ಝುಬೈರ್ ಬಂಧನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವ ಕಣ್ಕಟ್ಟು

Update: 2022-07-03 05:23 GMT

ನಾಲ್ಕು ವರ್ಷಗಳ ನಂತರ ದಿಢೀರನೆ ಬಂಧನ ಮಾಡುವಂತಹ ಆದೇಶ ಯಾಕೆ, ಎಲ್ಲಿಂದ, ಹೇಗೆ ಬಂತು? ಅನಾಮಿಕ ಟ್ವೀಟನ್ನು ಆಧರಿಸಿ ಬಂಧಿಸಬಹುದೇ? ಇದೇ ರೀತಿ ಬೇರೆ ಟ್ವೀಟ್‌ಗಳು ಪ್ರಕಟವಾಗಿವೆ. ಅವರನ್ನು ಪ್ರಶ್ನಿಸದೆ ಕೇವಲ ಝುಬೈರ್ ಯಾಕೆ? ಆತ ಮುಸ್ಲಿಮ್ ಎನ್ನುವ ಕಾರಣಕ್ಕೇ? ಝುಬೈರ್ ಬಂಧನದ ವಾರೆಂಟ್ ಆತನ ನ್ಯಾಯವಾದಿಗಳಿಗೆ ತಲುಪುವುದಕ್ಕೂ ಮೊದಲು ಸಂಘ ಪರಿವಾರದ ತುತ್ತೂರಿ ರಿಪಬ್ಲಿಕ್ ಟಿವಿ ಬಳಿ ದೊರಕಿದ್ದು ಹೇಗೆ?
 


ಬೆಟ್ಟದಂತಹ ನಿರಂಕುಶ ಪ್ರಭುತ್ವವು ಹತ್ತಿಯಂತೆ ಹಾರಿ ಹೋಗುವುದನ್ನು ನಾವು ನೋಡುತ್ತೇವೆ, ಪ್ರತಿಯೊಂದು ಕಿರೀಟವೂ ಉದುರುತ್ತದೆ, ಸಿಂಹಾಸನವು ಕಳಚಿ ಬೀಳುತ್ತದೆ - ಫೈಜ್ ಅಹ್ಮದ್ ಫೈಜ್

