ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂದು ಜನ ಬಯಸಿದ್ದಾರೆ: ಡಿ.ಕೆ.ಶಿವಕುಮಾರ್

Update: 2022-07-03 11:23 GMT

ಬೆಂಗಳೂರು, ಜು. 3: ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ನಾಯಕರು ಸೇರಿದಂತೆ ಎಲ್ಲರೂ ಮಾತನಾಡುತ್ತಿದ್ದು, ಉತ್ತಮ ಆಡಳಿತಕ್ಕೆ ಕಾಂಗ್ರೆಸ್ ಬರಬೇಕೆಂದು ಬಯಸುತ್ತಿದ್ದಾರೆ. ಇಂತಹ ಅವಕಾಶವನ್ನು ನಾವು ಬಳಸಿಕೊಳ್ಳಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ರವಿವಾರ ಇಲ್ಲಿನ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪಕ್ಷದ ವತಿಯಿಂದ ನಾವು ಚುನಾವಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಮೀಕ್ಷೆ ನಡೆಸಿದ್ದು, ವರದಿ ಪಕ್ಷದ ಪರವಾಗಿದೆ. ಸಮೀಕ್ಷೆ ಪಕ್ಕಕ್ಕಿಟ್ಟರೂ ಇತ್ತೀಚೆಗೆ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿಯವರು ಎಷ್ಟು ಗೆದ್ದಿದ್ದಾರೋ ನಾವು ಅಷ್ಟೇ ಗೆದ್ದಿದ್ದೇವೆ. ಪರಿಷತ್ ಚುನಾವಣೆಯಲ್ಲೂ ಪಕ್ಷ ಸಾಧನೆ ಮಾಡಿದೆ. ನಮ್ಮ ಸರಕಾರ ಇದ್ದಾಗ ಮಂಡ್ಯ, ತುಮಕೂರಿನಲ್ಲಿ ಪಕ್ಷ ಸೋತಿತ್ತು. ಈ ಬಾರಿ ಗೆದ್ದಿದ್ದೇವೆ. ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ನಾವು ಗೆದ್ದಿರಲಿಲ್ಲ. ಈಗ ಗೆದ್ದಿದ್ದೇವೆ. ಚುನಾಯಿತ ಪ್ರತಿನಿಧಿಗಳು ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದರು. ಇದೀಗ ವಿದ್ಯಾವಂತರು, ಶಿಕ್ಷಕರು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಇದು ಜನರ ಅಭಿಪ್ರಾಯ ಏನು ಎಂಬುದನ್ನು ತಿಳಿಸುತ್ತಿದೆ' ಎಂದು ವಿವರಣೆ ನೀಡಿದರು.

‘ನಾನು ಸಮೀಕ್ಷೆ ಬಗ್ಗೆ ಮಾತನಾಡುತ್ತಿಲ್ಲ. ಹತ್ತಾರು ಚುನಾವಣೆ ಮಾಡಿದ್ದೇನೆ. 7 ಚುನಾವಣೆಯಲ್ಲಿ ಸತತವಾಗಿ ಗೆದ್ದಿದ್ದೇನೆ. ಸಮೀಕ್ಷೆ ವರದಿಗಳೆಲ್ಲವೂ ಸತ್ಯ ಎಂದು ಹೇಳುವುದಿಲ್ಲ. ಆದರೆ, ಇಂದು ಮಾಧ್ಯಮಗಳು ಸಮೀಕ್ಷೆ ಮಾಡುತ್ತವೆ. ನಿಮ್ಮ ಸಮೀಕ್ಷೆಗಳೂ ತಪ್ಪಾಗಬಹುದು, ಕೆಲವೊಮ್ಮೆ ನಮ್ಮದೂ ತಪ್ಪಾಗಬಹುದು. ಪರಿಷತ್ ಚುನಾವಣೆ ಫಲಿತಾಂಶದ ಮೇಲೆ ಜನರ ಅಭಿಪ್ರಾಯದ ಬಗ್ಗೆ ನೀವೇ ವಿಶ್ಲೇಷಣೆ ಮಾಡಿ' ಎಂದು ಅವರು ತಿಳಿಸಿದರು.

