಾಹೀರಾತಿಗೆ ನೀಡಲು/ ಇರುವುದೆ ಇಲ್ಲ/ಒಂದೇ ಒಂದು ಒಳ್ಳೆಯ ಭಾವಚಿತ್ರ/ ಆ/ಜಾಹೀರಾತಿಗೆ ನೀಡಲು/ ಯಾರ ಒಂದೊಳ್ಳೆ ಭಾವಚಿತ್ರವೂ ಇರುವುದಿಲ್ಲವೋ/ ಅಂತವರೆ ಮತ್ತೆ ಮತ್ತೆ ಕಾಣೆಯಾಗುತ್ತಾರೆ’ ಇದು ಇಡೀ ಅಧಿಕಾರ ರಹಿತ ಜನರ ಕಡುವಾಸ್ತವವನ್ನು ತೀರಾ ಸರಳವಾಗಿ ಮನವರಿಕೆ ಮಾಡಿಸುತ್ತದೆ. ‘ಆತ್ಮಹತ್ಯೆಯ ಬದಲಿಗೆ’ ಎನ್ನುವ ದೀರ್ಘ ಕವಿತೆಯಲ್ಲಿ ವ್ಯವಸ್ಥೆಯ ವೈರುಧ್ಯಗಳನ್ನು ಚುಚ್ಚುವ ಹಾಗೆ ದಾಖಲಿಸುತ್ತಲೇ, ‘ಈಗೀಗ ಅನ್ನಿಸುತ್ತದೆ/ಕವಿತೆಯ ಬದಲು/ಎಲ್ಲವನ್ನೂ ಅಳಿಸಿಹಾಕುವ/ಈ ಭೂಮಿಯ ಮೈಮೇಲೆ/ ಸುಮ್ಮನೆ ಗೆರೆಗಳನ್ನು/ ಗೀಚಬೇಕು’

