ಬೆಂಗಳೂರು | ಸರಕಾರಿ ಉದ್ಯೋಗ ಕೊಡಿಸುವುದಾಗಿ ವಂಚನೆ: ಆರೋಪಿಗಳಿಬ್ಬರ ಬಂಧನ

Update: 2022-07-03 12:03 GMT

ಬೆಂಗಳೂರು, ಜು. 3: ಸರಕಾರಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಹಣ ವಸೂಲಿ ಮಾಡಿಕೊಂಡು ವಂಚನೆ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಇಲ್ಲಿನ ಚಿಕ್ಕಜಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕುಣಿಗಲ್ ತಾಲೂಕಿನ ಪ್ರಕಾಶ್(35) ಮತ್ತು ಹೊಸಕೋಟೆಯ ನಾರಾಯಣಪ್ಪ (45) ಬಂಧಿತರಾಗಿದ್ದು, ಇದೇ ಪ್ರಕರಣದಲ್ಲಿ  ಮತ್ತೊಬ್ಬ ಆರೋಪಿ ಪಾಟೀಲ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳು ಒಂದೇ ಗ್ರಾಮದ ಪ್ರಿಯಾಂಕಾ, ಪಶುಪತಿ, ಅಭಿಷೇಕ್, ಧನುಷ್ ಕುಮಾರ್, ಸಂದೀಪ್, ಹೇಮಂತ್, ಮನೋಜ್ ಕುಮಾರ್, ಗುತ್ತಿಗೆದಾರ ಮುನಿರಾಜು ಎಂಬವರಿಗೆ ಸರಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ವಂಚಿಸಿದ್ದಾರೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ಆರೋಪಿಗಳ ವಿರುದ್ಧ ಮುನಿರಾಜು ಎಂಬುವರು ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ತನಿಖೆ ನಡೆಸಿದಾಗ ಆರೋಪಿಗಳು, ಪದವೀಧರ ಯುವಕರನ್ನೆ ಟಾರ್ಗೆಟ್ ಮಾಡಿ ವಂಚಿಸುತ್ತಿರುವುದು ತನಿಖೆಯಿಂದ ಗೊತ್ತಾಗಿದೆ.

ಆರೋಪಿಗಳಾದ ನಾರಾಯಣಪ್ಪ ಮತ್ತು ಪ್ರಕಾಶ್ ಕೂಡ ಗುತ್ತಿಗೆದಾರರಾಗಿದ್ದಾರೆ. ಪರಾರಿಯಾಗಿರುವ ಪಾಟೀಲ್, ವಿಧಾನಸೌಧದಲ್ಲಿ ಉದ್ಯೋಗದಲ್ಲಿದ್ದಾನೆ ಎನ್ನುವ ಮಾಹಿತಿ ಗೊತ್ತಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News