ಸಂವಿಧಾನಕ್ಕೆ ಉತ್ತರದಾಯಿ ಆಗಿರುವ ರಾಷ್ಟ್ರಪತಿ ಅಗತ್ಯ, ರಬ್ಬರ್ ಸ್ಟ್ಯಾಂಪ್ ಅಲ್ಲ: ಯಶವಂತ ಸಿನ್ಹಾ

Update: 2022-07-03 13:31 GMT
(ಬೆಂಗಳೂರಿನಲ್ಲಿ ಪತ್ರಕರ್ತರ ಜೊತೆ ಸಂವಾದ ನಡೆಸುತ್ತಿರುವ ಯಶವಂತ ಸಿನ್ಹಾ)

ಬೆಂಗಳೂರು, ಜು. 3: ‘ನಾನು ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಸಂವಿಧಾನಕ್ಕೆ ಮಾತ್ರ ಉತ್ತರದಾಯಿ ಆಗಿರುತ್ತೇನೆ. ಅದೇ ರೀತಿಯಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಯೂ ಇರಬೇಕೆಂದು ಬಯಸುತ್ತೇನೆ. ದೇಶಕ್ಕೆ ಮಾತನಾಡುವ ರಾಷ್ಟ್ರಪತಿ ಬೇಕೇ ಹೊರತು, ರಬ್ಬರ್ ಸ್ಟಾಂಪ್ ರಾಷ್ಟ್ರಪತಿ ಅಲ್ಲ' ಎಂದು ಪ್ರತಿಪಕ್ಷಗಳ ಬೆಂಬಲಿತ ರಾಷ್ಟ್ರಪತಿ ಅಭ್ಯರ್ಥಿ ಯಶವಂತ ಸಿನ್ಹಾ ತಿಳಿಸಿದ್ದಾರೆ.

ರವಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಇದೇ ತಿಂಗಳ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತಮ್ಮ ಪರ ಮತಯಾಚನೆ ಮಾಡಿದ ಬಳಿಕ ಮಾತನಾಡಿದ ಅವರು, ‘ದೇಶದಲ್ಲಿ ವಿಪಕ್ಷಗಳ ನಾಯಕರು ಮಾತನಾಡುವ ಸ್ಥಿತಿ ಇಲ್ಲ. ಯಾರಾದರೂ ಏನಾದರೂ ಮಾತಾಡಿದರೆ ತನಿಖಾ ಸಂಸ್ಥೆಗಳಿಂದ ನೋಟಿಸ್ ನೀಡಲಾಗುತ್ತಿದೆ. ಪ್ರಸಕ್ತ ಸಂದರ್ಭದಲ್ಲಿ  ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಿದೆ' ಎಂದು ಟೀಕಿಸಿದರು.

‘ಜನರಿಂದ ಆಯ್ಕೆಯಾದ ಸರಕಾರಗಳನ್ನು ಉರುಳಿಸುವಂತಹ ಪ್ರಜಾಪ್ರಭುತ್ವ ವಿರೋಧಿ ಕೆಲಸ ನಡೆಯುತ್ತಿದೆ. ಅಡ್ಡ ಮಾರ್ಗಗಳಿಂದ ಕೇಂದ್ರದ ಬಿಜೆಪಿ ಸರಕಾರ ಬಿಜೆಪಿಯೇತರ ಸರಕಾರಗಳನ್ನು ಉರುಳಿಸುವ ಕೆಲಸ ಮಾಡುತ್ತಿರುವುದು ಯಾವುದೇ ಸಂದರ್ಭದಲ್ಲಿಯೂ ಯಾರೂ ಒಪ್ಪಲು ಸಾಧ್ಯವಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇಂತಹ ಕಾರ್ಯ ಅನಾರೋಗ್ಯಕರ' ಎಂದು ಯಶವಂತ ಸಿನ್ಹಾ ಹೇಳಿದರು.

‘ನೂಪುರ್ ಶರ್ಮಾ ಬಗ್ಗೆ ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ನ್ಯಾಯಾಂಗವು ಸಂವಿಧಾನಕ್ಕೆ ಉತ್ತರದಾಯಿ ಆಗಿರಬೇಕೆಂದು ಕೋರ್ಟ್ ಹೇಳಿದೆ. ಕೋರ್ಟ್‍ನ ಅಭಿಪ್ರಾಯವನ್ನು ನಾನು ಸ್ವಾಗತಿಸುತ್ತೇವೆ. ಆದರೆ, ಮಾಧ್ಯಮಗಳಲ್ಲಿ ಸುಪ್ರೀಂಕೋರ್ಟ್‍ನ ಅಭಿಪ್ರಾಯ ಬಗ್ಗೆ ಟೀಕೆ ಮಾಡಲಾಗುತ್ತಿದೆ. ಕೆಟ್ಟದಾಗಿ ಟೀಕೆ ಮಾಡಲಾಗುತ್ತಿದೆ. ನ್ಯಾಯಾಂಗದ ಮೇಲಿನ ಇಂತಹ ಟೀಕೆ ಪ್ರಜಾಪ್ರಭುತ್ವಕ್ಕೆ ಕಳಂಕ’ ಎಂದು ಯಶವಂತ ಸಿನ್ಹಾ ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದರು.

ಸಿನ್ಹಾ ಅಗತ್ಯವಿದೆ: ‘ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿರುವ ಸಂದರ್ಭದಲ್ಲಿ ರಾಷ್ಟ್ರಪತಿ ಚುನಾವಣೆ ನಡೆಯುತ್ತಿದೆ. ವಿಪಕ್ಷಗಳು ಯಶವಂತ ಸಿನ್ಹಾ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಿದ್ದು, ಇಂದಿನ ರಾಜಕೀಯ ಸ್ಥಿತಿ ಯಶವಂತ ಸಿನ್ಹಾ ಅವರು ರಾಷ್ಟ್ರಪತಿ ಆಗುವ ಅಗತ್ಯತೆ ಇದೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಪಾದಿಸಿದರು.

‘ಅತ್ಯಂತ ಎತ್ತರದ ವ್ಯಕ್ತಿತ್ವದ, ಹಿರಿಯ ಮುತ್ಸದ್ದಿಯೂ ಆಗಿರುವ ಯಶವಂತ್ ಸಿನ್ಹಾ ಅವರು ಕೇಂದ್ರದಲ್ಲಿ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ. ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಮತ ಹಾಕುವಂತೆ ಪಕ್ಷದ ಎಲ್ಲ ಶಾಸಕರಲ್ಲಿ ಮಾನವಿ ಮಾಡುತ್ತೇನೆ. ಸಿನ್ಹಾ ಅವರಿಗೆ ಮತ ಹಾಕಲು ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದೇವೆ' ಎಂದು ಸಿದ್ದರಾಮಯ್ಯ ನುಡಿದರು.

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಹಿರಿಯ ಮುಖಂಡರಾದ ಆರ್.ವಿ.ದೇಶಪಾಂಡೆ, ಸಲೀಂ ಅಹಮ್ಮದ್, ಈಶ್ವರ್ ಖಂಡ್ರೆ, ಎಂ.ಕೃಷ್ಣಪ್ಪ, ಯು.ಟಿ. ಖಾದರ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News