2, ಆಗಸ್ಟ್ 1935ರಂದು ಅಂತರ್‌ರಾಷ್ಟ್ರೀಯ ಕಮ್ಯುನಿಸ್ಟ್ ಸಮಾವೇಶದಲ್ಲಿ ಮಾತನಾಡುತ್ತ ಕಮ್ಯುನಿಸ್ಟ್ ಮುಖಂಡ ಬಲ್ಗೇರಿಯಾದ ಡಿಮಟ್ರೋವ್ ‘‘ಫ್ಯಾಶಿಸಂ ಬೇರೆ ಬೇರೆ ದೇಶಗಳಲ್ಲಿ ಅಲ್ಲಿನ ಚಾರಿತ್ರಿಕ-ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ಬೇರೆ ಬೇರೆ ಸ್ವರೂಪದಲ್ಲಿರುತ್ತದೆ... ತನಗೆ ತಳಮಟ್ಟದ ಜನ ಬೆಂಬಲವಿಲ್ಲದ ಕೆಲ ದೇಶಗಳಲ್ಲಿ ಮತ್ತು ಪಕ್ಷದೊಳಗೆ ಆಂತರಿಕ ಭಿನ್ನಮತವಿರುವ ಸಂದರ್ಭದಲ್ಲಿ ಫ್ಯಾಶಿಸಂ ಅಧಿಕಾರಕ್ಕೆ ಬಂದ ಕೂಡಲೇ ಸಂಸತ್ತನ್ನು ರದ್ದುಗೊಳಿಸುವುದಿಲ್ಲ ಬದಲಿಗೆ ಆರಂಭದಲ್ಲಿ ಇತರೇ ಪ್ರಜಾತಾಂತ್ರಿಕ ಪಕ್ಷಗಳಿಗೆ ಅಲ್ಪ ಪ್ರಮಾಣದಲ್ಲಾದರೂ ಉಸಿರಾಡುವ ಸ್ವಾತಂತ್ರ್ಯ ಕೊಡುತ್ತದೆ... ಇನ್ನೂ ಕೆಲ ದೇಶಗಳಲ್ಲಿ ಜನಕ್ರಾಂತಿಯಾಗುವ ಸಾಧ್ಯತೆಗಳು ಕಂಡು ಬಂದಾಗ ತಕ್ಷಣದಲ್ಲಿ ತನ್ನ ಏಕಾಧಿಪತ್ಯವನ್ನು ಬಿಗಿಗೊಳಿಸುತ್ತದೆ ಮತ್ತು ತನ್ನ ವಿರೋಧಿಗಳು ಮತ್ತು ವಿರೋಧ ಪಕ್ಷಗಳ ಮೇಲೆ ತೀವ್ರವಾದ ದಾಳಿ ನಡೆಸುತ್ತದೆ ಮತ್ತು ಅದು ಅಧಿಕಾರಕ್ಕೆ ಏರುವ ಸಂದರ್ಭದಲ್ಲಿ ಆ ಫ್ಯಾಶಿಸಂ ವ್ಯವಸ್ಥೆಯು ಹಿಂದಿನ ರಾಜಕೀಯ ಪಕ್ಷದ ಬದಲಿಗೆ ಮತ್ತೊಂದು ಪಕ್ಷವಾಗಿರುವುದಿಲ್ಲ. ಆದರೆ ಅದು ಹಳೆಯದನ್ನು ಸಂಪೂರ್ಣ ಕೆಡವಿ ತನ್ನದೇ ಸರ್ವಾಧಿಕಾರದ ಹೊಸ ವ್ಯವಸ್ಥೆಯನ್ನು ನಿರ್ಮಿಸುತ್ತದೆ... ಈ ಫ್ಯಾಶಿಸಂ ವಿರುದ್ಧದ ಹೋರಾಟದಲ್ಲಿ ನಮ್ಮ ಪಕ್ಷಗಳ ಬಹು ಮುಖ್ಯ ದೌರ್ಬಲ್ಯವೆಂದರೆ ತೀರಾ ಅಪಕ್ವತೆ ಮತ್ತು ಪರಿಪೂರ್ಣತೆಯಿಲ್ಲದೆ ಪ್ರತಿಕ್ರಿಯಿಸುತ್ತವೆ.. ಈ ಫ್ಯಾಶಿಸಂ ವಿರುದ್ಧದ ಹೋರಾಟವನ್ನು ನಿರ್ಲಕ್ಷಿಸುತ್ತವೆ.. ಫ್ಯಾಶಿಸಂ ವಿರುದ್ಧ ಸೈದ್ಧಾಂತಿಕ ಹೋರಾಟವನ್ನು ರೂಪಿಸುವುದಿಲ್ಲ.. ಮುಸ್ಸೋಲಿನಿ ಗ್ಯಾರಿಬಾಲ್ಡಿಯ ಮೂಲಕ ತನ್ನದೇ ಏಕಮೇವದ್ವಿತೀಯ ನಾಯಕತ್ವ ಕಟ್ಟಿಕೊಳ್ಳುತ್ತಾನೆ, ಫ್ರೆಂಚ್ ಫ್ಯಾಶಿಸ್ಟರು ಜೋನ್ ಆಫ್ ಆರ್ಕಳ ಮೂಲಕ ತಮ್ಮ ಹೀರೋಗಿರಿ ಮಂಡಿಸುತ್ತಾರೆ, ಅಮೆರಿಕನ್ ಫ್ಯಾಶಿಸ್ಟರು ಸ್ವಾತಂತ್ರ್ಯದ ಯುದ್ಧದ ಪರಂಪರೆಯಲ್ಲಿ, ವಾಶಿಂಗ್ಟನ್ ಮತ್ತು ಲಿಂಕನ್ ಲೆಗಸಿಯಲ್ಲಿ ತಮ್ಮ ಸಿದ್ಧಾಂತ ಬೇಯಿಸಿಕೊಳ್ಳುತ್ತಾರೆ..’’ ಎಂದು ಹೇಳುತ್ತಾನೆ. ಇಂದಿನ ಆರೆಸ್ಸೆಸ್-ಮೋದಿ ಆಡಳಿತದಲ್ಲಿ ಫ್ಯಾಶಿಸಂ ಕುರಿತಾದ ಡಿಮಟ್ರೋವ್‌ನ ಮೇಲಿನ ಮಾತುಗಳು ನಮಗೆ ಚಿರಪರಿಚಿತ ಅನಿಸುತ್ತದೆಯಲ್ಲವೇ?

