ಡಿಸೆಂಬರ್ ಅಂತ್ಯದೊಳಗೆ ಎನ್‌ಇಪಿಯಡಿ ಪಠ್ಯಕ್ರಮ: ಸಚಿವ ಬಿ.ಸಿ.ನಾಗೇಶ್

Update: 2022-07-02 13:46 GMT

ಮಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯಡಿ ಈಗಾಗಲೇ ೧ರಿಂದ ೧೨ನೇ ತರಗತಿ ವರೆಗಿನ ಪಠ್ಯಕ್ರಮವನ್ನು ಇತರೆ ರಾಜ್ಯಗಳಲ್ಲಿ ಅಳವಡಿಸಲಾಗಿದೆ. ಕರ್ನಾಟಕದಲ್ಲಿ ಪದವಿ ಪೂರ್ವ ತರಗತಿಗಳಿಗೆ ಪಠ್ಯ ಕ್ರಮವನ್ನು ಡಿಸೆಂಬರ್ ಅಂತ್ಯದ ವೇಳೆಗೆ ಅಂತಿಮಗೊಳಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಅವರು ಶನಿವಾರ ನಗರದ ಶಕ್ತಿನಗರದಲ್ಲಿರುವ ಶಕ್ತಿ ಪಿಯು ಕಾಲೇಜಿನಲ್ಲಿ ದ.ಕ. ಪ್ರಾಂಶುಪಾಲರ ಸಂಘ, ಚಾಣಕ್ಯ ವಿವಿ ಹಾಗೂ ವಿದ್ಯಾಭಾರತಿ ಆಶ್ರಯದಲ್ಲಿ ಜಿಲ್ಲಾ ಪಿಯು ಕಾಲೇಜುಗಳ ಪ್ರಾಂಶುಪಾಲರಿಗೆ ಏರ್ಪಡಿಸಿದ ‘ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦’ ಕುರಿತ ಕಾರ್ಯಾಗಾರ ಸಮಾರೋಪದಲ್ಲಿ ಮಾತನಾಡಿದರು.

ದೇಶದಲ್ಲಿ ಐಐಟಿ ಸೇರ್ಪಡೆಗೆ ಸಂಶೋಧನಾ ಆಸಕ್ತ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ. ಇದು ಯುವ ಸಮುದಾಯವನ್ನು ಸ್ವಉದ್ಯೋಗ ಹಾಗೂ ದೇಶದ ಬಗೆಗಿನ ಚಿಂತನೆಯಿಂದ ದೂರ ಮಾಡುತ್ತಿದೆ. ಇಂತಹ ಶಿಕ್ಷಣದಿಂದ ಸಮಾಜ ಹಾಗೂ ದೇಶಕ್ಕೆ ಪ್ರಯೋಜನ ಇಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿದೆ ಎಂದವರು ಹೇಳಿದರು.

ಇದುವರೆಗಿನ ಶಿಕ್ಷಣ ಕ್ರಮ ಕೇವಲ ಕೆಲಸಕ್ಕಾಗಿ ಓದುವಿಕೆ ಎಂಬಂತಾಗಿದೆ. ಓದಿದ ಬಳಿಕ ತರಗತಿಯಲ್ಲಿ ಕಲಿತ ವಿಚಾರ ಉದ್ಯೋಗಕ್ಕೆ ನೆರವಾಗುವುದಿಲ್ಲ. ಬದಲು ಆಯಾ ಕಂಪನಿಗಳು ನೀಡುವ ತರಬೇತಿಯೇ ಉದ್ಯೋಗಕ್ಕೆ ನೆರವಾಗುತ್ತದೆ. ಹಾಗಾಗಿ ಕಳೆದ ೭೫ ವರ್ಷಗಳಿಂದ ದೇಶದ ಶಿಕ್ಷಣ ವ್ಯವಸ್ಥೆ ಸ್ವತಂತ್ರ ಉದ್ಯೋಗಕ್ಕೆ ನೆರವಾಗುತ್ತಿಲ್ಲ. ಪರಾವಲಂಬಿ ಬದುಕು ಸೃಷ್ಟಿಸುವ ರೀತಿಯ ಶಿಕ್ಷಣ ನೀಡಲಾಗುತ್ತಿದೆ. ಹೊಸ ಶಿಕ್ಷಣ ನೀತಿಯನ್ವಯ ಕಲಿಕೆ ಜತೆಗೆ ಕೌಶಲ್ಯಕ್ಕೂ ಉತ್ತೇಜನ ನೀಡಲಾಗುತ್ತದೆ. ಕಲಿಕಾ ಅವಧಿಯನ್ನೂ ಪರಿಷ್ಕರಿಸಲಾಗಿದೆ  ಎಂದು ಸಚಿವ ನಾಗೇಶ್ ಹೇಳಿದರು.

ಕೇಶದಾನ ಮಾಡಿದ ವಿದ್ಯಾರ್ಥಿನಿಗೆ ಸನ್ಮಾನ

ಇದೇ ಸಂದರ್ಭ ಕ್ಯಾನ್ಸರ್ ರೋಗಿಗಳಿಗೆ ಕೇಶ ದಾನ ಮಾಡುವ ಮೂಲಕ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಶಕ್ತಿ ಪಿಯು ಕಾಲೇಜು ವಿದ್ಯಾರ್ಥಿನಿ ಆದ್ಯ ಸುಲೋಚನಾ ಮುಳಿಯ ಇವರನ್ನು ಸಚಿವ ನಾಗೇಶ್  ಸನ್ಮಾನಿಸಿದರು.

