ಮುಡಿಪು: ಮಿತ್ತಕೋಡಿಯಲ್ಲಿ ಗುಡ್ಡ ಕುಸಿತ; ರಸ್ತೆ ಬಂದ್
Update: 2022-07-01 17:38 IST
ಕೊಣಾಜೆ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮುಡಿಪು ಕೊಣಾಜೆ ವ್ಯಾಪ್ತಿಯಲ್ಲಿ ಭೂಕುಸಿತ, ಆವರಣಗೋಡೆ ಕುಸಿತ, ಕೃಷಿ ಪ್ರದೇಶಗಳಿಗೆ ಹಾನಿಯಾಗಿರುವ ಘಟನೆ ಮುಂದುವರಿದಿದೆ.
ಮುಡಿಪು ಸಮೀಪದ ಅರ್ಕಾನ ಮಾರ್ಗವಾಗಿ ಕಂಬ್ಳಪದವಿಗೆ ಹೋಗುವ ರಸ್ತೆಯ ಮಿತ್ತಕೋಡಿ ಬಳಿ ಎತ್ತರವಾದ ಗುಡ್ಡ ಪ್ರದೇಶವು ಕುಸಿದು ಬಿದ್ದಿದ್ದು ಇದರಿಂದಾಗಿ ಈ ಭಾಗದ ರಸ್ತೆಯೂ ಸಂಪೂರ್ಣ ಬಂದ್ ಆಗಿದೆ. ಇದರಿಂದಾಗಿ ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತೊಂದರೆಯಾಗಿದ್ದು, ಪರ್ಯಾಯ ಮುಡಿಪು ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಅಲ್ಲದೆ ಈ ಪ್ರದೇಶದಲ್ಲಿ ಭೂ ಕುಸಿತ ಉಂಟಾಗುವ ಅಪಾಯ ಇದೆ.
ಕೊಣಾಜೆಯ ಕೊಪ್ಪಳ ಮುಹಮ್ಮದ್ ಕುಂಞಿ ಎಂಬವರ ಕೃಷಿ ಜಮೀನಿಗೆ ಆವರಣ ಗೋಡೆ ಕುಸಿದು ಬಿದ್ದು ಕೃಷಿಗೆ ಹಾನಿಯಾಗಿದೆ. ಪೆರ್ಮನ್ನೂರು ಬಳಿ ಕಾರೊಂದಕ್ಕೆ ಅವರಣ ಗೋಡೆ ಬಿದ್ದು ಹಾನಿಯಾಗಿದೆ. ಸಜಿಪನಡು ಹಾಗೂ ಇರಾದಲ್ಲಿ ಗುಡ್ಡದ ಮಣ್ಣು ಕುಸಿದು ದನದ ಕೊಟ್ಟಿಗೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.