17 ಜನವರಿ 2016ರಂದು ರೋಹಿತ್ ವೇಮುಲಾರ ಸಾಂಸ್ಥಿಕ ಹತ್ಯೆ, ಫೆಬ್ರವರಿ 2016ರಲ್ಲಿ ಜೆಎನ್‌ಯು ಕ್ಯಾಂಪಸ್‌ನಲ್ಲಿ ಪ್ರಭುತ್ವದ ದೌರ್ಜನ್ಯಗಳ ಮೂಲಕ ಆರಂಭಗೊಂಡ ಈ ಅಘೋಷಿತ ತುರ್ತುಪರಿಸ್ಥಿತಿ ಇಂದು ನ್ಯಾಯವಾದಿ, ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಪತ್ರಕರ್ತ ಝುಬೈರ್ ಅವರ ಅಕ್ರಮ ಬಂಧನದವರೆಗೆ ಬಂದು ತಲುಪಿದೆ ಮತ್ತು ಇದು ಮುಂದುವರಿಯುತ್ತದೆ.. ಸಮಾಜವನ್ನು ಮತೀಯವಾದದ, ಜಾತೀಯತೆಯ ಆಧಾರದ ಮೇಲೆ ಛಿದ್ರಗೊಳಿಸಿದ ಆರೆಸ್ಸೆಸ್ ಅದರ ಫಲವಾಗಿ ಮೂಡಿದ ಬಿರುಕುಗಳ ಮೇಲೆ ಒಂದು ಹುಸಿಯಾದ ದೇಶಪ್ರೇಮದ ಭಾವೋದ್ರೇಕವನ್ನು ಸೃಷ್ಟಿಸಿದೆ. ತನ್ನ ಸಿದ್ಧಾಂತವನ್ನು ಒಪ್ಪದವರೆಲ್ಲರನ್ನೂ ರಾಷ್ಟ್ರ ವಿರೋಧಿಗಳೆಂದು ಜರೆಯುವ ಒಂದು ಸಂಪ್ರದಾಯವನ್ನು ಹುಟ್ಟು ಹಾಕುತ್ತಿರುವ ಸಂಘ ಪರಿವಾರ ‘ಸಾಂಸ್ಕೃತಿಕ ರಾಷ್ಟ್ರೀಯತೆ, ಹಿಂದೂ ರಾಷ್ಟ್ರೀಯತೆ, ಪ್ರತ್ಯೇಕತೆಯ ರಾಷ್ಟ್ರೀಯತೆ’ಯ ಹೆಸರಿನಲ್ಲಿ ನಿರ್ದಿಷ್ಟವಾಗಿಯೇ ಫ್ಯಾಶಿಸಂ ಅನ್ನು ಜಾರಿಗೊಳಿಸುತ್ತಿದೆ. ಆರೆಸ್ಸೆಸ್‌ನ ಹಿಡನ್ ಅಜೆಂಡಾಗಳೆಲ್ಲವೂ ಇಂದು ಮೋದಿಯವರ ಆಡಳಿತದಲ್ಲಿ ಮುಕ್ತ ಅಜೆಂಡಗಳಾಗಿ ವ್ಯವಸ್ಥೆಯಲ್ಲಿ ನುಸುಳತೊಡಗಿವೆ. ಈ ಮೂಲಕ ಮಾನವೀಯತೆಯ, ಅಭಿವ್ಯಕ್ತಿ ಸ್ವಾತಂತ್ರದ, ಆತ್ಮ ಗೌರವದ ಘನತೆಯನ್ನೇ ಧ್ವಂಸಗೊಳಿಸಲಾಗುತ್ತಿದೆ. ಇತ್ತೀಚಿನ ತೀಸ್ತಾ ಮತ್ತು ಝುಬೈರ್ ಅವರ ಬಂಧನ ಇದಕ್ಕೆ ಸ್ಪಷ್ಟವಾದ ಉದಾಹರಣೆಯಾಗಿದೆ.

‘ಬಾಲಾಜಿ ಕಿ ಜೈ’ ಎನ್ನುವ ಟ್ವಿಟರ್ ಖಾತೆಯಿಂದ ಹನುಮಾನ್ ಭಕ್ತ್ ಹೆಸರಿನ ವ್ಯಕ್ತಿ ಪತ್ರಕರ್ತ, ಆಲ್ಟ್ ನ್ಯೂಸ್‌ನ ಉಪ ಸಂಪಾದಕ ಝುಬೈರ್ ಅವರು 2018ರಂದು ತಮ್ಮ ಟ್ವಿಟರ್ ಖಾತೆಯಲ್ಲಿನ ಪೋಸ್ಟ್ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆನ್ನುವ ದೂರನ್ನು ಟ್ವೀಟ್ ಮಾಡಿದರು. ಇದಕ್ಕಾಗಿ ಕಾದು ಕುಳಿತವರಂತೆ ವರ್ತಿಸಿದ ದಿಲ್ಲಿ ಪೊಲೀಸರು ಅತ್ಯಂತ ಕ್ಷಿಪ್ರಗತಿಯಲ್ಲಿ ಪತ್ರಕರ್ತ ಝುಬೈರ್‌ರನ್ನು ಬಂಧಿಸಿದರು. ಇಲ್ಲಿನ ಪ್ರಜ್ಞಾವಂತರು ಈ ಬಂಧನವನ್ನು ಖಂಡಿಸಿದ್ದಾರೆ. ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರ ವಕ್ತಾರರು ಪತ್ರಕರ್ತರನ್ನು, ಅವರು ಮಾಡಿದ ಬರಹಗಳಿಗೆ, ಟ್ವಿಟರ್‌ಗಳಿಗೆ ಅಥವಾ ಹೇಳಿಕೆಗಳಿಗೆ ಬಂಧಿಸಬಾರದು ಎಂದು ಹೇಳಿದ್ದಾರೆ. ಇಡೀ ಪ್ರಹಸನದಲ್ಲಿ ಬೆಳಕಿಗೆ ಬಂದ ಸತ್ಯ ಸಂಗತಿಗಳೆಂದರೆ

