ಮಂಗಳೂರು : ಜಂಪ್ ಮಾಡಿ ಝೀಬ್ರಾ ಕ್ರಾಸ್‌ನಲ್ಲಿ ನಡೆಯಿರಿ!

Update: 2022-07-03 12:56 GMT

ಮಂಗಳೂರು: ನಗರದ ರಸ್ತೆಗಳಲ್ಲಿ, ಅದರಲ್ಲೂ ಪ್ರಮುಖ ಜಂಕ್ಷನ್‌ಗಳಲ್ಲಿ ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಿ ನಡೆದು ಹೋಗಲು ಅನುಕೂಲವಾಗುವಂತೆ ಝೀಬ್ರಾ ಕ್ರಾಸಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಟ್ರಾಫಿಕ್ ನಿಯಮದ ಪ್ರಕಾರ ಈ ಝೀಬ್ರಾ ಕ್ರಾಸಿಂಗ್ ಇದ್ದಲ್ಲಿ ವಾಹನಗಳು ನಿಂತು ಪಾದಚಾರಿಗಳು ರಸ್ತೆ ದಾಟಲು ಬಿಡಬೇಕು.  ಆದರೆ  ಸ್ಮಾರ್ಟ್ ಸಿಟಿ ಮಂಗಳೂರಿನ ಮುಖ್ಯ ಜಂಕ್ಷನ್  ಹಂಪನಕಟ್ಟ ರಸ್ತೆಯಲ್ಲಿ ಪಾದಚಾರಿಗಳ ಅನುಕೂಲಕ್ಕಾಗಿ ಝೀಬ್ರಾ ಕ್ರಾಸಿಂಗ್ ವ್ಯವಸ್ಥೆಯೇನೋ ಮಾಡಲಾಗಿದೆ. ಆದರೆ ಪಾದಚಾರಿಗಳು ರಸ್ತೆ ದಾಟಿ ಫುಟ್ ಪಾತ್ ಗೆ ತಲುಪಲು ಹಾರಿ ಹೋಗಬೇಕಾದ ವ್ಯವಸ್ಥೆಯನ್ನು ಸ್ಮಾರ್ಟ್ ಸಿಟಿ ಕಾಮಗಾರಿಯ ಇಂಜಿನಿಯರ್‌ಗಳು ಮಾಡಿಟ್ಟಿದ್ದಾರೆ.

ನಗರದ ಹಂಪನಕಟ್ಟೆಯ ಸಿಗ್ನಲ್ ಬಳಿ ವೆನ್ಲಾಕ್‌ಯಿಂದ ನೆಹರೂ ಮೈದಾನಕ್ಕೆ ಹೋಗುವ ಪ್ರಮುಖ ರಸ್ತೆಯಲ್ಲಿ ಝೀಬ್ರಾ ಕ್ರಾಸಿಂಗ್ ವ್ಯವಸ್ಥೆ ಮಾಡಲಾಗಿದೆ. ಆದರೆ ರಸ್ತೆಯ ಇನ್ನೊಂದು ಬದಿಯಲ್ಲಿ ಫುಟ್‌ಪಾತ್‌ಗೆ ಸ್ಟೀಲ್‌ ರಾಡ್‌ಗಳ ಸುರಕ್ಷಾ ವ್ಯವಸ್ಥೆಯನ್ನು ಉದ್ದಕ್ಕೂ ಅಳವಡಿಸಲಾಗಿದೆ. ಈ ಝೀಬ್ರಾ ಕ್ರಾಸಿಂಗ್‌ನಲ್ಲಿ ರಸ್ತೆ ದಾಟಿ ಪಾದಚಾರಿಗಳು ಫುಟ್‌ಪಾತ್‌ಗೆ ಹೋಗಬೇಕಾದರೆ ಈ ಬ್ಯಾರಿಕೇಡ್‌ಗಳ ಮೇಲಿಂದ ಜಂಪ್ ಮಾಡಬೇಕಾದ ಪರಿಸ್ಥಿತಿ. ರಸ್ತೆಯ ಉದ್ದಕ್ಕೂ ಅಳವಡಿಸಲಾಗಿರುವ ಬ್ಯಾರಿಕೇಡ್ ನಡುವೆ ಪಾದಚಾರಿಗಳು ಪ್ರವೇಶಿಸಲು ಅಗತ್ಯವಾದ ಪ್ರವೇಶ ವ್ಯವಸ್ಥೆಯೇ ಇಲ್ಲ.

ಈ ಬಗ್ಗೆ ಈಗಾಗಲೇ ಸಾಮಾಜಿಕ ಕಾರ್ಯಕರ್ತರು, ಜನಸಾಮಾನ್ಯರು ಮಂಗಳೂರು ಸ್ಮಾಟ್ ಸಿಟಿ ಕಾಮಗಾರಿಯ ಈ  ಅವ್ಯವಸ್ಥೆಯ ಬಗ್ಗೆ ಟ್ರೋಲ್ ಆರಂಭಿಸಿದ್ದಾರೆ.

ಈಗಲಾದರೂ ಎಚ್ಚೆತ್ತು ಮನಪಾ ಹಾಗು ಸ್ಮಾರ್ಟ್ ಸಿಟಿ ಅಧಿಕಾರಿಗಳು ಇದನ್ನು ಸರಿಪಡಿಸುತ್ತಾರಾ ಎಂದು ಕಾದು ನೋಡಬೇಕು.

ಮಂಗಳೂರು ಸ್ಮಾಟ್ ಸಿಟಿ ಇಂಜಿನಿಯರ್‌ಗಳಿಗೆ ನೆಹರೂ ಮೈದಾನದಲ್ಲಿ ಬಹಿರಂಗ ಸನ್ಮಾನ ಮಾಡುವ ಯೋಚನೆಯಿದೆ. ಕಾರ್ಯಕ್ರಮ ಮಾಡುವ ರೂಪುರೇಷೆ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಹೆಗಡೆಯವರ ಸಹಿತ ಹಲವರು ಫೇಸ್‌ಬುಕ್ ಖಾತೆಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯ ಅವ್ಯವಸ್ಥೆಯ ಬಗ್ಗೆ ಧ್ವನಿ ಎತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News