ಡಿಸಿಪಿ ಹುದ್ದೆ ಎಲ್ಲರ ಪ್ರೀತಿ- ಸಹಕಾರ ನೀಡಿದೆ: ಹರಿರಾಂ ಶಂಕರ್

Update: 2022-07-02 17:25 GMT

ಮಂಗಳೂರು: ಸುಮಾರು ಎರಡು ವರ್ಷಗಳ ಅವಧಿಯಲ್ಲಿ ಮಂಗಳೂರಿನಲ್ಲಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹುದ್ದೆ ಸಾರ್ವಜನಿಕರು, ಅಧಿಕಾರಿ ಸಿಬ್ಬಂದಿ, ವಿವಿಧ ಸಂಘಟನೆಗಳು ಸೇರಿದಂತೆ ಎಲ್ಲರ ಪ್ರೀತಿ, ಸಹಕಾರದ ಜತೆಗೆ ಜವಾಬ್ಧಾರಿಯನ್ನೂ ನೀಡಿದೆ ಎಂದು ಮಂಗಳೂರಿನ ನಿರ್ಗಮನ ಡಿಸಿಪಿ ಹಾಗೂ ಹಾಸನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿರುವ ಹರಿರಾಂ ಶಂಕರ್ ಅಭಿಪ್ರಾಯಿಸಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರೇಟ್ ಕಚೇರಿಯ ಸಭಾಂಗಣದಲ್ಲಿ ಇಂದು ಅವರಿಗೆ ಆಯೋಜಿಸಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಮಂಗಳೂರಿನಲ್ಲಿ ವಿವಿಧ ಹಾಗೂ ವಿರೋಧಿ ಸಂಘಟನೆಗಳನ್ನು ಸಮತೂಗಿಸಿಕೊಂಡು ಕರ್ತವ್ಯ ನಿರ್ವಹಿಸುವುದು ಸವಾಲಿನ ವಿಚಾರ. ಈ ನಿಟ್ಟಿನಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಸಹಕಾರ ಸಿಕ್ಕ ಕಾರಣ ಕಳೆದ ಎರಡು ವರ್ಷಗಳಲ್ಲಿ ಯಾವುದೇ ರೀತಿಯ ಮತೀಯ ಗಲಭೆ ಇಲ್ಲದೆ ಇತರ ಕೆಲವೊಂದು ಸಾಮಾಜಿಕ ಸಮಸ್ಯೆಗಳನ್ನು ಎದುರಿಸಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ ತೃಪ್ತಿ ಇದೆ. ಮುಂದೆ ಹಾಸನದ ಜವಾಬ್ಧಾರಿಯಲ್ಲಿ ವಾತಾವರಣ ವಿಭಿನ್ನವಾಗಿದ್ದರೂ ಇಲ್ಲಿಯ ಅನುಭವಗಳನ್ನು ಮಾದರಿಯಾಗಿಸಿಕೊಂಡು ಕರ್ತವ್ಯ ನಿರ್ವಹಿಸಲು ಮುಂದಾಗಿದ್ದೇನೆ ಎಂದರು.

ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರ ನಾಯಕತ್ವದಿಂದ ಬಹಳಷ್ಟು ಜವಾಬ್ಧಾರಿ, ಸಮಸ್ಯೆ ಸಂದರ್ಭಗಳ ನಿಭಾವಣೆಯನ್ನು ಕಲಿತಿರುವೆ. ಇದರಿಂದಾಗಿಯೇ ನಾವು ಕೂಡಾ ಸಾಕಷ್ಟು ಒತ್ತಡ ರಹಿತವಾಗಿ ನಮ್ಮ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದ್ದು, ಸಮಾಜ, ಸಂಘಟನೆಗಳು, ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕವಾಗಿ ಉತ್ತಮ ಬಾಂಧವ್ಯ ಹೊಂದಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಡಿಸಿಪಿಯಾಗಿದ್ದ ಹರಿರಾಂ ಶಂಕರ್ ಹಾಗೂ ಕಮಿಷನರ್ ಶಶಿಕುಮಾರ್ ರಾಮಲಕ್ಷ್ಮಣರಂತೆ ಕರ್ತವ್ಯ ನಿರ್ವಹಿಸುತ್ತಾ, ನಮಗೆಲ್ಲಾ ಸಾಕಷ್ಟು ರೀತಿಯಲ್ಲಿ ಪ್ರೇರಣೆಯಾಗಿದ್ದಾರೆ. ಇಂಜಿನಿಯರ್ ಪದವೀಧರರಾಗಿರುವ ಹರಿರಾಂರವರು ತಾಂತ್ರಿಕ ವಿಷಯಗಳಲ್ಲಿ ಹೆಚ್ಚಿನ ಅನುಭವ ಹೊಂದಿದ ಕಾರಣ ನಮಗೆ ಸಾಕಷ್ಟು ಸಹಕಾರಿಯಾಗಿದೆ ಎಂದು ಎಸಿಪಿ ಮಹೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ಸ್‌ಪೆಕ್ಟರ್ ಗುರುದತ್ತ್, ಆಡಳಿತ ವಿಭಾಗದ ರವಿಚಂದ್ರ, ಪಿಎಸ್‌ಐ ಶರಣಪ್ಪ ಮೊದಲಾದವರು ಹರಿರಾಂ ಜತೆಗಿನ ತಮ್ಮ ಕರ್ತವ್ಯದ ಅನುಭವಗಳನ್ನು  ನೆನಪಿಸಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾತನಾಡಿ, ನಗರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಬಗೆಹರಿಸಲಾಗಿರುವ ಎಲ್ಲಾಪ್ರಕರಣಗಳಲ್ಲೂ ಡಿಸಿಪಿಯಾಗಿ ಹರಿರಾಂ ಶಂಕರ್ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಇಲಾಖೆಯ ಅಧಿಕಾರಿ ಸಿಬ್ಬಂದಿ ವಲಯ, ಸಾಮಾಜಿಕವಾಗಿ ಅವರು ಗಳಿಸಿರುವ ಸ್ಥಾನವನ್ನು ಇದೀಗ ನೂತನ ಡಿಸಿಪಿ ಅಂಶು ಕುಮಾರ್ ಪಡೆಯಬೇಕಾಗಿದೆ ಎಂದು ನಿರ್ಗಮನ ಹಾಗೂ ನೂತನ ಡಿಸಿಪಿಗಳಿಬ್ಬರನ್ನೂ ಅಭಿನಂದಿಸಿದರು.

ಈ ಸಂದರ್ಭ ಡಿಸಿಪಿ ದಿನೇಶ್ ಕುಮಾರ್, ಹಡಪದ್ ಹಾಗೂ ಇತರ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದು, ಹರಿರಾಂ ಶಂಕರ್ ಅವರಿಗೆ ಶುಭ ಕೋರಿ ಬೀಳ್ಕೊಟ್ಟರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News