ಈ ‘ಬಾಲಾಜಿ ಕಿ ಜೈ’ ಎನ್ನುವ ಟ್ವೀಟರ್ ಖಾತೆಯನ್ನು ಅಕ್ಟೋಬರ್ 2021ರಲ್ಲಿ ತೆರೆಯಲಾಯಿತು. ಆದರೆ ಆ ಖಾತೆಯಿಂದ ಜೂನ್ 19ರಂದು ಝುಬೈರ್ ವಿರುದ್ಧ ಮೊದಲ ಟ್ವೀಟ್ ಮಾಡಲಾಗಿತ್ತು. ಇದನ್ನು ಆಧರಿಸಿ ಜೂನ್ 20ರಂದು ದಿಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದರು. ಜೂನ್ 27ರಂದು ಇದೇ ಟ್ವಿಟರ್‌ನಿಂದ ‘ನನ್ನ ಖಾತೆಯನ್ನು ಅನುಸರಿಸಿ’ ಎಂದು ಎರಡನೇ ಟ್ವೀಟ್ ಮಾಡಲಾಗಿದೆ. ಆಲ್ಟ್ ಸುದ್ದಿ ಅಂತರ್ಜಾಲ ಪತ್ರಿಕೆಯ ಸಹ ಸಂಸ್ಥಾಪಕ ಪ್ರತೀಕ್ ಸಿನ್ಹಾ ಅವರನ್ನು ಬಂಧಿಸಿ ಎಂದು ಮೂರನೇ ಟ್ವೀಟ್ ಮಾಡಲಾಗಿದೆ. ನಂತರ ನಿಗೂಢವಾದ ಈ ಟ್ವಿಟರ್ ಖಾತೆಯೇ ಅಂತರ್ಜಾಲ ತಾಣದಿಂದ ಕಣ್ಮರೆಯಾಗಿದೆ. ಆದರೆ ಜುಲೈ 1ರಂದು ದಿಢೀರನೆ ಪ್ರತ್ಯಕ್ಷವಾಗಿದೆ ಎಂದು ವರದಿಯಾಗಿದೆ. ಜೂನ್ 28ರಂದು ಝುಬೈರ್‌ನ್ನು ಬಂಧಿಸಿದ್ದರು. ಆದರೆ ಪ್ರಭುತ್ವ ಮತ್ತು ಪೊಲೀಸ್ ವ್ಯವಸ್ಥೆ ಉತ್ತರಿಸಬೇಕಾದ ಮುಖ್ಯ ಪ್ರಶ್ನೆಗಳು ಹಾಗೇ ಉಳಿದುಕೊಂಡಿವೆ.

ಹನಿಮೂನ್ ಹೊಟೇಲ್‌ನ್ನು ಹನುಮಾನ್ ಹೋಟೆಲ್ ಎಂದು ಬದಲಾಯಿಸಿದ 1983ರ ಹಿಂದಿ ಸಿನೆಮಾ ‘ಕಿಸ್ಸಿ ಸೆ ನ ಕಹೆನಾ’ದ ಇಮೇಜ್‌ನ್ನು ಪೋಸ್ಟ್ ಮಾಡಿ ‘‘2014ರ ಮುಂಚೆ ಹನಿಮೂನ್ ಹೊಟೇಲ್, 2014ರ ನಂತರ ಹನುಮಾನ್ ಹೊಟೇಲ್’’ ಎಂದು 2018ರಲ್ಲಿ ಝುಬೈರ್ ಟ್ವೀಟ್ ಮಾಡಿದ್ದರು. ಇದರಲ್ಲಿ ಧಾರ್ಮಿಕ ಭಾವನೆಗಳಿಗೆ ಎಲ್ಲಿಂದ ಧಕ್ಕೆಯಾಗಿದೆ? ಒಂದು ವೇಳೆ ಆಗಿರುವುದು ಹೌದಾದರೆ ಆ ಸಿನೆಮಾ ನಿರ್ದೇಶನ ಮಾಡಿದ ದಿವಂಗತ ಹೃಷಿಕೇಶ್ ಮುಖರ್ಜಿಯವರು ತಪ್ಪಿತಸ್ಥರಾಗುತ್ತಾರೆಯೇ? ಇದಕ್ಕೆ ಸರ್ಟಿಫಿಕೇಟ್ ನೀಡಿದ ಸಿಬಿಎಫ್‌ಸಿ ತಪ್ಪಿತಸ್ಥರೇ? ನಾಲ್ಕು ವರ್ಷಗಳ ನಂತರ ದಿಢೀರನೆ ಬಂಧನ ಮಾಡುವಂತಹ ಆದೇಶ ಯಾಕೆ, ಎಲ್ಲಿಂದ, ಹೇಗೆ ಬಂತು? ಅನಾಮಿಕ ಟ್ವೀಟನ್ನು ಆಧರಿಸಿ ಬಂಧಿಸಬಹುದೇ? ಇದೇ ರೀತಿ ಬೇರೆ ಟ್ವೀಟ್‌ಗಳು ಪ್ರಕಟವಾಗಿವೆ. ಅವರನ್ನು ಪ್ರಶ್ನಿಸದೆ ಕೇವಲ ಝುಬೈರ್ ಯಾಕೆ? ಆತ ಮುಸ್ಲಿಮ್ ಎನ್ನುವ ಕಾರಣಕ್ಕೇ? ಝುಬೈರ್ ಬಂಧನದ ವಾರೆಂಟ್ ಆತನ ನ್ಯಾಯವಾದಿಗಳಿಗೆ ತಲುಪುವುದಕ್ಕೂ ಮೊದಲು ಸಂಘ ಪರಿವಾರದ ತುತ್ತೂರಿ ರಿಪಬ್ಲಿಕ್ ಟಿವಿ ಬಳಿ ದೊರಕಿದ್ದು ಹೇಗೆ?

