ಹೈಕೋರ್ಟ್ ಸಿಜೆ ರಿತುರಾಜ್ ಅವಸ್ಥಿಗೆ ವಕೀಲರ ಪರಿಷತ್‍ನಿಂದ ಬೀಳ್ಕೊಡುಗೆ

Update: 2022-07-01 18:27 GMT

ಬೆಂಗಳೂರು, ಜು.1: ಕರ್ನಾಟಕ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರಿಗೆ ರಾಜ್ಯ ವಕೀಲರ ಪರಿಷತ್‍ನಿಂದ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.

ಶುಕ್ರವಾರ ಹೈಕೋರ್ಟ್ ಹಾಲ್ ನಂ.1 ರಲ್ಲಿ ನಡೆದ ಸಮಾರಂಭದಲ್ಲಿ ಬೀಳ್ಕೊಡುಗೆ ನೀಡಿ, ನಿವೃತ್ತ ಜೀವನಕ್ಕೆ ಶುಭ ಹಾರೈಸಲಾಯಿತು. ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಸಿಜೆ ಅವರು, ತಮ್ಮ ವೃತ್ತಿ ಜೀವನದಲ್ಲಿ 42 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಗೊಳಿಸಿ ನ್ಯಾಯಾಲಯದಲ್ಲಿ ಸಾಮಾಜಿಕ ಬದ್ಧತೆ ಹಾಗೂ ಸಮಾನತೆಯನ್ನು ಎತ್ತಿ ಹಿಡಿದಿರುವುದಾಗಿ ತಿಳಿಸಿದರು.

ಕರ್ನಾಟಕ ಹೈಕೋರ್ಟ್‍ನಲ್ಲಿ ಕಳೆದ ಅಕ್ಟೋಬರ್ 2021 ರಿಂದ ಸೇವೆ ಸಲ್ಲಿಸಿರುವುದು ನನಗೆ ತುಂಬಾ ಸಂತಸ ತಂದು ಕೊಟ್ಟಿದೆ. ವಕೀಲರಾಗಲೀ, ನ್ಯಾಯಾಧೀಶರಾಗಲೀ ನ್ಯಾಯದ ಪರ ಅಂತಃಕರಣದಲ್ಲಿ ಕೆಲಸ ನಿರ್ವಹಿಸಬೇಕು. ತಮ್ಮ ವೃತ್ತಿಯಲ್ಲಿ ಇಲ್ಲಿಯವರೆಗೂ ನನಗೆ ಎಲ್ಲ ವಿಧದಲ್ಲೂ ಸಹಕಾರ ಕೊಟ್ಟ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು ಎಂದು ತಿಳಿಸಿದರು.
30 ವರ್ಷಗಳಿಗೂ ಅಧಿಕ ವರ್ಷ ವಕೀಲರಾಗಿ, ನ್ಯಾಯಮೂರ್ತಿಗಳಾಗಿ ರಿತುರಾಜ್ ಅವಸ್ಥಿ ಅವರು ಸೇವೆ ಸಲ್ಲಿಸಿದ್ದಾರೆ. ಅವರು ಈ ಹಿಂದೆ ಅಲಹಾಬಾದ್ ಹೈಕೋರ್ಟ್‍ನಲ್ಲಿ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳಾಗಿ 2021ರ ಅ.11ರಂದು ಪ್ರಮಾಣವಚನ ಸ್ವೀಕರಿಸಿ, ಈಗ ವಯೋನಿವೃತ್ತಿ ಹೊಂದಿದ್ದಾರೆ.
ಸಮಾರಂಭದಲ್ಲಿ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಸೇರಿ ಹಲವು ನ್ಯಾಯಮೂರ್ತಿಗಳು, ಕೆಎಸ್‍ಬಿಸಿ ಅಧ್ಯಕ್ಷ ಎಂ.ಕಾಶೀನಾಥ್, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ.ನರಗುಂದ, ಸಹಾಯಕ ಸಾಲಿಸಿಟರ್ ಜನರಲ್ ಎಚ್.ಶಾಂತಿಭೂಷಣ್, ಬೆಂ. ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಹಿರಿಯ ವಕೀಲರು ಮತ್ತು ಕಿರಿಯ ವಕೀಲರು ಭಾಗವಹಿಸಿದ್ದರು.

ಬಾಕ್ಸ್..
ಸಿಜೆಯಿಂದ ನ್ಯಾಯಾಂಗ ಸುಧಾರಣೆಗೆ ಒತ್ತು
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರು, ಕರ್ನಾಟಕ ಹೈಕೋರ್ಟ್‍ನಲ್ಲಿ ನ್ಯಾಯಾಂಗದ ಸುಧಾರಣೆಗೆ ಬಹಳಷ್ಟು ಒತ್ತು ನೀಡಿದ್ದಾರೆ. ಆನ್‍ಲೈನ್ ಗೇಮಿಂಗ್ ಸೇರಿ ಹಲವು ಮಹತ್ವದ ಆದೇಶಗಳನ್ನು ನೀಡಿದ್ದಾರೆ ಎಂದು ಹೈಕೋರ್ಟ್ ಹಂಗಾಮಿ ಸಿಜೆ ಅಲೋಕ್ ಆರಾಧೆ ಸ್ಮರಿಸಿದರು.


ನನ್ನ ತತ್ವಗಳಲ್ಲಿ ನಾನು ಹೊಂದಾಣಿಕೆ ಮಾಡಿಕೊಂಡಿಲ್ಲ

ಕರ್ನಾಟಕ ಹೈಕೋರ್ಟ್ ಅತ್ಯುತ್ತಮ ಕೋರ್ಟ್ ಆಗಿದೆ. ಈ ರಾಜ್ಯದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಂಡಿದ್ದೇನೆ. ನನ್ನ ತತ್ವಗಳಲ್ಲಿ ಯಾವುದೇ ರೀತಿಯಲ್ಲಿಯೂ ನಾನು ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News