ಬಳ್ಕುಂಜೆ ಕೈಗಾರಿಕಾ ವಲಯ ಸ್ಥಾಪನೆ ವಿವಾದ; ಡಿವೈಎಫ್ಐ ನಿಯೋಗ ಭೇಟಿ, ಸರ್ವೆಗೆ ಬಂದಿದ್ದ ಅಧಿಕಾರಿಗಳಿಗೆ ತರಾಟೆ

Update: 2022-07-01 16:02 GMT

ಕಿನ್ನಿಗೋಳಿ: ಕೈಗಾರಿಕಾ ವಲಯ ಸ್ಥಾಪನೆಗಾಗಿ ಸರಕಾರ ಸ್ವಾಧೀನ‌ ಪಡಿಸಿಕೊಳ್ಳಲಿರುವ ಮುಲ್ಕಿ ತಾಲೂಕಿನ ಬಳ್ಕುಂಜೆ, ಉಳೆಪಾಡಿ, ಕೊಲ್ಲೂರು ಗ್ರಾಮಗಳಿಗೆ ಡಿವೈಎಫ್ಐ ನಿಯೋಗ ಶುಕ್ರವಾರ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿಗಳನ್ನು ಕಲೆಹಾಕಿತು.

ಭೇಟಿಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ನಿಯೋಗದಲ್ಲಿದ್ದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಭೂಸ್ವಾಧೀನ ವಿರೋಧಿಸುತ್ತಿರುವ ಗ್ರಾಮದ ಹೋರಾಟಗಾರರ ಜೊತೆಗೆ ಗ್ರಾಮದಲ್ಲಿ ಸುತ್ತಾಡುತ್ತಿ ದ್ದಾಗ ಗ್ರಾಮದ ಮನೆ, ಜಮೀನುಗಳಿಗೆ ಭೇಟಿ ನೀಡಿ ಅಕ್ರಮವಾಗಿ ಸರ್ವೇ ಮಾಡುತ್ತಿದ್ದ ತಂಡವೊಂದು ಎದುರಾಯಿತು.

2008 ರಲ್ಲಿ ನಿವೃತ್ತರಾಗಿರುವ ಉಪ ತಹಶೀಲ್ದಾರ್ ಚಂದ್ರ ಮೋಹನ್ ನೇತೃತ್ವದ ತಂಡ ಸುರತ್ಕಲ್ ನ ಖಾಸಗಿ ವ್ಯಕ್ತಿ ಸಂತೋಷ್ ಕುಮಾರ್ ರ ಪರವಾಗಿ ಸರ್ವೇ ಕೆಲಸ ಮಾಡುತ್ತಿರುವುದು ತಿಳಿಯಿತು.

ಈ ವೇಳೆ ಅವರನ್ನು ವಿಚಾರಿಸಿದಾಗ, "ಕೆಐಡಿಬಿಯವರ ಬಳಿ ಸಿಬ್ಬಂದಿ ಕೊರತೆ ಇರುವುದರಿಂದ ಭೂಸ್ವಾಧೀನಾಧಿಕಾರಿ ಬಿನೋಯ್ ಅವರು ಸಮೀಕ್ಷೆ ನಡೆಸುವ ಗುತ್ತಿಗೆಯನ್ನು ಖಾಸಗಿ ಏಜನ್ಸಿ ಹೊಂದಿರುವ ಸುರತ್ಕಲ್ ನ ಸಂತೋಷ್ ಅವರಿಗೆ ನೀಡಿರುತ್ತಾರೆ. ಅವರು ನಿವೃತ್ತ ಅಧಿಕಾರಿಯಾಗಿರುವ ನಮ್ಮನ್ನು ಈ ಕೆಲಸಕ್ಕೆ ನೇಮಿಸಿದ್ದಾರೆ. ನಾವು ಮನೆ ಮನೆಗೆ ತೆರಳಿ ಮನೆ, ಜಮೀನಿನ ಪೂರ್ತಿ ವಿವರ ಪಡೆದು ಅದನ್ನು ದಾಖಲಿಸಿ ಕೊಂಡು ಸಹಿ ಪಡೆಯುತ್ತೇವೆ‌. ಕುಟುಂಬ ಸದಸ್ಯರನ್ನು ಮನೆ ಮುಂಭಾಗ ನಿಲ್ಲಿಸಿ ಫೊಟೊ ತೆಗೆಯುತ್ತೇವೆ" ಎಂದು ಮಾಹಿತಿ ನೀಡಿದ್ದಾರೆ.