ಈ ಎಲ್ಲಾ ಪ್ರಶ್ನೆಗಳಿಗೆ ಮೋದಿ ಸರಕಾರ ಉತ್ತರಿಸುವುದಿಲ್ಲ ಎಂಬುದೂ ಗೊತ್ತು. ಆದರೆ ಪ್ರಜ್ಞಾವಂತರಿಗೆ ಉತ್ತರಗಳು ಗೊತ್ತು. ಪತ್ರಕರ್ತ ಝುಬೈರ್ ಸರಕಾರದ ಹಗರಣಗಳನ್ನು, ಸಮಾಜದಲ್ಲಿ ಅಶಾಂತಿಯುಂಟು ಮಾಡುವ ಸುಳ್ಳು ಸುದ್ದಿಗಳ ಸತ್ಯಾಸತ್ಯತೆಯನ್ನು ಬಯಲುಗೊಳಿಸಿದ್ದರು ಮತ್ತು ಇದು ಸರ್ವಾಧಿಕಾರಿ ಪ್ರಭುತ್ವಕ್ಕೆ ಬಿಸಿ ತುಪ್ಪವಾಗಿರುವುದು ಸಹ ಸತ್ಯ. ಕೂಡಲೇ ಅವರ ಮೇಲೆ ಬಂಧನದ ಗದಾಪ್ರಹಾರ ನಡೆಸುತ್ತದೆ. ಆದರೆ ಝುಬೈರ್‌ಗೆ ‘ಭಾರತದ ಎಲ್ಲಾ ನಾಗರಿಕರಿಗೆ ಸಂಪೂರ್ಣ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ’ ಎಂದು ಹೇಳುವ ಸಂವಿಧಾನದ ಪರಿಚ್ಛೇದ 19(1ಎ) ಅಡಿಯಲ್ಲಿ ರಕ್ಷಣೆ ಸಿಗುವುದಿಲ್ಲವೇ? ಸಿಗಬೇಕು. ಆದರೆ ಸಿಗುವುದಿಲ್ಲ. ಏಕೆಂದರೆ ಇದನ್ನು ಬೇಕೆಂತಲೇ ಸಂಕೀರ್ಣಗೊಳಿಸುವ ಪ್ರಭುತ್ವವು ‘ದೇಶದ ಸಾರ್ವಭೌಮ, ಸಮಗ್ರತೆ, ಭದ್ರತೆಯ ವಿಷಯ ಬಂದಾಗ ಅದನ್ನು ರಕ್ಷಿಸಲು ಮೇಲಿನ ಪರಿಚ್ಛೇದ ಅಡ್ಡಿ ಬರುವುದಿಲ್ಲ’ ಎಂದು ಹೇಳುವ ಪರಿಚ್ಛೇದ 19(2)ನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ. ಇದನ್ನು ಬಳಸಿಕೊಂಡು ತಮ್ಮನ್ನು ಟೀಕಿಸುವವರ ವಿರುದ್ದ ಜಳಪಿಸಲು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸಲು ಮುಂದಾಗುತ್ತದೆ. ಇದಕ್ಕೆ ಝುಬೈರ್ ಇತ್ತೀಚಿನ ಬಲಿಪಶುವಾಗಿದ್ದಾರೆ.
  
