ಬೆಂಗಳೂರು; ನಾಲ್ಕನೇ ದಿನಕ್ಕೆ ಕಾಲಿಟ್ಟ ಪೌರ ಕಾರ್ಮಿಕರ ಪ್ರತಿಭಟನೆ

Update: 2022-07-03 15:28 GMT

ಬೆಂಗಳೂರು, ಜು. 3: ಮುಖ್ಯಮಂತ್ರಿಗಳ ಸಭೆಯಲ್ಲಿ ಪೌರ ಕಾರ್ಮಿಕರ ಬೇಡಿಕೆಗಳನ್ನು ಪ್ರಸ್ತಾಪಿಸಿದರೂ ಅನುಷ್ಟಾನ ಮಾಡುವ ಲಕ್ಷಣಗಳು ಕಾಣುತ್ತಿಲ್ಲ. ಹಾಗಾಗಿ ಪ್ರತಿಭಟನೆಯನ್ನು ಮುಂದುವರಿಸಿದ್ದು, ನಾಳೆ(ಜು.4) ನಗರದಲ್ಲಿ ಕಸ ಎತ್ತುವುದಿಲ್ಲ ಎಂದು ಪೌರ ಕಾರ್ಮಿಕರು ಎಚ್ಚರಿಕೆ ನೀಡಿದ್ದಾರೆ. 

ರವಿವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ. ಮೂರು ತಿಂಗಳ ಒಳಗೆ ಖಾಯಂ ಮಾಡಲಾಗುತ್ತದೆ ಎಂದು ಸಭೆಯಲ್ಲಿ ಚರ್ಚಿಸಿದರೂ, ನಡಾವಳಿಗಳಲ್ಲಿ ಇದರ ಪ್ರಸ್ತಾವನೆ ಇಲ್ಲ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಡ್ರೈವರ್, ಲೋಡರ್ ಅವರನ್ನು ಖಾಯಂ ಮಾಡುವುದಾಗಿ ಹಾಗೂ ಅಲ್ಲಿ ತನಕ ಅವರನ್ನು ನೇರ ಪಾವತಿಗೆ ತರುತ್ತಾರೆ ಎಂದು ಹೇಳಲಾಗಿತ್ತು. ಹಾಗೆಯೇ ಪೌರ ಕಾರ್ಮಿಕರ ಕಲ್ಯಾಣಕ್ಕೆ ಸಮಗ್ರ ನೀತಿ ತರುವುದಾಗಿ ಹೇಳಲಾಗಿತ್ತು. ಆದರೆ ಇದಾವುದರ ಬಗ್ಗೆಯೂ ನಡಾವಳಿಗಳಲ್ಲಿ ಪ್ರಸ್ತಾಪ ಇಲ್ಲ ಎಂದು ತಿಳಿಸಿದ್ದಾರೆ.

ನಡಾವಳಿಗಳಲ್ಲಿ ಖಾಯಂ ಮಾಡುವ ದಿನಾಂಕವನ್ನು ಉಲ್ಲೇಖಿಸಬೇಕು. ಡ್ರೈವರ್, ಲೋಡರ್‍ಗಳನ್ನು ಖಾಯಂ ಮಾಡುವುದರ ಬಗ್ಗೆ ಉಲ್ಲೇಖಿಸಬೇಕು. ಪೌರ ಕಾರ್ಮಿಕರ ಕಲ್ಯಾಣಕ್ಕೆ ಸಮಗ್ರ ನೀತಿಯನ್ನು ಜಾರಿಗೊಳಿಸುವ ಬಗ್ಗೆ ನಡಾವಳಿಯಲ್ಲಿ ಪ್ರಸ್ತಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.

‘ಮೂರು ತಿಂಗಳ ಒಳಗೆ ಎಲ್ಲ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಡ್ರೈವರ್, ಲೋಡರ್‍ಗಳನ್ನು ಕಾಯಂಗೊಳಿಸಬೇಕು. ಪೌರಕಾರ್ಮಿಕರ ಕಲ್ಯಾಣಕ್ಕೆ ಸಮಗ್ರ ನೀತಿ ತರಬೇಕು. ಈ ಎಲ್ಲ ಬೇಡಿಕೆಗಳನ್ನು ಈಡೇರುವವರೆಗೂ ನಗರದಲ್ಲಿ ಕಸವನ್ನು ಎತ್ತದೆ ಪ್ರತಿಭಟನೆ ಮುಂದುವರಿಸಲಾಗುವುದು'

-ಮೈತ್ರೇಯಿ ಎಐಸಿಸಿಟಿಯು ಮುಖ್ಯಸ್ಥೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News