ಪಕ್ಷಾಂತರ ನಿಷೇಧ ಕಾಯ್ದೆ: ನ್ಯಾಯ ವ್ಯವಸ್ಥೆಯ ದ್ವಂದ್ವ

Update: 2022-07-04 05:18 GMT

ನ್ಯಾಯಾಲಯಗಳು ಪಕ್ಷಾಂತರ ವಿರೋಧಿ ಕಾನೂನನ್ನು ಅದುಮಿಡುವಾಗ, ಬಿಜೆಪಿಯು ಕೇಂದ್ರ ಸರಕಾರವಾಗಿ ತಾನು ಹೊಂದಿರುವ ಅಧಿಕಾರಗಳನ್ನು ದುರ್ಬಳಕೆ ಮಾಡಿಕೊಂಡು ರಾಜ್ಯಗಳಲ್ಲಿರುವ ಪ್ರತಿಪಕ್ಷಗಳನ್ನು ದುರ್ಬಲಗೊಳಿಸುತ್ತದೆ ಹಾಗೂ ಇಂಥ ಕುಟಿಲ ವಿಧಾನಗಳ ಮೂಲಕ ಚುನಾವಣೆಯಲ್ಲಿ ತಾನು ಸೋತ ರಾಜ್ಯಗಳಲ್ಲಿ ಅಧಿಕಾರವನ್ನು ಕಬಳಿಸುತ್ತದೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡುವು ದರೊಂದಿಗೆ ಗುರುವಾರ ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಸರಕಾರ ಪತನಗೊಂಡಿತು. ಅವರ ಪಕ್ಷ ಶಿವಸೇನೆಯ ಹೆಚ್ಚಿನ ಸಂಖ್ಯೆಯ ಶಾಸಕರು ಬಂಡಾಯದ ಬಾವುಟವನ್ನು ಹಾರಿಸಿದ ಬಳಿಕ ಈ ಬೆಳವಣಿಗೆ ಸಂಭವಿಸಿತು.

ಭಾರತೀಯ ರಾಜಕಾರಣದಲ್ಲಿ ಪಕ್ಷಾಂತರವು ಹೊಸ ವಿಷಯ ವೇನೂ ಅಲ್ಲ. ಹಾಗಾಗಿ, 1985ರಲ್ಲಿ ರಾಜೀವ್ ಗಾಂಧಿ ಸರಕಾರವು ಪಕ್ಷಾಂತರಗಳನ್ನು ತಡೆಯಲು ಸಂವಿಧಾನ ತಿದ್ದುಪಡಿಯೊಂದನ್ನು ತಂದಿತು. ಆ ತಿದ್ದುಪಡಿಯು, ಸದನದಲ್ಲಿ ನಡೆಯುವ ಶಾಸಕರ ಮತದಾನದ ಮೇಲೆ ನಿಯಂತ್ರಣ ಹೊಂದಲು ಪಕ್ಷದ ಹೈಕಮಾಂಡ್‌ಗೆ ಅವಕಾಶ ನೀಡಿತು. ಭಾರತೀಯ ಮತದಾರರು ಪ್ರಮುಖವಾಗಿ ಪಕ್ಷ ನೋಡಿ ಮತ ಚಲಾಯಿಸುತ್ತಾರೆಯೇ ಹೊರತು ಅಭ್ಯರ್ಥಿಗಳನ್ನು ನೋಡಿ ಅಲ್ಲ; ಹಾಗಾಗಿ, ಶಾಸಕಾಂಗದಲ್ಲಿ ಶಾಸಕರು ಹೇಗೆ ಮತ ಚಲಾಯಿಸುತ್ತಾರೆ ಎನ್ನುವುದನ್ನು ನಿರ್ಧರಿಸಬೇಕಾಗಿರುವುದು ಪಕ್ಷ ಎನ್ನುವುದು ಆ ಸಂವಿಧಾನ ತಿದ್ದುಪಡಿಯ ಹಿಂದಿನ ತರ್ಕವಾಗಿತ್ತು.

ಈ ಪ್ರಕರಣದಲ್ಲಿ, ಮಹಾ ವಿಕಾಸ ಅಘಾಡಿಯು ತನ್ನನ್ನು ಉಳಿಸಿ ಕೊಳ್ಳುವುದಕ್ಕಾಗಿ ಈ ಕಾನೂನನ್ನು ಬಳಸಲು ಮುಂದಾಯಿತು. ಆದರೆ, ಅದನ್ನು ಅಚ್ಚರಿಯೆಂಬಂತೆ ಸುಪ್ರೀಂ ಕೋರ್ಟ್ ವಿಫಲಗೊಳಿಸಿತು.