ಆದರೆ ಈ ಫ್ಯಾಶಿಸ್ಟ್ ಆಡಳಿತದ ಕಾಲದ ವಿರೋಧಾಭಾಸವೆಂದರೆ ಸ್ವತಃ ರಾಜಕೀಯ ಪಕ್ಷಗಳು ಅಧಿಕಾರ ಕಬ್ಜಾ ಮಾಡಿಕೊಳ್ಳುವುದಕ್ಕಾಗಿ ಮತೀಯ ಭಾವನೆಗಳನ್ನು ಕೆರಳಿಸುತ್ತವೆ. ಧರ್ಮಗಳ ನಡುವೆ, ಜಾತಿಗಳ ನಡುವೆ ದ್ವೇಷ, ಅಶಾಂತಿ ಹುಟ್ಟಿಸುತ್ತವೆ. ಫೆಬ್ರವರಿ 2020ರಲ್ಲಿನ ದಿಲ್ಲಿ ಗಲಭೆಗಳು ತೀರಾ ಇತ್ತೀಚಿನ ಉದಾಹರಣೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷದ ಸಂಸದರು, ಶಾಸಕರು, ಮಂತ್ರಿಗಳು ಬಹಿರಂಗವಾಗಿ ಮುಸ್ಲಿಮ್ ಧರ್ಮದ ವಿರುದ್ಧ ದ್ವೇಷದ ಮಾತುಗಳನ್ನಾಡಿ ಜನರನ್ನು ಪ್ರಚೋದಿಸಿದರು. ಗಲಭೆಗಳಿಗೆ ಕುಮ್ಮಕ್ಕು ನೀಡಿದರು. ಇದಕ್ಕೆ ವೀಡಿಯೊ ಸಾಕ್ಷಿಗಳಿವೆ. ಇದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ ದೊರಕುವುದಿಲ್ಲ. ಈ ಸನ್ನಿವೇಶದಲ್ಲಿ ಪರಿಚ್ಛೇದ 19(2) ಅನ್ವಯವಾಗುತ್ತದೆ. ಆದರೆ ಫ್ಯಾಶಿಸ್ಟ್ ಸರಕಾರವು ಈ ಗಲಭೆಕೋರರಿಗೆ ಈ ಪರಿಚ್ಛೇದವನ್ನು ಅನ್ವಯಿಸುವುದಿಲ್ಲ. ಬದಲಿಗೆ ಸತ್ಯಾನ್ವೇಷಣೆ ಮಾಡಿದ ಪತ್ರಕರ್ತ ಝುಬೈರ್‌ಗೆ ಪರಿಚ್ಛೇದ 19(1)ರ ಅಡಿಯಲ್ಲಿ ನ್ಯಾಯ ನಿರಾಕರಿಸಿ ಪರಿಚ್ಛೇದ 19(2) ಅಡಿಯಲ್ಲಿ ಆರೋಪಿಸುತ್ತಾರೆ. ಇದೇ ಸಂದರ್ಭದಲ್ಲಿ ಪ್ರವಾದಿಯವರನ್ನು ಅವಹೇಳನ ಮಾಡಿದ ನೂಪುರ್ ಶರ್ಮಾ ದೇಶದಲ್ಲಿ ಅಶಾಂತಿ ಹುಟ್ಟು ಹಾಕಿದ್ದಾರೆ ಎಂದು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಸೂರ್ಯ ಕಾಂತ್ ಅಭಿಪ್ರಾಯಪಟ್ಟಿದ್ದಾರೆ. ‘‘ಇಡೀ ದೇಶದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣಗೊಂಡರೆ ಅದಕ್ಕೆ ನೂಪುರ್ ಶರ್ಮಾ ಹೊಣೆ’’ ಎಂದು ಕಟುವಾದ ಶಬ್ದಗಳಲ್ಲಿ ಸುಪ್ರೀಂ ಕೋರ್ಟ್ ಟೀಕಿಸಿದೆ.

