ದೇವೇಗೌಡರ ಆರೋಗ್ಯದ ಬಗ್ಗೆ ಹಗುರ ಮಾತು: ಕ್ಷಮೆ ಕೋರಲು ಕೆ.ಎನ್.ರಾಜಣ್ಣಗೆ ಡಿ.ಕೆ.ಶಿವಕುಮಾರ್ ಸೂಚನೆ

Update: 2022-07-01 14:39 GMT

ಹೊಸದಿಲ್ಲಿ, ಜು. 1: ‘ದೇಶ ಹಾಗೂ ರಾಜ್ಯಕ್ಕೆ ಸೇವೆ ಸಲ್ಲಿಸಿರುವ ಹಿರಿಯ ನಾಯಕ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆರೋಗ್ಯದ ಬಗ್ಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ನೀಡಿರುವ ಹೇಳಿಕೆ ಖಂಡನೀಯ, ಅಮಾನವೀಯ. ಕೂಡಲೇ ಅವರು ದೇವೇಗೌಡರ ಕ್ಷಮೆ ಕೇಳುವಂತೆ ಸೂಚನೆ ನೀಡುತ್ತೇನೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ದಿಲ್ಲಿಯಲ್ಲಿ ಮಾಧ್ಯಮ ಪ್ರತಿಕ್ರಿಯೆ ನೀಡಿದ ಅವರು, ‘ಪಕ್ಷದ ನಾಯಕ ರಾಜಣ್ಣ, ದೇವೇಗೌಡರ ಪರಿಸ್ಥಿತಿ ಬಗ್ಗೆ ಆಡಿರುವ ಮಾತನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ವೈಯಕ್ತಿಕವಾಗಿಯೂ ಇದನ್ನು ನಾನು ಖಂಡಿಸುತ್ತೇನೆ. ಯಾರೇ ನಾಯಕರು ಮಾನವೀಯತೆ ಮೆರೆಯಬೇಕು. ಸಮಾಜ ಹಾಗೂ ದೇಶಕ್ಕೆ ಸೇವೆ ಮಾಡಿರುವ ಹಿರಿಯ ನಾಯಕರಾದ ದೇವೇಗೌಡರ ಬಗ್ಗೆ ಇಂತಹ ಹೇಳಿಕೆ ನೀಡಿದ್ದು ಸರಿಯಲ್ಲ' ಎಂದು ಆಕ್ಷೇಪಿಸಿದರು.

ದೇವೇಗೌಡರು ಪ್ರಧಾನಿಯಾಗಲು ಹಿಂದೆ ಕಾಂಗ್ರೆಸ್ ಪಕ್ಷವೇ ಬೆಂಬಲ ನೀಡಿತ್ತು. ನಾವು ದೇವೇಗೌಡರನ್ನು ಬಹಳ ಗೌರವಯುತವಾಗಿ ಕಾಣುತ್ತಿದ್ದೇವೆ. ಅಂತಹ ಹಿರಿಯ ನಾಯಕರ ಆರೋಗ್ಯದ ಬಗ್ಗೆ ಈ ರೀತಿ ಮಾತನಾಡುವುದು ಸಲ್ಲ. ನಾನು ರಾಜಣ್ಣ ಅವರಿಗೆ ದೂರವಾಣಿ ಕರೆ ಮಾಡಿ ಕ್ಷಮೆ ಕೋರುವಂತೆ ಸೂಚನೆ ನೀಡುತ್ತೇನೆ. ಇಂತಹ ಹೇಳಿಕೆಗಳಿಗೆ ನಾವು ಅವಕಾಶ ನೀಡುವುದಿಲ್ಲ' ಎಂದು ಅವರು ನುಡಿದರು.

‘ಹಿರಿಯರಾದ ದೇವೇಗೌಡರಿಗೆ ಉತ್ತಮ ಆರೋಗ್ಯ ಮತ್ತು ಇನ್ನಷ್ಟು ಸೇವೆ ಮಾಡುವ ಅವಕಾಶವನ್ನು ದೇವರು ಕರುಣಿಸಲಿ ಎಂದು ನಾವು ಪ್ರಾರ್ಥನೆ ಮಾಡುತ್ತೇವೆ' ಎಂದು ಶಿವಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದರು.

‘ದೇವೇಗೌಡರ ಹಿರಿತನಕ್ಕೆ ನಾವೆಲ್ಲರೂ ತಲೆಬಾಗಬೇಕು. ಸಮಾಜದ ಹಿರಿಯರ ಬಗ್ಗೆ ಇಂತಹ ಹಗುರ ಹೇಳಿಕೆ ನೀಡಿರುವುದು ರಾಜಣ್ಣರ ಘನತೆಗೆ ಸೂಕ್ತವಲ್ಲ. ರಾಜಣ್ಣ ಅವರು ಕೂಡಲೇ ಕ್ಷಮೆ ಕೋರಬೇಕು. ಇದು ಅವರ ವೈಯಕ್ತಿಕ ಹೇಳಿಕೆಯಾದರೂ, ಅವರು ಕ್ಷಮೆ ಕೋರಬೇಕು. ಇಲ್ಲದಿದ್ದರೆ ಸಮಾಜ ಅವರನ್ನು ಸುಮ್ಮನೆ ಬಿಡುವುದಿಲ್ಲ'

-ಡಿ.ಕೆ.ಸುರೇಶ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News