ಸ್ಪೀಕರ್ ಕೈಗಳನ್ನು ಕಟ್ಟಿಹಾಕಲಾಯಿತು

ಜೂನ್ 25ರಂದು, ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ 16 ಬಂಡುಕೋರ ಶಾಸಕರಿಗೆ ಅನರ್ಹತೆ ನೋಟಿಸ್‌ಗಳನ್ನು ನೀಡಿದರು (ಸ್ಪೀಕರ್ 2019ರಲ್ಲೇ ರಾಜೀನಾಮೆ ನೀಡಿದ್ದಾರೆ ಹಾಗೂ ಅವರ ಸ್ಥಾನಕ್ಕೆ ಬಳಿಕ ಯಾರನ್ನು ಆರಿಸಲಾಗಿಲ್ಲ). ಜೂನ್ 27ರಂದು ಸಂಜೆ 5:30ರ ಒಳಗೆ ನೋಟಿಸ್‌ಗಳಿಗೆ ಉತ್ತರ ನೀಡಬೇಕು ಎಂಬುದಾಗಿ ಬಂಡುಕೋರ ಶಾಸಕರಿಗೆ ಸೂಚಿಸಲಾಗಿತ್ತು. ಈ ಶಾಸಕರು ತಾಂತ್ರಿಕವಾಗಿ ಇನ್ನು ಪಕ್ಷಾಂತರ ಮಾಡಿಲ್ಲವಾದರೂ (ಅಂದರೆ, ಪಕ್ಷದ ಸೂಚನೆಗಳಿಗೆ ವಿರುದ್ಧವಾಗಿ ಮತ ಹಾಕಿಲ್ಲ), ಪಕ್ಷಾಂತರ ನಿಷೇಧ ಕಾನೂನಿನ ಪ್ರಕಾರ, ಶಾಸಕಾಂಗದ ಹೊರಗಿನ ಪಕ್ಷ ವಿರೋಧಿ ಚಟುವಟಿಕೆಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬಹುದಾಗಿದೆ.

ಬಂಡುಕೋರ ಶಾಸಕರು ಸುಪ್ರೀಂ ಕೋರ್ಟ್‌ಗೆ ಧಾವಿಸಿದರು. ನ್ಯಾಯಾಲಯವು ಅಸಹಜ ನಿರ್ಧಾರವೊಂದನ್ನು ತೆಗೆದುಕೊಂಡಿತು. ಉಪ ಸ್ಪೀಕರ್ ನೀಡಿದ ನೋಟಿಸ್‌ಗಳಿಗೆ ಉತ್ತರಿಸುವ ಅವಧಿಯನ್ನು ಅದು 15 ದಿನಗಳಷ್ಟು, ಅಂದರೆ ಜುಲೈ 12ರವರೆಗೆ ವಿಸ್ತರಿಸಿತು. ಅದೇ ವೇಳೆ, ಸುಪ್ರೀಂ ಕೋರ್ಟ್‌ನ ಈ ನಿರ್ಧಾರವು ಅದೇ ನ್ಯಾಯಾಲಯದ 1992ರ ತೀರ್ಪನ್ನು ಉಲ್ಲಂಘಿಸಿತು. ಪಕ್ಷಾಂತರ ಪ್ರಕರಣಗಳಲ್ಲಿ, ಸ್ಪೀಕರ್/ಚೇರ್‌ಮನ್ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಮುನ್ನವೇ ನ್ಯಾಯಾಲಯಗಳು ಮಧ್ಯಪ್ರವೇಶಿಸುವಂತಿಲ್ಲ ಎಂಬು ದಾಗಿ 1992ರಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.