ಇವರಿಗೆ ಪರಿಚ್ಛೇದ 19(2) ಅನ್ವಯಿಸಬೇಕಾದ ಪ್ರಭುತ್ವ ಜಾಣ ಮೌನ ವಹಿಸುತ್ತದೆ. ಇಡೀ ಪ್ರಕರಣದ ನೀತಿ ಪಾಠವೆಂದರೆ ಪ್ರಭುತ್ವವು ತನ್ನ ಅನುಕೂಲಕ್ಕೆ ತಕ್ಕಂತೆ ಕಾನೂನುಗಳನ್ನು ಬಳಸಿಕೊಳ್ಳುತ್ತದೆ ಮತ್ತು ಸೃಷ್ಟಿಸಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೇಗೆ ಅರ್ಥೈಸಬೇಕು? ಈ ವೈರುಧ್ಯಗಳಿಗೆ 2015ರ ‘ಶ್ರೇಯಾ ಸಿಂಘಾಲ್ ಪ್ರಕರಣ’ದಲ್ಲಿ ನ್ಯಾಯಮೂರ್ತಿ ರೋಹಿಂಗ್ಟನ್ ಫಾಲಿ ನಾರಿಮನ್ ಅವರು ಹೇಳಿದ ಮಾತುಗಳಲ್ಲಿ ಉತ್ತರವಿದೆ. ಅವರು ವಿಚಾರಣೆ ನಡೆಸುತ್ತಾ ‘‘1969 ರಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್ ‘Brandenburg case’ನಲ್ಲಿ ತೀರ್ಪು ನೀಡುತ್ತ ‘ಸಮರ್ಥನೆ ಮತ್ತು ಪ್ರಚೋದನೆ ನಡುವೆ ವ್ಯತ್ಯಾಸವನ್ನು ಅರಿಯಬೇಕಿದೆ. ಒಂದು ನಿರ್ದಿಷ್ಟ ಅಂಶವನ್ನು ಸಮರ್ಥಿಸಿಕೊಳ್ಳುವುದು ಮತ್ತು ಸರಕಾರದ ವಿರುದ್ಧ ಸಶಸ್ತ್ರ ಹೋರಾಟ ನಡೆಸುವಂತೆ ಉತ್ತೇಜಿಸುವುದು ಎರಡರ ನಡುವೆ ವ್ಯತ್ಯಾಸವಿದೆ’ ಎಂದು ಹೇಳಿದೆ. ನಾವೂ ಇದೇ ಪರೀಕ್ಷೆಯನ್ನು ಅಳವಡಿಸಿಕೊಳ್ಳಬೇಕು’’ ಎಂದು ಹೇಳುತ್ತಾರೆ. ಇದನ್ನು ವಿವರಿಸುವ ನ್ಯಾಯವಾದಿ ಅಭಿನವ್ ಚಂದ್ರಚೂಡ ‘‘ಒಬ್ಬ ವ್ಯಕ್ತಿ ತನಗೆ ಸರಿ ಅನಿಸಿದ್ದನ್ನು ಹೇಳುತ್ತಾನೆ (ಅದು ಪ್ರಭುತ್ವಕ್ಕೆ ಅಪಥ್ಯವಾಗಿದ್ದರೂ), ಇಬ್ಬರು ವ್ಯಕ್ತಿಗಳು, ಗುಂಪುಗಳು ತಮ್ಮ ತಮ್ಮ ದೃಷ್ಟಿಕೋನಕ್ಕೆ ಸೂಕ್ತವೆನಿಸಿದ್ದನ್ನು ವಾದಿಸುತ್ತಾರೆ, ಸಮರ್ಥಿಸುತ್ತಾರೆ, ಜಗಳವೂ ಆಡಬಹುದು (ಇದು ಪ್ರಭುತ್ವಕ್ಕೆ ರುಚಿಸದೇ ಇರಬಹುದು). ಆದರೆ ಅವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಬಾರದು’’ ಎಂದು ಹೇಳುತ್ತಾರೆ. ಇದನ್ನು ಮುಂದುವರಿಸಿ ಹೇಳಬೇಕೆಂದರೆ ಸರಕಾರದ ನೀತಿಗಳ, ಶಾಸನಗಳ ವಿರುದ್ಧ ಟೀಕೆ ಮಾಡುವುದರಿಂದ ದೇಶದ ಸಾರ್ವಭೌಮಕ್ಕೆ, ಸಮಗ್ರತೆಗೆ ಧಕ್ಕೆ ಉಂಟಾಗುವುದಿಲ್ಲ. ಈ ಸನ್ನಿವೇಶದಲ್ಲಿ ಪರಿಚ್ಛೇದ 19 (1ಎ) ಅನ್ವಯವಾಗುತ್ತದೆ.

