ಮಂಗಳೂರು ವಿವಿ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ: ಅಲೋಶಿಯಸ್ ಕಾಲೇಜು ಚಾಂಪಿಯನ್

Update: 2022-07-02 15:11 GMT

ಉಡುಪಿ : ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಉಡುಪಿ ಯುವ ಸಬಲೀ ಕರಣ ಕ್ರೀಡಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ೨೦೨೧-೨೨ ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಮಟ್ಟದ ಪುರುಷ ಮತ್ತು ಮಹಿಳೆಯರ ಬ್ಯಾಡ್ಮಿಂಟನ್ ಪಂದ್ಯಾಟದ ಸಮಾರೋಪ ಸಮಾರಂಭವು ಶನಿವಾರ ಅಜ್ಜರಕಾಡಿನಲ್ಲಿರುವ ಉಡುಪಿ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.

ಚಾಂಪಿಯನ್‌ಶಿಪ್ ರೌಂಡ್ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜು ಪ್ರಶಸ್ತಿ ಗೆದ್ದುಕೊಂಡಿತು. ಮಹಿಳೆಯರ ವಿಭಾಗದಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜು ದ್ವಿತೀಯ, ಕಾರ್ಕಳ ಭುವನೇಂದ್ರ ಕಾಲೇಜು ತೃತೀಯ, ಉಡುಪಿ ಎಂಜಿಎಂ ಕಾಲೇಜು ನಾಲ್ಕನೆ ಸ್ಥಾನ ಮತ್ತು ಪುರುಷರ ವಿಭಾಗದಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜು ದ್ವಿತೀಯ, ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜು ತೃತೀಯ, ಉಜಿರೆ ಎಸ್‌ಡಿಎಂ ಕಾಲೇಜು ನಾಲ್ಕನೆ ಸ್ಥಾನವನ್ನು ಪಡೆದುಕೊಂಡಿತು.

ಪ್ರಿಲಿಮಿನರಿ ರೌಂಡ್ ಮಹಿಳೆಯರ ವಿಭಾಗದಲ್ಲಿ ಪ್ರಥಮ ಕಾರ್ಕಳ ಭುವನೇಂದ್ರ ಕಾಲೇಜು, ದ್ವಿತೀಯ ಮೂಡಬಿದಿರೆ ಆಳ್ವಾಸ್ ಕಾಲೇಜು, ತೃತೀಯ ಉಡುಪಿ ಎಂಜಿಎಂ ಕಾಲೇಜು, ನಾಲ್ಕನೇ ಸ್ಥಾನವನ್ನು ತೆಂಕನಿಡಿ ಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಪುರುಷರ ವಿಭಾಗದಲ್ಲಿ ಪ್ರಥಮ ಮಡಿಕೇರಿ ಎಫ್‌ಎಂಎಚ್‌ಎಂಸಿ ಕಾಲೇಜು, ದ್ವಿತೀಯ ಕುಂದಾಪುರ ಭಂಡಾರ್ಕರ್ ಕಾಲೇಜು, ತೃತೀಯ ಉಡುಪಿ ಪಿಪಿಸಿ ಕಾಲೇಜು, ನಾಲ್ಕನೆ ಸ್ಥಾನವನ್ನು ಕುಟ್ಯಲ್ ಎಸ್‌ಡಿಪಿಟಿ ಕಾಲೇಜು ಪಡೆದುಕೊಂಡಿತು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಪ್ರೊ.ರಾಧಾಕೃಷ್ಣ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾ ನಿಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ ಡಿಸೋಜ, ನಗರಸಭಾ ಸದಸ್ಯ ವಿಜಯ್ ಕೊಡವೂರು ಮಾತನಾಡಿದರು.

ಹೆಬ್ರಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ರಸಾದ್ ರಾವ್, ಪಂದ್ಯಾಟ ವೀಕ್ಷಕ ಅರುಣ್ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ಜಯರಾಮ್ ರೈ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ರೋಷನ್ ಕುಮಾರ್ ಶೆಟ್ಟಿ, ಡಾ.ರಾಮಚಂದ್ರ ಪಾಟ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News