ಈ ರೀತಿ ಸಮೀಕ್ಷೆ ನಡೆಸಲು, ನೀವು ಬರೆದಿರುವುದಕ್ಕೆ‌ ಜನರ ಸಹಿ ಪಡೆಯಲು ನಿಮಗೆ ಗುತ್ತಿಗೆ ನೀಡಿರುವುದರ ಆದೇಶ ಪ್ರತಿ ಅಥವಾ ಅದಕ್ಕಾಗಿ ಕೆಐಡಿಬಿ ಅಥವಾ ಜಿಲ್ಲಾಡಳಿತ ನಿಮಗೆ ನೀಡಿರುವ ಗುರುತು ಚೀಟಿ ತೋರಿಸಿ ಅಂದಾಗ, ಅದ್ಯಾವುದು ನಮಗೆ ನೀಡಲಾಗಿಲ್ಲ ಎಂದು ತಿಳಿಸಿದರು.

ಈ ರೀತಿ ಖಾಸಗಿ ವ್ಯಕ್ತಿಗಳು ಸರಕಾರದ ಆದೇಶ, ಗುರುತು ಚೀಟಿ ಇಲ್ಲದೆ ಊರೊಳಗಡೆ ಬಂದು ಮನೆ, ಜಮೀನಿನ ಮಾಹಿತಿ ಸಂಗ್ರಹಿಸುವುದು, ಫೋಟೊ, ಸಹಿ ಪಡೆಯವುದು ಅಕ್ರಮ ಎಂದು ತಂಡವನ್ನು ತರಾಟೆಗೆ ತೆಗೆದುಕೊಳ್ಳಲಾಗಿತು ಎಂದು ಹೇಳಿದ್ದಾರೆ.

ಗ್ರಾಮ ಪಂಚಾಯತ್ ನ ಗಮನಕ್ಕೆ ತಾರದೆ, ಗುರುತು ಪತ್ರ, ಸರಕಾರದ ಆದೇಶದ ಪ್ರತಿ ಇಲ್ಲದೆ ಗಣತಿಯ ಉದ್ದೇಶಕ್ಕೆ ಗ್ರಾಮಕ್ಕೆ ಪ್ರವೇಶ ಮಾಡಬಾರದು‌, ಅಮಾಯಕ ಗ್ರಾಮಸ್ಥರನ್ನು ವಂಚಿಸುವುದನ್ನು ಸಹಿಸುವುದಿಲ್ಲ ಎಂದು ತಿಳಿಸಿ ವಾಪಾಸು ಕಳುಹಿಸಲಾಯಿತು.

ಭೂಸ್ವಾಧೀನಕ್ಕೆ ಸಂಬಂಧಿಸಿ ಜಿಲ್ಲಾಡಳಿತ  ತಪ್ಪು ದಾರಿ ಅನುಸುರಿಸುತ್ತಿರುವುದನ್ನು ಡಿವೈಎಫ್ಐ ಖಂಡಿಸುತ್ತದೆ ಎಂದು‌ ಮುನೀರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ‌.

ನಿಯೋಗದಲ್ಲಿ ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ, ಅಶ್ವಿನಿ ಹೆಗ್ಡೆ, ರೈತ ಸಂಘದ ಕೆ ಯಾದವ ಶೆಟ್ಟಿ, ಡಿವೈಎಫ್ಐ ನ ನಿತಿನ್ ಬಂಗೇರ, ಶ್ರೀನಾಥ್ ಕುಲಾಲ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಆನಂದ್, ಭೂಸ್ವಾಧೀನ ವಿರೋಧಿ ಸಮಿತಿಯ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News