 ಎನ್ನುತ್ತಾರೆ. ಬಹುಶಃ ಇದು ಕವಿತೆ ಬರೆಯುವುದು ಸೋತು ಆತ್ಮಹತ್ಯೆ ಮಾಡಿಕೊಂಡಿದ್ದರ ಸಮಾನ ಎಂದು ಕವಿತೆಯನ್ನು ಬೇರೆಯದೇ ದೃಷ್ಟಿಯಲ್ಲಿ ಕಟ್ಟಿಕೊಡುತ್ತಾರೆ. ‘ಗೆಳೆಯ’ ಎನ್ನುವ ಪುಟ್ಟ ಕವಿತೆಯಲ್ಲಿ ‘ಒಂದೇ ಸ್ವಭಾವದ ಗೆಳೆಯರು ನಾವು/ಒಂದೇ ಧ್ಯೇಯ ಒಂದೇ ಕನಸಿನ/ ಜೀವದ ಗೆಳೆಯರು/ಕೊನೆಗೆ ಆತ ಆತ್ಮಹತ್ಯೆ ಮಾಡಿಕೊಂಡ/ನಾನು ಕವಿತೆ ಬರೆಯಲಾರಂಬಿಸಿದೆ’ ಆತ್ಮಹತ್ಯೆ ಬಹುಶಃ ಆತ್ಮಹತ್ಯೆ ಮಾಡಿಕೊಳ್ಳುವವ ಕವಿತೆಯನ್ನೇ ಆತ್ಮಹತ್ಯೆ ಎಂದು ಭಾವಿಸಿದ್ದರೆ ಎಷ್ಟೊಂದು ಜೀವಗಳು ಬದುಕುತ್ತಿದ್ದವಲ್ಲ ಎನ್ನುವ ಆಲೋಚನೆಯನ್ನು ಈ ಸಾಲುಗಳು ನಮ್ಮಿಳಗೆ ಒಂದು ಮಿಂಚನ್ನು ಹೊಳೆಸುತ್ತವೆ. ಆ ಕ್ಷಣವೇ ನನಗೆ ರೋಹಿತ್ ವೇಮುಲ ಕೂಡ ಹೀಗೆ ಭಾವಿಸಿದ್ದರೆ ಬದುಕುತ್ತಿದ್ದನಲ್ಲ ಅನ್ನಿಸಿತು. ಹೀಗೆ ಆಧುನಿಕ ಕಾವ್ಯ ಮೀಮಾಂಸೆಗೆ ಮಂಜುಳೆ ಹೊಸ ಎಳೆಗಳನ್ನು ದಾಖಲಿಸುತ್ತಾರೆ. ಕವಿತೆಯನ್ನು ಮೀರಿ ಪ್ರತಿರೋಧವನ್ನು ಸಮತೆಯ ಎಚ್ಚರ ಮೂಡಿಸುವ ಪುಸ್ತಕಗಳನ್ನೇ ಆಯುಧವಾಗಿ ಝಳಪಿಸುತ್ತೇನೆ ಎನ್ನುತ್ತಾರೆ. ‘ನಾನು ಪುಸ್ತಕವನ್ನೇ ಝಳಪಿಸುತ್ತೇನೆ’ ಕವಿತೆಯನ್ನೇ ನೋಡಿ, ‘ಈ ನಿರ್ದಯಿ ಲೋಕದಲ್ಲಿ/ನಾನು ಒಬ್ಬಂಟಿ/ಅನಾಥ ಜನರು/ರಕ್ಷಣೆಗೆ ಕೈಯಲ್ಲಿ ಏನಾದರೂ/ಇಟ್ಟುಕೊಳ್ಳಬೇಕು/ಹಾಗಾಗಿ ನಾನು/ಪುಸ್ತಕಗಳನ್ನು ಜೊತೆಗಿಟ್ಟುಕೊಳ್ಳುತ್ತೇನೆ’ ಎನ್ನುತ್ತಾರೆ. ನೀಲಿ ಶಾಹಿಯಲ್ಲಿ ಬರೆಯುವಾಗ ಪರ್ವತಗಳ ಎದೆ ನಡುಗುತ್ತಿದ್ದವು, ನಂತರ ಶಾಹಿ ಬದಲಿಸಲಾಯಿತು ಕೊನೆಗೆ ಆತ ನನ್ನ ರಕ್ತದ ಬಣ್ಣವೂ ಕೇಸರಿ ಎಂದು ಬರೆದ ಎನ್ನುವ ಮೂಲಕ ಅಂಬೇಡ್ಕರ್ ಹೆಸರು ಹೇಳದೆಯೂ ದಲಿತ ಸಮುದಾಯ ಹಿಂದೂ ಧಾರ್ಮಿಕ ಮೂಲಭೂತವಾದಕ್ಕೆ ಹೇಗೆ ಸಜ್ಜಾಗುತ್ತಿವೆ ಎನ್ನುವುದನ್ನು ಸೂಕ್ಷ್ಮವಾಗಿ ಕಟ್ಟಿಕೊಡುತ್ತಾರೆ. ನನ್ನ ಕವಿತೆ ಏನು ಎಂದು ಹೇಳುವಾಗಲೂ, ‘ಉರಿಬಿಸಿಲಿನ ಕಳೆ ತೆಗೆಯುತ್ತಾ/ಬೆವರು ಸುರಿಸುವ ಹೆಂಗಸು/ತನ್ನ ಸೆರಗನ್ನು/ಹರಿದ ರವಿಕೆಯ/ ಮೇಲೆಳೆದುಕೊಳ್ಳುವುದು/ನನ್ನ ಕವಿತೆ/ ಬರಡು ಭೂಮಿಯಲಿ/ತಲೆಯೆತ್ತಿ ನಿಂತ ಮರದ/ರೆಂಬೆಗೆ ಕಟ್ಟಿದ ಜೋಳಿಗೆಯಲ್ಲಿ/ಹಸಿ ಹಸಿದು ದಣಿದಣಿದು/ಮಗು ನಿದ್ದೆ ಹೋಗುವುದು/ನನ್ನ ಕವಿತೆ’ ಹೀಗೆ ತನ್ನ ಕವಿತೆಯ ಗುರುತು ಹೇಳುವಲ್ಲಿಯೇ ಕವಿ ತನ್ನ ಕಾವ್ಯ ಮೀಮಾಂಸೆ ಯಾವುದು ಎಂಬುದನ್ನು ಸ್ಪಷ್ಟಗೊಳಿಸುತ್ತಾರೆ.

