ನೂಪುರ್ ಶರ್ಮಾ ಅರ್ಜಿಯ ವಿಚಾರಣೆಯನ್ನು ನಡೆಸಿದ್ದ ಸುಪ್ರೀಂ ನ್ಯಾಯಾಧೀಶರಿಂದ ‘ವೈಯಕ್ತಿಕ ದಾಳಿ’ಯ ಖಂಡನೆ

Update: 2022-07-03 16:18 GMT
Photo : Twitter

ಹೊಸದಿಲ್ಲಿ,ಜು.3: ಪ್ರವಾದಿ ಮುಹಮ್ಮದ್‌ರ ಕುರಿತು ನಿಂದನಾತ್ಮಕ ಹೇಳಿಕೆಗಾಗಿ ಬಿಜೆಪಿ ನಾಯಕಿ ನೂಪುರ ಶರ್ಮಾ ಅವರನ್ನು ತೀವ್ರ ತರಾಟೆಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯದ ಪೀಠದ ಸದಸ್ಯರಾಗಿದ್ದ ನ್ಯಾ.ಜೆ.ಬಿ.ಪರ್ಡಿವಾಲಾ ಅವರು,ನ್ಯಾಯಾಧೀಶರ ತೀರ್ಪುಗಳಿಗಾಗಿ ಅವರ ಮೇಲೆ ವೈಯಕ್ತಿಕ ದಾಳಿಗಳನ್ನು ರವಿವಾರ ಕಟುವಾಗಿ ಟೀಕಿಸಿದರು. 

ನ್ಯಾಯಾಧೀಶರ ತೀರ್ಪುಗಳಿಗಾಗಿ ಅವರ ಮೇಲೆ ವೈಯಕ್ತಿಕ ದಾಳಿಗಳು ಅಪಾಯಕಾರಿ ಸನ್ನಿವೇಶಗಳಿಗೆ ಕಾರಣವಾಗುತ್ತವೆಯೆಂದು ಶರ್ಮಾ ತನ್ನ ಹೇಳಿಕೆಗಾಗಿ ಇಡೀ ದೇಶದ ಕ್ಷಮೆಯನ್ನು ಯಾಚಿಸಬೇಕು ಎಂದು ಹೇಳಿದ್ದ ಪೀಠದಲ್ಲಿ ಉಪಸ್ಥಿತರಿದ್ದ ನ್ಯಾ.ಪರ್ಡಿವಾಲಾ ನುಡಿದರು.

ತನ್ನ ವಿರುದ್ಧ ದೇಶಾದ್ಯಂತ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಟ್ಟುಗೂಡಿಸಿ ದಿಲ್ಲಿಗೆ ವರ್ಗಾಯಿಸಬೇಕು ಎಂದು ಕೋರಿ ಶರ್ಮಾ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. ಶರ್ಮಾರ ಅರ್ಜಿಯ ವಿಚಾರಣೆ ಸಂದರ್ಭ ತಮ್ಮ ಮೌಖಿಕ ಟೀಕೆಗಳ ಬಳಿಕ ನ್ಯಾಯಮೂರ್ತಿಗಳಾದ ಪರ್ಡಿವಾಲಾ ಮತ್ತು ಸೂರ್ಯಕಾಂತ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆದಾರರ ದಾಳಿಗಳಿಗೆ ಗುರಿಯಾಗಿದ್ದರು.

ತನಗೆ ಮತ್ತು ತನ್ನ ಕುಟುಂಬಕ್ಕೆ ಭದ್ರತೆಯ ಬೆದರಿಕೆಯಿದೆ ಮತ್ತು ತಮಗೆ ರಕ್ಷಣೆ ಅಗತ್ಯವಿದೆ ಎಂದೂ ಶರ್ಮಾ ತನ್ನ ಅರ್ಜಿಯಲ್ಲಿ ಹೇಳಿದ್ದರು. ಶರ್ಮಾರನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದ ನ್ಯಾಯಾಧೀಶರು, ದೇಶಾದ್ಯಂತ ಭಾವನೆಗಳನ್ನು ಕೆರಳಿಸಿದ್ದಕ್ಕೆ ಅವರನ್ನು ಹೊಣೆಯಾಗಿಸಿದ್ದರು.

ರವಿವಾರ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನ್ಯಾ.ಪರ್ಡಿವಾಲಾ,ತಮ್ಮ ತೀರ್ಪುಗಳಿಗಾಗಿ ನ್ಯಾಯಾಧೀಶರ ಮೇಲಿನ ವೈಯಕ್ತಿಕ ದಾಳಿಗಳು ಅವರು ಕಾನೂನು ನಿಜಕ್ಕೂ ಏನನ್ನು ಹೇಳುತ್ತದೆ ಎನ್ನುವುದನ್ನು ಯೋಚಿಸುವ ಬದಲು ಮಾಧ್ಯಮಗಳು ಏನನ್ನು ಹೇಳುತ್ತವೆ ಎನ್ನುವುದನ್ನು ಯೋಚಿಸಬೇಕಾದ ಅಪಾಯಕಾರಿ ಸನ್ನಿವೇಶಕ್ಕೆ ಕಾರಣವಾಗುತ್ತವೆ. ಇದು ಕಾನೂನಿನ ಆಡಳಿತಕ್ಕೆ ಹಾನಿಯನ್ನುಂಟು ಮಾಡುತ್ತದೆ. 

