ಮಂಗಳೂರು: ಪೌರ ಕಾರ್ಮಿಕರ ಪ್ರತಿಭಟನೆ

Update: 2022-07-01 15:53 GMT

ಮಂಗಳೂರು: ದ.ಕ.ಜಿಲ್ಲಾ ವ್ಯಾಪ್ತಿಯಲ್ಲಿರುವ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ ಗಳಲ್ಲಿ ಸ್ವಚ್ಛತೆಯ ನಿಟ್ಟಿನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೂರಾರು ಪೌರ ಕಾರ್ಮಿಕರು, ವಾಹನ ಚಾಲಕರ ಹುದ್ದೆಗಳನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ದ.ಕ.ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೆ ದರ್ಜೆ ನೌಕರರ ಸಂಘದಿಂದ ಶುಕ್ರವಾರ ದ.ಕ.ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು.

ಪೌರ ಕಾರ್ಮಿಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಜಿ., ನಾಲ್ಕನೆ ದರ್ಜೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕಂಕನಾಡಿ, ಹೊರಗುತ್ತಿಗೆ ನೌಕರರ ಸಂಘ-ಕರಾವಳಿ ಭಾಗದ ಸಂಚಾಲಕ ಬಿ.ಕೆ.ಅಣ್ಣಪ್ಪ ಕಾರೆಕ್ಕಾಡು, ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಶೇಷಪ್ಪ ಬೆದ್ರಕಾಡು, ಮಂಗಳೂರು ಸಫಾಯಿ ಕರ್ಮಚಾರಿ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ, ದಲಿತ ಸಂಘಟನೆಯ ಮುಖಂಡ ಎಸ್ಪಿ ಅನಂದ ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದರು.

ಖಾಯಂ ಪೌರ ಕಾರ್ಮಿಕರಿಗೆ ೨೦೦೬ರಿಂದ ಜಾರಿಯಾಗಿರುವ ಎನ್‌ಪಿಎಸ್ ರದ್ದುಗೊಳಿಸಿ ಹಳೆಯ ಪಿಂಚಣಿ ಯನ್ನೇ ಮುಂದುವರಿಸಬೇಕು, ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಬೇಕು. ಪಚ್ಚನಾಡಿಯಲ್ಲಿ ಮೀಸಲಿಟ್ಟ ೪ ಎಕರೆ ಜಮೀನನ್ನು ಇತರರು ಅತಿಕ್ರಮಿಸಿ ಮನೆಗಳನ್ನು ನಿರ್ಮಿಸಿದ್ದು, ಅದನ್ನು ತೆರವುಗೊಳಿಸ ಬೇಕು. ಎಕ್ಕೂರಿನಲ್ಲಿ ಮೀಸಲಿಟ್ಟ ಜಾಗದಲ್ಲಿ ಪೌರ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಡಬೇಕು. ಸೇವಾವಧಿಯಲ್ಲಿ ಮೃತಪಟ್ಟ ಪೌರ ಕಾರ್ಮಿಕರ ಕುಟುಂಬಸ್ಥರಿಗೆ ಸಹಾಯಧನ ನೀಡಬೇಕು. ಪೌರ ಕಾರ್ಮಿಕರು ಮನೆ ನಿರ್ಮಿಸಲು ನೀಡುತ್ತಿದ್ದ ೭.೫೦ ಲಕ್ಷ ರೂ.ವನ್ನು ೧೫ ಲಕ್ಷಕ್ಕೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News