ಸಂಪನ್ಮೂಲ ವ್ಯಕ್ತಿ ಡಾ.ಗೌರೀಶ್, ಪಿಯು ಉಪನಿರ್ದೇಶಕ ಜಯಣ್ಣ, ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ ಸುಧಾಕರ್, ಉಪನಿರ್ದೇಶಕಿ ಅಭಿವೃದ್ಧಿ ವಿಭಾಗ ರಾಜಲಕ್ಷ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಾಂತ್, ಜಿಲ್ಲಾ ಪಿಯು ಪ್ರಾಂಶುಪಾಲರ ಸಂಘ ಅಧ್ಯಕ್ಷ ಗಂಗಾಧರ್, ಪದಾಧಿಕಾರಿಗಳಾದ ವಿನಾಯಕ್, ಯೂಸುಫ್, ಕವಿತಾ, ವೆಂಕಟೇಶ್, ಶಕ್ತಿ ಕಾಲೇಜು ಆಡಳಿತಾಧಿಕಾರಿ ರಮೇಶ್ ಉಪಸ್ಥಿತರಿದ್ದರು.

ಎರಡು ದಿನಗಳ ಈ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲೆಯ ೧೮೦ ಪಿಯು ಕಾಲೇಜುಗಳ ಸುಮಾರು ೨೦೦ ಮಂದಿ ಪ್ರಾಂಶುಪಾಲ, ಹಿರಿಯ ಉಪನ್ಯಾಸಕರು ಪಾಲ್ಗೊಂಡಿದ್ದರು.

"ಹೊಸ ಶಿಕ್ಷಣ ನೀತಿಯಡಿ ಶಿಕ್ಷಣ ನೀಡುವಾಗ ಶಿಕ್ಷಕರ ನೇಮಕಾತಿಯಲ್ಲೂ ಭವಿಷ್ಯದಲ್ಲಿ ಬದಲಾವಣೆ ತರಬೇಕಾದ ಅಗತ್ಯ ಬರಬಹುದು. ಹೊಸ ಶಿಕ್ಷಣ ನೀತಿ ಜಾರಿಗೆ ತರಬೇಕಾದರೆ ಪಿಯು ಉಪನ್ಯಾಸಕರಿಂದಲೂ ಅಮೂಲ್ಯ ಸಲಹೆ ಕೇಳಲಾಗಿತ್ತು. ಆದರೆ ಅದು ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಹಾಗಾಗಿ ಶಿಕ್ಷಣ ಇಲಾಖೆಯ ಪೋರ್ಟಲ್‌ನಲ್ಲಿ ಇನ್ನೂ ಸಲಹೆ ನೀಡಲು ಅವಕಾಶ ಇದೆ. ಉಪನ್ಯಾಸಕರು ನೀಡುವ ಸಲಹೆಗಳನ್ನು ಪರಿಶೀಲಿಸಿ ಉತ್ತಮವಾಗಿದ್ದರೆ, ಅದನ್ನು ಕಾಲಕಾಲಕ್ಕೆ ಅಳವಡಿಸಿಕೊಳ್ಳಲಾಗುವುದು".
-ಬಿ.ಸಿ.ನಾಗೇಶ್, ಶಿಕ್ಷಣ ಸಚಿವರು, ಕರ್ನಾಟಕ ಸರಕಾರ. 

ಕಯ್ಯಾರರ ಹೆಸರು ಕೈ ಬಿಟ್ಟಿಲ್ಲ: ಗಡಿನಾಡ ಹೋರಾಟಗಾರ, ನಾಡೋಜ ಕಯ್ಯಾರ ಕಿಂಞಣ್ಣ ರೈಯವರ ಹೆಸರು ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತ ಪಠ್ಯವನ್ನು ಕೈ ಬಿಟ್ಟಿಲ್ಲ. ಗೊಂದಲ ಪಡುವ ಅಗತ್ಯವೇ ಇಲ್ಲ ಎಂದು ಪ್ರಾಥಮಿಕ ಮತುತಿ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.

ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾರಾಯಣಗುರುಗಳ ಬಗ್ಗೆ ೫ನೇ ತರಗತಿಯಲ್ಲಿ ಹಿಂದಿಗಿಂತಲೂ ವಿಸ್ತೃತವಾಗಿ ಕಲಿಸಲಾಗುತ್ತದೆ. ಕಯ್ಯಾರರ ವಿಚಾರವನ್ನೂ ಕೈ ಬಿಟ್ಟಿಲ್ಲ. ಶಿಕ್ಷಣ ಇಲಾಖೆ ಪ್ರಕಟಿಸಿದ ತಜ್ಞರ ಸಮಿತಿಗಳ ಪಠ್ಯಪುಸ್ತಕಗಳ ಪಿಡಿಎಫ್ ಪ್ರತಿಯಲ್ಲಿ ಇದನ್ನು ಪರಿಶೀಲಿಸಬಹುದು. ಹೊಸ ಪಠ್ಯಕ್ರಮ ಅಳವಡಿಸುವಾಗ ತಪ್ಪುಗಳಾಗಿದ್ದಲ್ಲಿ  ಸರಿಪಡಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News