ನ್ಯಾಯಾಧೀಶರ ತೀರ್ಪುಗಳ ರಚನಾತ್ಮಕ ಮೌಲ್ಯಮಾಪನದ ಬದಲು ಅವರ ವಿರುದ್ಧ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮಗಳು ಪ್ರಾಥಮಿಕವಾಗಿ ಬಳಕೆಯಾಗುತ್ತಿವೆ. ಇದು ನ್ಯಾಯಾಂಗ ಸಂಸ್ಥೆಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಅದರ ಘನತೆಯನ್ನು ತಗ್ಗಿಸುತ್ತದೆ. ತೀರ್ಪುಗಳಿಗೆ ಪರಿಹಾರವು ಸಾಮಾಜಿಕ ಮಾಧ್ಯಮಗಳಲ್ಲಿ ಇರುವುದಿಲ್ಲ, ಅದು ಉನ್ನತ ನ್ಯಾಯಾಲಯಗಳಲ್ಲಿ ದೊರೆಯುತ್ತದೆ. ನ್ಯಾಯಾಧೀಶರೆಂದೂ ತಮ್ಮ ನಾಲಿಗೆಯ ಮೂಲಕ ಮಾತನಾಡುವುದಿಲ್ಲ, ಅವರು ತಮ್ಮ ತೀರ್ಪುಗಳ ಮೂಲಕ ಮಾತನಾಡುತ್ತಾರೆ. ಸಂಪೂರ್ಣ ಪ್ರಬುದ್ಧ ಅಥವಾ ವ್ಯಾಖ್ಯಾನಿತ ಪ್ರಜಾಪ್ರಭುತ್ವ ಎಂದು ವ್ಯಾಖ್ಯಾನಿಸಲಾಗದ ಭಾರತದಲ್ಲಿ ಸಂಪೂರ್ಣ ಕಾನೂನು ಮತ್ತು ಸಾಂವಿಧಾನಿಕ ವಿಷಯಗಳನ್ನು ರಾಜಕೀಯಗೊಳಿಸಲು ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಸಂವಿಧಾನದಡಿ ಕಾನೂನಿನ ಆಡಳಿತವವನ್ನು ಸಂರಕ್ಷಿಸಲು ದೇಶಾದ್ಯಂತ ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಹೇಳಿದ ಅವರು,ಇಂದಿನ ಆಧುನಿಕ ಸಂದರ್ಭದಲ್ಲಿ ಡಿಜಿಟಲ್ ಮಾಧ್ಯಮಗಳಿಂದ ವಿಚಾರಣೆಗಳು ನ್ಯಾಯ ವ್ಯವಸ್ಥೆಯಲ್ಲಿ ಅನಗತ್ಯ ಹಸ್ತಕ್ಷೇಪಗಳಾಗಿವೆ ಮತ್ತು ಹಲವಾರು ಸಲ ಲಕ್ಷಣ ರೇಖೆಯನ್ನು ಅತಿಕ್ರಮಿಸಿವೆ ಎಂದರು.

ಉದಾಹರಣೆಯಾಗಿ ಅಯೋಧ್ಯೆ ಪ್ರಕರಣವನ್ನು ಉಲ್ಲೇಖಿಸಿದ ನ್ಯಾ.ಪರ್ಡಿವಾಲಾ,ಅದು ಭೂಮಿ ಮತ್ತು ಹಕ್ಕಿನ ವಿವಾದವಾಗಿತ್ತು,ಆದರೆ ಅಂತಿಮ ತೀರ್ಪು ಬರುವ ವೇಳೆ ರಾಜಕೀಯ ಬಣ್ಣವನ್ನು ಪಡೆದುಕೊಂಡಿತ್ತು. ನಿಸ್ಸಂಶಯವಾಗಿ ನ್ಯಾಯಾಲಯದಲ್ಲಿ ಬಾಕಿಯಳಿದಿದ್ದ,ಸಾವಿರಾರು ಪುಟಗಳ ಈ ದೇಶದ ಅತ್ಯಂತ ಹಳೆಯ ಸಿವಿಲ್ ಪ್ರಕರಣವನ್ನು ಒಂದಲ್ಲೊಂದು ದಿನ ಅಥವಾ ಇತರ ಯಾವುದೇ ನ್ಯಾಯಾಧೀಶರು ನಿರ್ಧರಿಸಬೇಕಾಗುತ್ತದೆ ಎನ್ನುವುದನ್ನು ಅನುಕೂಲಕರವಾಗಿ ಮರೆಯಲಾಗಿತ್ತು. ಇಲ್ಲಿಯೇ ಸಾಂವಿಧಾನಿಕ ನ್ಯಾಯಾಲಯದ ಎದುರಿನ ಯಾವುದೇ ನ್ಯಾಯಾಂಗ ಕಲಾಪಗಳ ಪ್ರಾಮುಖ್ಯತೆಯೇ ಮರೆಯಾಗುತ್ತದೆ ಮತ್ತು ವಿವಾದವನ್ನು ನಿರ್ಧರಿಸುವ ನ್ಯಾಯಾಧೀಶರು ಕೊಂಚ ಅಳುಕಬಹುದು. ಇದು ಕಾನೂನಿನ ಆಡಳಿತಕ್ಕೆ ವಿರುದ್ಧವಾಗಿದೆ. ಇದು ಕಾನೂನಿನ ಆಡಳಿತಕ್ಕೆ ಆರೋಗ್ಯಕರವಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News