ಮಂಗಳೂರು; ಗಬ್ಬು ನಾರುತ್ತಿರುವ ಸ್ಮಾರ್ಟ್ ಸಿಟಿ, ಮನೆ, ಫ್ಲ್ಯಾಟ್‌ಗಳೆದುರು ತ್ಯಾಜ್ಯ ರಾಶಿ!

Update: 2022-07-03 08:39 GMT

ಮಂಗಳೂರು : ಸ್ಥಳೀಯ ಸಂಸ್ಥೆಗಳ ತ್ಯಾಜ್ಯ ಸಂಗ್ರಹದ ವಾಹನ ಚಾಲಕರು ಹಾಗೂ ಕಾರ್ಮಿಕರು (ಪೌರ ಕಾರ್ಮಿಕರು ಸೇರಿದಂತೆ) ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸಿರುವಂತೆಯೇ ಸ್ಮಾರ್ಟ್ ಸಿಟಿ ಮಂಗಳೂರು ಗಬ್ಬು ನಾರುತ್ತಿದೆ.

ನಗರದ ಮನೆ, ಫ್ಲ್ಯಾಟ್‌ಗಳೆದುರು ಹಸಿ ಹಾಗೂ ಒಣ  ತ್ಯಾಜ್ಯ ರಾಶಿ ಬೀಳುತ್ತಿದ್ದು, ಮಳೆ ನೀರು ಹಸಿ ಕಸದ ಜತೆ ಸೇರಿ ಗಬ್ಬು ನಾರುತ್ತಿದೆ. ಪೌರ ಕಾರ್ಮಿಕರನ್ನು ಒಳಗೊಂಡು ತಮ್ಮ ನ್ಯಾಯಯುತ ಬೇಡಿಕೆಗಳಿಗೆ ಕಾರ್ಮಿಕರು ಮುಷ್ಕರ ನಡೆಸುವ ಬಗ್ಗೆ ಮುಂಚಿತವಾಗಿ ಮಾಹಿತಿ ಇದ್ದರೂ, ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಮಾತ್ರ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಜನತೆಯನ್ನು ಕಂಗೆಡಿಸಿದೆ.

ಮಳೆಯೂ ಬರುತ್ತಿರುವುದರಿಂದ ಕಸದ ರಾಶಿ ಮನೆಗಳು, ಫ್ಲ್ಯಾಟ್‌ಗಳ ಎದುರಿನ ಕಸದ ತೊಟ್ಟಿಯಲ್ಲಿ ತುಂಬಿ ತುಳುಕುತ್ತಿದ್ದು, ನೀರು ಸೇರಿ ನೊಣಗಳ ತಾಣವಾಗುತ್ತಿದೆ. ಕಳೆದ ಮೂರು ದಿನಗಳಿಂದ ಹಸಿಕಸದ ಜತೆಗೆ ಒಣ ಕಸವೂ (ಬಹುತೇಕವಾಗಿ ನಗರದಲ್ಲಿ ಶುಕ್ರವಾರ ಅಥವಾ ಶನಿವಾರ ಹಸಿ ಕಸವನ್ನು ಕೊಂಡೊಯ್ಯಲಾಗುತ್ತದೆ) ರಾಶಿಯಾಗಿ ಮನೆ, ಫ್ಲ್ಯಾಟ್‌ಗಳೆದುರು, ಮತ್ತೆ ಕೆಲವೆಡೆ ರಸ್ತೆಗಳಲ್ಲಿಯೇ ಕಸದ ರಾಶಿ ಕಂಡು ಬರುತ್ತಿದೆ.

ಸ್ಮಾರ್ಟ್ ಸಿಟಿ ಮಂಗಳೂರಿನಲ್ಲಿ ಪ್ರಸಕ್ತ ತ್ಯಾಜ್ಯ ವಿಲೇ ಮಾಡುವ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಕಾರ್ಯಾಚರಣೆ ಬಗ್ಗೆ ಈಗಾಗಲೇ ಹಲವಾರು ದೂರುಗಳಿವೆ. ಕೆಲವು ವಾರ್ಡ್‌ಗಳಲ್ಲಿ ಪ್ರತಿದಿನ ಕಸ ವಿಲೇ ಆಗುತ್ತಿಲ್ಲ ಎಂಬ ದೂರುಗಳ ನಡುವೆಯೇ ಇದೀಗ ಕಳೆದ ಮೂರು ದಿನಗಳಿಂದ ಕಾರ್ಮಿಕರ ಕಾರ್ಯಾಚರಣೆ ಸ್ವಚ್ಛ ಸ್ಮಾರ್ಟ್ ಮಂಗಳೂರಿನ ಪರಿಸ್ಥಿತಿಯನ್ನು ಹದಗೆಡಿಸಿದೆ.

ಒಳಚರಂಡಿ (ಯು.ಜಿ.ಡಿ) ನೇರ ಪಾವತಿ ಪೌರ ಕಾರ್ಮಿಕರು, ಹೆಚ್ಚುವರಿ ಪೌರ ಕಾರ್ಮಿಕರು ಮತ್ತು ಮನೆ ಕಸ ಸಂಗ್ರಹ ಹಾಗೂ ಕಸ ಸಾಗಾಣಿಕೆ ಮಾಡುವ ವಾಹನ ಚಾಲಕರು, ಲೋಡರ್, ಸಹಾಯಕರು ಹಾಗೂ ಪೌರಕಾರ್ಮಿಕರ ಮೇಲ್ವಿಚಾರಕರು ಮತ್ತು ಎಲ್ಲ ಸ್ವಚ್ಛತಾ ಕಾರ್ಮಿಕರನ್ನು ಏಕಕಾಲಕ್ಕೆ ಖಾಯಂಗೊಳಿಸಲು ಇದರ ಜತೆಯಲ್ಲಿ ವಿವಿಧ ಸ್ಥಳೀಯ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟ  ಕಾಲ ರಾಜ್ಯದಾದ್ಯಂತ ಆಯಾಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಕಾರ್ಯಕ್ರಮ ನಡೆಸುವುದಾಗಿ, ದ.ಕ. ಜಿಲ್ಲೆಯಲ್ಲೂ ಪೌರ ಕಾರ್ಮಿಕರು ಸೇರಿದಂತೆ ಸ್ವಚ್ಛತಾ ಕಾರ್ಮಿಕರು ಅನಿರ್ದಿಷ್ಠಾವಧಿ ಮುಷ್ಕರ ನಡೆಸುವುದಾಗಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದರು.

ಹಾಗಿದ್ದರೂ ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಮಾತ್ರ ತ್ಯಾಜ್ಯ ವಿಲೇ ಮಾಡಲು ಯಾವುದೇ ರೀತಿಯ ಪರ್ಯಾಯ ವ್ಯವಸ್ಥೆಯನ್ನು ಜನತೆಗೆ ಒದಗಿಸಿಲ್ಲ. ಪ್ರತಿನಿತ್ಯ ಮನೆಗಳಿಂದ ತ್ಯಾಜ್ಯ ಸಂಗ್ರಹಕ್ಕಾಗಿ ತೆರಿಗೆಯನ್ನೂ ಸಂಗ್ರಹಿಸುವ ಆಡಳಿತದಿಂದ ಈ ರೀತಿಯ ತುರ್ತು ಸಂದರ್ಭಗಳಲ್ಲಿ ಪರ್ಯಾಯ ವ್ಯವಸ್ಥೆ ಆಗದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News