ಉಳ್ಳಾಲ ತಾಲೂಕು ಸಮನ್ವಯ ಸಮಿತಿ ಸಭೆ

Update: 2022-07-02 17:38 GMT

ಕೊಣಾಜೆ: ನೂತನವಾಗಿ ರಚನೆಯಾದ ಉಳ್ಳಾಲ ತಾಲೂಕಿನ ತಾಲೂಕು ಮಟ್ಟದಲ್ಲಿ ಎಲ್ಲಾ ಇಲಾಖೆಗಳ ಕಚೇರಿಗಳನ್ನು ಶೀಘ್ರವಾಗಿ ತೆರೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಅಸೈಗೋಳಿಯಲ್ಲಿ ಜರಗಿದ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಗಳ ಹಾಗೂ ಜನಪ್ರತಿನಿಧಿ ಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನಿಂದ ಗ್ರಾಮಗಳು ಪ್ರತ್ಯೇಕಗೊಂಡು ಉಳ್ಳಾಲ ತಾಲೂಕು ರಚನೆಯಾಗಿರುವುದರಿಂದ ಭೂಮಿಶಾಖೆಗೆ ಸಂಬಂಧಪಟ್ಟ ದಾಖಲೆಗಳು ವರ್ಗಾವಣೆ ಆಗದಿರುವ ಕುರಿತು ಕ್ರಮಕೈಗೊಳ್ಳಲು ತಹಶೀಲ್ದಾರರಿಗೆ ಸೂಚಿಸಲಾಯಿತು. ತಾಲೂಕು ಮಟ್ಟದ ಕಛೇರಿಗಳಿಗೆ ಹುದ್ದೆಗಳ ಮಂಜೂರಾತಿ ಆಗದಿರುವ ವಿಚಾರ, ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಿಂದ ಹೊರಗುಳಿಯುವ ಗ್ರಾಮಗಳನ್ನು ಇದೇ ತಾಲೂಕು ವ್ಯಾಪ್ತಿಯ ಕೇಂದ್ರಗಳಿಗೆ ಸೇರ್ಪಡೆಗೊಳಿಸುವುದು, ಆದ್ಯತಾ ಕುಟುಂಬಗಳಿಗೆ ಪಡಿತರ ಚೀಟಿ ವಿತರಿಸುವುದು,  ಶಾಲೆ, ಅಂಗನವಾಡಿ, ಮನೆನಿವೇಶನ, ಆಟದ ಮೈದಾನ ಮುಂತಾದ ಸಾರ್ವಜನಿಕ ಉದ್ದೇಶಗಳಿಗೆ ಜಮೀನು ಕಾದಿರಿಸುವುದು ಮೊದಲಾದ  ವಿಚಾರಗಳ ಕುರಿತು ಚರ್ಚೆ ನಡೆಯಿತು. ತಾಲೂಕು ಮಟ್ಟದ ಕಛೇರಿಗಳಿಗಾಗಿ ಜಮೀನು ಗುರುತಿಸುವ ವಿಚಾರಕ್ಕಾಗಿ ಸಂಬಂಧಪಟ್ಟ ಇಲಾಖಾಧಿಕಾರಿಗಳು ಹಾಗೂ ತಹಶೀಲ್ದಾರರು ಪ್ರತ್ಯೇಕವಾಗಿ ಸಭೆ ನಡೆಸಿ ಈ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಶಾಸಕರು ತಿಳಿಸಿದರು. ತಾಲೂಕಿಗೆ ಪ್ರತ್ಯೇಕ ಅಧಿಕಾರಿಗಳ ನೇಮಕವಾಗುವ ತನಕ ನೋಡಲ್ ಅಧಿಕಾರಿಗಳನ್ನು ನೇಮಿಸಿ ನೂತನ ತಾಲೂಕು ವ್ಯಾಪ್ತಿಯ ಜನರಿಗೆ ಸಮಸ್ಯೆಯಾಗದ ರೀತಿಯಲ್ಲಿ ಕ್ರಮಕೈಗೊಳ್ಳಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಆರೋಗ್ಯ, ಪಂ.ರಾಜ್ ಇಂಜಿನಿಯರಿಂಗ್, ಶಿಕ್ಷಣ, ಅರಣ್ಯ, ಶಿಶು ಅಭಿವೃದ್ಧಿ , ಕೃಷಿ, ಮೆಸ್ಕಾಂ, ಹಿಂದುಳಿದ ವರ್ಗ, ಆಯುಶ್, ಆಹಾರ, ಸಣ್ಣ ನೀರಾವರಿ ಮೊದಲಾದ ಇಲಾಖೆಗಳ ಅಧಿಕಾರಿಗಳು ತಾಲೂಕು ಮಟ್ಟದಲ್ಲಿ ಕಛೇರಿ ತೆರೆಯುವ ವಿಚಾರದಲ್ಲಿ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮಾಜಿ ತಾ.ಪಂ.ಸದಸ್ಯ ಅಬ್ದುಲ್‌ ಜಬ್ಬಾರ್, ಸುರೇಖ, ಪ್ರೊಬೆಶನರಿ ಕಾರ್ಯನಿರ್ವಾಹಕ ಅಧಿಕಾರಿ,  ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಕರಣಿಕರು ಸಭೆಯಲ್ಲಿ ಭಾಗವಹಿಸಿದ್ದರು.

ಉಳ್ಳಾಲ ತಾಲೂಕು ಪಂಚಾಯತ್ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ವಿ.ನಾಗರಾಜ್ ಸ್ವಾಗತಿಸಿದರು. ಉಳ್ಳಾಲ ತಾಲೂಕು ತಹಶೀಲ್ದಾರ್ ಗುರುಪ್ರಸಾದ್ ವಂದಿಸಿದರು.

ದೇರಳಕಟ್ಟೆಗೆ ಪದವಿಪೂರ್ವ ಕಾಲೇಜು ಮಂಜೂರು

ಉಳ್ಳಾಲ ತಾಲೂಕಿನ ದೇರಳಕಟ್ಟೆ ಸರಕಾರಿ ಪ್ರೌಢಶಾಲೆಯನ್ನು ಸರಕಾರಿ ಪದವಿ ಪೂರ್ವ ಕಾಲೇಜನ್ನಾಗಿ ಮೇಲ್ದರ್ಜೆಗೇರಿಸಿ ಸರಕಾರ ಆದೇಶಿಸಿದೆ ಎಂದು ಶಾಸಕ ಯ.ಟಿ.ಖಾದರ್ ಸಭೆಯಲ್ಲಿ ಪ್ರಕಟಿಸಿದರು. ಶೂನ್ಯ ಮತ್ತು ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳ ದಾಖಲಾತಿ ಹೊಂದಿರುವ ಬೇರೆ ಜಿಲ್ಲೆಯ ಸರಕಾರಿ ಪದವಿ ಪೂರ್ವ ಕಾಲೇಜನ್ನು ಹುದ್ದೆ ಸಮೇತ ಇಲ್ಲಿಗೆ ವರ್ಗಾಯಿಸಿರುವುದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ ಎಂದು ಶಾಸಕರು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News