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ: ಎಐಸಿಸಿ ಮುಖಂಡ ರಾಹುಲ್ ಗಾಂಧಿ ಹಾಗೂ ಪಕ್ಷದ ವರಿಷ್ಟರು ಮುಂಬರುವ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಬೇಕು ಎಂದು ತೀರ್ಮಾನಿಸಿದ್ದಾರೆ ಎಂದು ಸ್ಪಷ್ಟಪಡಿಸಿದ ಅವರು, ‘ನಾನು ಮಂತ್ರಿ ಸ್ಥಾನ ಸಿಗದಿದ್ದಾಗಲೆ ಉಸಿರು ಎತ್ತಲಿಲ್ಲ. ಅಸಮಾಧಾನ ಹೊರಹಾಕಲಿಲ್ಲ. ದೇವೇಗೌಡರ ವಿರುದ್ಧ ಹೆಣ್ಣುಮಗಳನ್ನು ನಿಲ್ಲಿಸಿ ಸೋಲಿಸಿದೆ ಎಂದು ಧರ್ಮಸಿಂಗ್ ಸರಕಾರದಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲ. ಪಕ್ಷಕ್ಕೆ ಒಳ್ಳೆಯದಾಗಲಿ ಎಂದು ಸುಮ್ಮನಿದ್ದೆ. ನನಗೆ ವ್ಯಕ್ತಿ ಮುಖ್ಯವಲ್ಲ. ಪಕ್ಷ ಮುಖ್ಯ. ಪಕ್ಷ ಇದ್ದರೆ ಮಾತ್ರ ನಾವು. ಇದನ್ನೇ ನಾನು ಮೊದಲಿಂದಲೂ ಪ್ರತಿಪಾದಿಸುತ್ತಿದ್ದೇನೆ. ಎಲ್ಲ ಕಾರ್ಯಕರ್ತರಿಗೂ ಇದನ್ನೇ ಹೇಳುತ್ತಿದ್ದೇನೆ' ಎಂದು ನುಡಿದರು.

‘ಸಿದ್ದರಾಮೋತ್ಸವ' ತಪ್ಪಿಲ್ಲ: ‘ನಮ್ಮ ಪಕ್ಷದ ನಾಯಕರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ನಾನು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಬೇಕಿತ್ತು, ನಾನು ಕೇದಾರನಾಥಕ್ಕೆ ಹೋಗಿ ಕುಟುಂಬ ಸಮೇತ ಆಚರಿಸಿಕೊಂಡೆ. ಸಿದ್ದರಾಮಯ್ಯರ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು ಬಯಸುತ್ತಿದ್ದಾರೆ. 75ನೆ ಸ್ವಾತಂತ್ರ್ಯ ದಿನ ಆಚರಿಸಲು ಪಕ್ಷ ತೀರ್ಮಾನಿಸಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ' ಎಂದು ಅವರು ತಿಳಿಸಿದರು.

‘ನಮ್ಮ ಪಕ್ಷಕ್ಕೆ ಏನೆಲ್ಲಾ ಅನುಕೂಲವಾಗುತ್ತದೆಯೋ ಅದನ್ನೆಲ್ಲ ಮಾಡೋಣ. ಇನ್ನು ಖರ್ಗೆ ಶಾಸಕರಾಗಿ 50 ವರ್ಷ ಆಗಿದೆ, ಆ ಕಾರ್ಯಕ್ರಮ ಮಾಡಬೇಕೆಂದು ಅವರ ಅಭಿಮಾನಿಗಳು ಕೇಳುತ್ತಾರೆ. ಪರಮೇಶ್ವರ್ ಅಭಿಮಾನಿಗಳು ಬಂದು ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾಡಬೇಕೆಂದು ಕೇಳುತ್ತಾರೆ. ನಾನು ನನ್ನ ಹುಟ್ಟುಹಬ್ಬಕ್ಕೆ ಯಾವುದೇ ಆಚರಣೆ, ಪ್ರಚಾರ ಬೇಡ ಎಂದಿದ್ದೆ. ಒಬ್ಬೊಬ್ಬರದ್ದು ಒಂದೊಂದು ಆಸೆ ಇರುತ್ತದೆ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವೇ? ಏನೇ ಸಂಘಟನೆ ಆದರೂ ಅದರಿಂದ ಪಕ್ಷಕ್ಕೆ ಒಳ್ಳೆಯದಾದರೆ ಸಾಕು' ಎಂದು ಅವರು ತಿಳಿಸಿದರು.

‘ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅವರು ಕ್ಷಮೆ ಕೇಳಬೇಕೆಂದು ನಾನು ಹಾಗೂ ಪಕ್ಷದ ವರಿಷ್ಟರು ಸೂಚಿಸಿದರು. ಅವರು ಗೌರವಯುತವಾಗಿ ಕ್ಷಮೆ ಕೇಳಿದ್ದಾರೆ. ಈ ವಿಚಾರ ಇಲ್ಲಿಗೆ ಬಿಡೋಣ. ನಮ್ಮನ್ನು ಒಂದಲ್ಲಾ ಒಂದು ದಿನ ಹೊತ್ತುಕೊಂಡು ಹೋಗಬೇಕು. ಇದೇ ಪ್ರಕೃತಿ ನಿಯಮ'

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News