ಕವಿ ಗಂಡು ಹೆಣ್ಣಿನಾಚೆ ಹಿಜಿಡಾ ಸಮುದಾಯವನ್ನೂ ಕಾಣಲೆತ್ನಿಸಿದ್ದಾರೆ. ‘ಜನಗಣತಿ’ ಕವಿತೆಯಲ್ಲಿ ‘ಜನಗಣತಿಗಾಗಿ/ಸ್ತ್ರೀ-ಪುರುಷ/ ಎಂಬ ಎರಡು ವಿಭಾಗ/ ಮಾಡಿಕೊಂಡ ಕಾಗದ ಹಿಡಿದು/ ಊರೆಲ್ಲಾ ಸುತ್ತುತ್ತಿದ್ದಾಗ/ ಹಳ್ಳಿಯ ಅಜ್ಞಾತ ತುತ್ತ ತುದಿಯಲ್ಲಿ/ ಎದುರಾದದ್ದು/ ನಾಲ್ಕು ಹಿಜಿಡಾಗಳ/ಒಂದು ಮನೆಯನ್ನು’ ಎನ್ನುವಲ್ಲಿ ಹಿಜಿಡಾಗಳನ್ನು ಊರಂಚಿಗೆ ತಳ್ಳಿದ ಹೊಸ ಬಗೆಯ ಅಸ್ಪಶ್ಯತೆಯನ್ನೂ, ಗಂಡು ಹೆಣ್ಣೆಂಬ ಎರಡು ಲಿಂಗಗಳ ಮಿತಿ ಮೀರದ ನಮ್ಮ ವ್ಯವಸ್ಥೆಯ ಕಣ್ಣೋಟವನ್ನೂ ಕಾಣಿಸುತ್ತದೆ.

 ಸುಡುವ ವರ್ತಮಾನವನ್ನು ದೃಶ್ಯರೂಪಕಗಳಲ್ಲಿ ಕಟ್ಟಿಕೊಡುವ ನಾಗರಾಜ ಮಂಜುಳೆ ಕವಿತೆಗಳು ಕ್ಯಾಮರಾದ ಕಣ್ಣಿಗೆ ಕವಿಯ ಕಣ್ಣನ್ನು ಅಂಟಿಸಿ ಲೋಕವನ್ನು ತೋರಿಸುವ ಬಗೆ ಹೊಸತೆರನಾಗಿದೆ. ‘ನಿನ್ನ ಬರುವಿಗೆ ಮುನ್ನ ಒಂದು ಪತ್ರ’ ಕವಿತೆಯಲ್ಲಿ ತಾನು ವಾಸಿಸುವ ಸ್ಲಂ ಏರಿಯಾಕ್ಕೆ ಪ್ರೇಯಸಿಯನ್ನು ಕರೆಯುವ ಕವಿ ಓದುಗರನ್ನೂ ಅವಳ ಜತೆ ಕರೆದುಕೊಂಡು ಹೋದಂತಹ ದೃಶ್ಯವನ್ನು ಕಟ್ಟುತ್ತಾರೆ. ಇಲ್ಲಿ ಟ್ರಾಲಿಯಲ್ಲಿ ಕ್ಯಾಮರಾ ಚಲಿಸಿದಂತೆ ನಾವು ಅದರ ಹಿಂದೆ ನಡೆದಂತೆ ಭಾಸವಾಗುತ್ತದೆ. ಇಡೀ ಕವಿತೆಗಳಲ್ಲಿ ಪೋಣಿಸಿಕೊಂಡ ಪ್ರಮುಖ ಎಳೆ ಮಲಗಿದ ಪ್ರತಿರೋಧದ ಧ್ವನಿಯನ್ನು ಮುಟ್ಟಿ ಎಬ್ಬಿಸುವ, ಎಚ್ಚರಗೊಳಿಸುವ, ಧ್ವನಿ ದೊಡ್ಡದು ಮಾಡುವ ಆಯಾಮ. ಅಂತೆಯೇ ಸಮಾಜದ ತಳಕ್ಕೆ ಅಂಟಿಕೊಂಡ ಜನರ ಗುರುತನ್ನು ಹೇಳುವ ಗುರುತಿನ ಚೀಟಿಗಳಂತೆ ಕೆಲವು ಕವಿಗಳಿವೆ. ‘ಪೋಣಿಸು’ ಕವಿತೆಯಲ್ಲಿ ‘ಅದೆಲ್ಲಿಯ ತನಕ/ ಒಳಗಿನ ಕೂಗನ್ನು/ತುಟಿಗಳೊಳಗೆ ಒತ್ತಿಟ್ಟಿರಲಿ/ಕವಿತೆಯ ಸೂಜಿ ಹಿಡಿದು/ಅದೆಷ್ಟು ಹೊಲಿಗೆ ಹಾಕಲಿ/ಸೂಜಿಗಣ್ಣಿನೊಳಗೆ ಅದ್ಯಾರು/ಆಕಾಶವನ್ನೇ ಪೋಣಿಸುತ್ತಾರೆ/ಹಾಕಿದ ಹೊಲಿಗೆಗಳಿಂದಲೇ/ಕಿತ್ತು ಬರುತ್ತಿದೆ ಗಾಯ’ ಎನ್ನುತ್ತಾರೆ.