ಆದರೆ ವ್ಯಕ್ತಿಯೊಬ್ಬ, ಗುಂಪೊಂದು ಪರಿಶಿಷ್ಟ ಜಾತಿಯವರ ಮೇಲೆ ಜಾತಿ ಕಾರಣಕ್ಕೆ ನಿಂದಿಸುವುದು, ಅಲ್ಪಸಂಖ್ಯಾತರನ್ನು ಅವರ ಧರ್ಮದ ಕಾರಣಕ್ಕೆ ಹಂಗಿಸುವುದು ಅಭಿವ್ಯಕ್ತಿ ಸ್ವಾಂತಂತ್ರ್ಯ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ರೀತಿಯ ವರ್ತನೆಗಳು ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತವೆ, ಗಲಭೆಗಳಿಗೆ ಕಾರಣವಾಗುತ್ತವೆ. ಈ ಪ್ರಕರಣದಲ್ಲಿ ಝುಬೈರ್ ಯಾವುದೇ ಬಗೆಯಲ್ಲಿಯೂ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ವರದಿಗಳನ್ನು ಪ್ರಕಟಿಸಲಿಲ್ಲ. ನ್ಯಾಯದ ಪರವಾಗಿ ಮಾತನಾಡಿದ್ದರು. ಆದರೆ ಫ್ಯಾಶಿಸ್ಟ್ ಪ್ರಭುತ್ವದ ನಡೆಗಳು ಇದಕ್ಕೆ ತದ್ವಿರುದ್ಧವಾಗಿರುತ್ತದೆ. ಇಲ್ಲಿನ ಮೊದಲ ಜಟಿಲತೆ ಇರುವುದು ಇಲ್ಲಿನ ಕಾನೂನುಗಳು. ಅಪರಾಧೀ ಕಾನೂನುಗಳು. ಅಭಿನವ್ ಚಂದ್ರಚೂಡ ಹೇಳುವಂತೆ ಶಾಸಕಾಂಗವು ಕರಾಳ ಶಾಸನವನ್ನು ತಂದರೆ ಅದನ್ನು ಪ್ರಶ್ನಿಸಿ ಕೋರ್ಟ್‌ನಲ್ಲಿ ಅಪೀಲು ಸಲ್ಲಿಸಬಹುದು, ಆದರೆ ನ್ಯಾಯಾಂಗವೇ ಕಾನೂನುಗಳನ್ನು ರೂಪಿಸಿದಾಗ ಮೇಲ್ಮನವಿ ಸಲ್ಲಿಸಲು ನಮಗೆ ಅವಕಾಶವಿಲ್ಲ. ಇದು ‘ಹೆಳವನ ಹೆಗಲ ಮೇಲೆ ಕುರುಡ ಕೂತಂತೆ’.

ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜೆಯ ಮಾತಿಗೆ, ಬರವಣಿಗೆಗೆ ಸೆನ್ಸಾರ್ ಹೇರುವುದು ಕರಾಳತೆ ಎನಿಸಿಕೊಳ್ಳುತ್ತದೆ ಎಂದು ವಾದಿಸಿದರೆ ಅದು ನಗೆಪಾಟಲಿಗೀಡಾಗುವಂತಹ ಸ್ಥಿತಿಯಿದೆ. ಸಂಪೂರ್ಣ ಸ್ವಾತಂತ್ರ್ಯವೆಂಬುದು ಮರೀಚಿಕೆ ಎನ್ನುವಂತಹ ವಾತಾವರಣ ನಿರ್ಮಿಸಿರುವ ಮೋದಿ ನೇತೃತ್ವದ ಸರಕಾರವು ಇಲ್ಲಿನ ನ್ಯಾಯಾಂಗ ಮತ್ತು ಕಾರ್ಯಾಂಗದ ಲೋಪದೋಷಗಳನ್ನು ಬಳಸಿಕೊಂಡು ‘‘ನಿನಗೆ ಮಾತನಾಡಲು ಅವಕಾಶವಿದೆ, ಆದರೆ ನೀನು ಏನು ಮಾತನಾಡುತ್ತೀಯ ಎಂಬುದನ್ನು ನಿಗಾ ವಹಿಸಲಾಗುತ್ತದೆ’’ ಎಂದು ಮೊದಲು ತಾಕೀತು ಮಾಡುತ್ತದೆ. ಮುಂದುವರಿದು ‘‘ನಮ್ಮಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ನಿಮಗೆ ಮಾತನಾಡಲು ಅವಕಾಶ ಕೊಟ್ಟಾಗ ಮಾತ್ರ’’ ಎಂದು ಫರ್ಮಾನು ಹೊರಡಿಸುತ್ತದೆ.

ಉಪ ಸಂಹಾರ
ಏಕೆಂದರೆ ಈ ಪ್ರತಿಕ್ರಾಂತಿಯ ವಿರುದ್ಧದ ನಮ್ಮ ನಿರೂಪಣೆ ಮತ್ತು ಹೊಸ ಕಥನ ಕಟ್ಟುವಿಕೆಯೇ ಸಂಪೂರ್ಣವಾಗಿ ಪೇಲವವಾಗಿದೆ. ನಾಗರಿಕ ಸಮಾಜ ತನ್ನ ಉತ್ತರದಾಯಿತ್ವದಲ್ಲಿ, ಜನರೊಂದಿಗೆ ಸಮಾಲೋಚನೆ ನಡೆಸುವಂತಹ ನಿರೂಪಣೆ ರೂಪಿಸಲು ವಿಫಲಗೊಂಡಿದೆ. ಆದರೂ ಇಲ್ಲಿ ಸಂವಿಧಾನ, ಬಹುತ್ವ, ಪ್ರಜಾಪ್ರಭುತ್ವ, ಮಾನವೀಯತೆ ಉಳಿದಿದೆ ಎಂದು ಮುಂದಿನ ತಲೆಮಾರಿಗೆ ಭರವಸೆ ಕೊಡಬೇಕಾದಂತಹ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಇದನ್ನು ನಿಭಾಯಿಸಬೇಕಷ್ಟೆ .

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News