ವಿದ್ಯಾರ್ಥಿಗಳಿಗೆ ತಲುಪದು ಪರಿಷ್ಕೃತ ಪಠ್ಯದ ತಿದ್ದುಪಡಿ ಪುಸ್ತಕ

Update: 2022-07-03 07:23 GMT
ಸಾಂದರ್ಭಿಕ ಚಿತ್ರ

ಬೆಂಗಳೂರು: ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧಿಸಿದಂತೆ ರೋಹಿತ್‌ ಚರ್ಕತೀರ್ಥ ನೇತೃತ್ವದ ಸಮಿತಿ ನಡೆಸಿದ್ದ ಹಲವು ಪರಿಷ್ಕರಣೆಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಹಲವಾರು ಕಡೆಯಿಂದ ಈ ಕುರಿತು ವಿರೋಧ ವ್ಯಕ್ತವಾದ ಬಳಿಕ ಸರಕಾರವು ಕೆಲವು ತಿದ್ದುಪಡಿಗಳನ್ನು ನಡೆಸಲು ತೀರ್ಮಾನಿಸಿತ್ತು.

ಇದೀಗ ಅಂತಹಾ ತಿದ್ದುಪಡಿಗಳನ್ನು ಮಾಡಿದ ಪುಸ್ತಕಗಳನ್ನು ಮರುಮುದ್ರಣ ನಡೆಸಿ ಹಂಚುವುದರ ಬದಲು ತಿದ್ದುಪಡಿ ನಡೆಸಲ್ಪಟ್ಟ ʼಒಂದು ಪುಸ್ತಕʼವನ್ನು ಮಾತ್ರ ಶಾಲೆಗೊಂದರಂತೆ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಜಯಂತ್‌ ಆರ್‌. ಅವರು The hindu ಪತ್ರಿಕೆಯಲ್ಲಿ ವಿಶೇಷ ವರದಿ ಮಾಡಿದ್ದಾರೆ.

ಒಟ್ಟು ಎಂಟು ಪರಿಷ್ಕರಣೆಗಳನ್ನು ಹೊಸ ಪುಸ್ತಕದಲ್ಲಿ ಮಾಡುವುದಾಗಿ ತೀರ್ಮಾನಿಸಲಾಗಿದ್ದು, ಆದರೆ ರೋಹಿತ್‌ ಚಕ್ರತೀರ್ಥ ಸಮಿತಿಯ ಪಠ್ಯಪುಸ್ತಕವನ್ನು ಉಳಿಸಲು ತೀರ್ಮಾನಿಸಲಾಗಿದೆ. ಶಾಲೆಗೆ ಒಂದರಂತೆ ತಿದ್ದುಪಡಿ ಮಾಡಲ್ಪಟ್ಟ ಪುಸ್ತಕವನ್ನು ನೀಡಲಾಗುವುದು ಹಾಗೂ ಶಿಕ್ಷಕರು ಅದರಂತೆ ಮಕ್ಕಳಿಗೆ ಪಾಠ ಮಾಡಬೇಕಾಗಿದೆ ಎಂದು ವರದಿ ಉಲ್ಲೇಖಿಸಿದೆ.

1ರಿಂದ 10ನೇ ತರಗತಿಯವರೆಗಿನ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕವನ್ನು ಮರು ಮುದ್ರಿಸಬೇಕೆಂಬ ವ್ಯಾಪಕ ಒತ್ತಾಯ ಕೇಳಿ ಬಂದಿದ್ದವು. ಸದ್ಯ ಕರ್ನಾಟಕ ಪಠ್ಯಪುಸ್ತಕ ಸಮಿತಿಯು ಈಗಾಗಲೇ ಮುದ್ರಣ ಗೊಂಡಿರುವ ಪುಸ್ತಕಗಳನ್ನು ಸರಕಾರಿ, ಸರಕಾರೇತರ, ಅನುದಾನಿತ ಶಾಲೆಗಳಲ್ಲಿ ಹಂಚುವುದಾಗಿ ತೀರ್ಮಾನಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News