ಮೆಡಿಕಲ್ ಸೀಟು ಕೊಡಿಸುವುದಾಗಿ ವಂಚನೆ: ಐವರು ಆರೋಪಿಗಳ ಬಂಧನ, 24 ಲಕ್ಷ ರೂ.ವಶ

Update: 2022-07-01 12:49 GMT
ಸಾಂದರ್ಭೀಕ ಚಿತ್ರ (CREDIT- PTI)

ಬೆಂಗಳೂರು, ಜು.1: ವೈದ್ಯರೊಬ್ಬರ ಮಗನಿಗೆ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ ಹಣ ಪಡೆದ ಬಳಿಕ ಹನಿಟ್ರಾಪ್ ಮೂಲಕ ಅವರನ್ನು ಬೆದರಿಸಿ 1.16 ಕೋಟಿ ಹಣ ಸುಲಿಗೆ ಮಾಡಿದ್ದ ಐವರನ್ನು ಬಂಧಿಸಿ 24 ಲಕ್ಷ ಹಣ ಹಾಗೂ 25 ಗ್ರಾಂ ಚಿನ್ನದ ಒಡವೆಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಬಂಧಿತ ಆರೋಪಿಗಳನ್ನು ನಾಗರಾಜ ಸಿದ್ದಣ್ಣ(36), ಮಲ್ಲಿಕಾರ್ಜುನ ವಾಲಿ(38), ಮಧುಶೇಖರ್(28), ಹಮೀದ್(31) ಮತ್ತು ಬಸವರಾಜ(35) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜ್‍ವೊಂದರಲ್ಲಿ ತಮ್ಮ ಮಗನಿಗೆ ವೈದ್ಯಕೀಯ ಸೀಟು ಕೊಡಿಸುವುದಾಗಿ ಕಲಬುರಗಿ ವೈದ್ಯರೊಬ್ಬರಿಂದ ಈ ಐವರು ಆರೋಪಿಗಳು ಸೇರಿ 66 ಲಕ್ಷ ರೂ.ಪಡೆದುಕೊಂಡು, ಬಳಿಕ ವೈದ್ಯಕೀಯ ಸೀಟು ಕೊಡಿಸದೆ ವಂಚಿಸಿದ್ದರು. 

ಮಗನಿಗೆ ವೈದ್ಯಕೀಯ ಸೀಟು ಸಿಗದ ಹಿನ್ನೆಲೆಯಲ್ಲಿ ಕೊಟ್ಟ ಹಣವನ್ನು ವಾಪಸ್ ಪಡೆಯಲು ವೈದ್ಯರು ಬೆಂಗಳೂರಿಗೆ ಬಂದಿದ್ದರು. ಅವರನ್ನು ಆರೋಪಿಗಳು ಮೆಜೆಸ್ಟಿಕ್‍ನ ಲಾಡ್ಜ್‍ವೊಂದರಲ್ಲಿಟ್ಟು ತದನಂತರ ಇಬ್ಬರು ಮಹಿಳೆಯರನ್ನು ವೈದ್ಯರ ಬಳಿ ಕಳುಹಿಸಿ ನಕಲಿ ಪೊಲೀಸರಿಂದ ಲಾಡ್ಜ್ ಮೇಲೆ ರೈಡ್ ಮಾಡಿದಂತೆ ಸಂಚು ಮಾಡಿ ವೈದ್ಯರನ್ನು ಹೆದರಿಸಿ ಪುನಹ 50 ಲಕ್ಷ ರೂ.ಗಳನ್ನು ಸುಲಿಗೆ ಮಾಡಿದ್ದ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿ, ಹಣ, ಚಿನ್ನದ ಒಡವೆ, ವಾಕಿಟಾಕಿಯನ್ನು ವಶಪಡಿಸಿಕೊಂಡಿದ್ದಾರೆ.

ಪ್ರಮುಖ ಆರೋಪಿ ನಾಗರಾಜ ಸಿದ್ದಣ್ಣ ಬೊರುಟಿ ವೈದ್ಯರಿಗೆ ಪರಿಚಯವಿದ್ದು, ನಿಮ್ಮ ಮಗನಿಗೆ ರಾಮಯ್ಯ ಕಾಲೇಜು ಕ್ಯಾಂಪಸ್‍ನಲ್ಲಿರುವ ಆರ್‍ಎಂಎಸ್ ಮೆಡಿಕಲ್ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಹೇಳಿ ಮೊದಲಿಗೆ 1.75 ಲಕ್ಷ ಹಣವನ್ನು ಪಡೆದು ಅಡ್ಮಿಷನ್ ಮಾಡಿಸಿದ್ದು, ಬಳಿಕ ಮತ್ತೆ 60 ಲಕ್ಷ ಹಣವನ್ನು ಪಡೆದುಕೊಂಡು ಆ ಹಣವನ್ನು ಕಾಲೇಜಿಗೆ ಕಟ್ಟದೆ ವೈದ್ಯರಿಗೆ ಮೋಸ ಮಾಡಿದ್ದಾನೆ. ಕಾಲೇಜಿನ ಫೀಸ್ ಕಟ್ಟದ ಕಾರಣ ವೈದ್ಯರ ಮಗನನ್ನು ಕಾಲೇಜಿನಿಂದ ವಾಪಸ್ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳ ವಂಚನೆ ಬೆಳಕಿಗೆ ಬಂದಿದೆ.  
   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News