 ಕನ್ನಡ ನೆಲದಲ್ಲೇ ಹುಟ್ಟಿದ ಕವಿತೆಗಳು ಎನ್ನುವಷ್ಟು ಆಪ್ತವಾಗಿ ಸಮರ್ಥವಾಗಿ ಸಂವರ್ತ ಸಾಹಿಲ್ ಅನುವಾದಿಸಿದ್ದಾರೆ. ಕನ್ನಡದ ಸಂದರ್ಭದಲ್ಲಿಯೂ ತುಂಬಾ ಹೊಸತೆರನಾದ ಕವಿತೆಗಳು ಹುಟ್ಟುತ್ತಿವೆ. ಇಂತಹ ಕವಿತೆಗಳೂ ಇತರ ಭಾಷೆಗಳಿಗೆ ಚಲಿಸಬೇಕಾಗಿದೆ. ಹೊಸ ತಲೆಮಾರಿನ ಬರಹಗಳು ಮತ್ತೊಂದು ಭಾಷೆಗೆ ಹೋಗುವುದು ವಿರಳ. ಬಹುಪಾಲು ಹಿರಿಯ ಸಾಹಿತಿಗಳ ಬರಹಗಳು ಅನುವಾದಕ್ಕೆ ಒಳಗಾಗುತ್ತವೆ. ಹಾಗಾಗಿಯೇ ಆಯಾ ಕಾಲದ ಸಹವರ್ತಿ ಭಾಷೆಗಳಲ್ಲಿ ಏನು ಹುಟ್ಟುತ್ತಿದೆ, ಹೊಸ ತಲೆಮಾರು ಹೇಗೆ ಯೋಚಿಸುತ್ತಿದೆ ಎನ್ನುವುದು ತಿಳಿಯುವುದೇ ಇಲ್ಲ. ಈ ಅರ್ಥದಲ್ಲಿ ನಾಗರಾಜ ಮಂಜುಳೆ ಕಾವ್ಯ ಕನ್ನಡಕ್ಕೆ ಬಂದುದು, ಕನ್ನಡದ ಹೊಸ ತಲೆಮಾರಿನ ಕವಿಗಳಿಗೆ ಹೊಸ ನುಡಿಗಟ್ಟನ್ನು ಪರಿಚಯಿಸಿದಂತಾಗಿದೆ. ಹಾಗಾಗಿ ಕನ್ನಡದಲ್ಲಿ ಈಗ ಪ್ರಖರವಾಗಿ ಬರೆಯುತ್ತಿರುವ ಯುವ ಕವಯಿತ್ರಿ/ಕವಿಗಳು ಈ ಕಾವ್ಯದ ಕಟ್ಟನ್ನು ಓದಿ ಚರ್ಚಿಸಬೇಕಿದೆ.

Writer - ಅರುಣ್ ಜೋಳದಕೂಡ್ಲಿಗಿ

contributor

Editor - ಅರುಣ್ ಜೋಳದಕೂಡ್ಲಿಗಿ

contributor

Similar News