ಎರಡು ದಿನಗಳ ಬಳಿಕ, ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸುವಂತೆ ರಾಜ್ಯಪಾಲರು ಸರಕಾರಕ್ಕೆ ಸೂಚಿಸಿದರು. ಇದನ್ನು ಪ್ರಶ್ನಿಸಿ ಶಿವಸೇನೆಯು ಸುಪ್ರೀಂ ಕೋರ್ಟ್‌ಗೆ ಹೋಯಿತು. ‘‘ಪಕ್ಷಾಂತರ ವಿಷಯ ಇತ್ಯರ್ಥವಾಗದೆ ಸದನದಲ್ಲಿ ಬಲಾಬಲ ಪರೀಕ್ಷೆ ನಡೆಯುವುದು ಸಾಧ್ಯವಿಲ್ಲ. ಯಾಕೆಂದರೆ, ಪಕ್ಷಾಂತರ ನಿಷೇಧ ಕಾಯ್ದೆ ಯನ್ವಯ, ಬಂಡುಕೋರ ಶಾಸಕರು ಜನರ ಇಚ್ಛೆಯನ್ನು ಪ್ರತಿನಿಧಿಸಲು ಸಾಧ್ಯವಿಲ್ಲ’’ ಎಂಬುದಾಗಿ ಅದು ವಾದಿಸಿತು.

ಆದರೆ, ಸುಪ್ರೀಂ ಕೋರ್ಟ್ ಈ ವಾದವನ್ನು ನಿರ್ಲಕ್ಷಿಸಿತು. ಬಲಾಬಲ ಪರೀಕ್ಷೆಗೆ ಅದು ಹಸಿರು ನಿಶಾನೆ ನೀಡಿತು ಹಾಗೂ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದರು. ವಾಸ್ತವಿಕವಾಗಿ, ಸುಪ್ರೀಂ ಕೋರ್ಟ್, ಸ್ಪೀಕರ್‌ರ ಪಕ್ಷಾಂತರ ಸಂಬಂಧಿ ಕಲಾಪಗಳನ್ನು ನಿಲ್ಲಿಸುವ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು ಮತ್ತು ಸದನಲ್ಲಿ ಬಲಾಬಲ ಪರೀಕ್ಷೆಗೆ 
ಅವಕಾಶ ನೀಡಿತು. ಅದರ ಪರಿಣಾಮವೇನೆಂದರೆ, ಬಂಡುಕೋರ ಶಾಸಕರಿಗಾಗಿ ಗಡಿಯಾರದ ಮುಳ್ಳುಗಳು 1985ಕ್ಕಿಂತ ಹಿಂದಿನ ದಿನಗಳಿಗೆ ಹೋದವು ಹಾಗೂ ಪಕ್ಷಾಂತರ ಮಾಡಲು ಮತ್ತು ತಮ್ಮದೇ ಪಕ್ಷದ ವಿರುದ್ಧ ಮತ ಹಾಕಲು ಅವರು ಸ್ವತಂತ್ರರಾದರು.

ಸ್ಪೀಕರ್ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮೊದಲೇ ಅವರ ಕೆಲಸದಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಿದ್ದು ಇದು ಮೊದಲನೆಯದೇನೂ ಅಲ್ಲ. 2020ರಲ್ಲಿ ರಾಜಸ್ಥಾನದ ಕಾಂಗ್ರೆಸ್ ಸರಕಾರ ಪತನದಂಚಿನಲ್ಲಿತ್ತು. ಆಗಲೂ, ಕಾಂಗ್ರೆಸ್ ಬಂಡುಕೋರರಿಗೆ ಹೆಚ್ಚು ಸಮಯಾವಕಾಶ ನೀಡುವ ಮೂಲಕ ಸುಪ್ರೀಂ ಕೋರ್ಟ್ ಸ್ಪೀಕರ್‌ರ ಪಕ್ಷಾಂತರ ಸಂಬಂಧಿ ಕಲಾಪಗಳನ್ನು ವಿಳಂಬಿಸಿತ್ತು.

ಸ್ಪೀಕರ್‌ರ ಪಕ್ಷಾಂತರ ಸಂಬಂಧಿ ಕಲಾಪಗಳನ್ನು ವಿಳಂಬಿಸುವುದು, ಪಕ್ಷಾಂತರ ನಿಷೇಧ ಕಾನೂನನ್ನು ಅದುಮಿಡಲು ಸುಪ್ರೀಂ ಕೋರ್ಟ್ ಕಂಡುಕೊಂಡ ಏಕೈಕ ತಂತ್ರವೇನೂ ಅಲ್ಲ. 2016ರಲ್ಲಿ, ಸ್ಪೀಕರ್‌ರನ್ನು ವಜಾಗೊಳಿಸಬೇಕೆಂಬ ನಿರ್ಣಯ ಮಂಡನೆಯಾಗಿದ್ದರೆ, ಬಂಡು ಕೋರ ಶಾಸಕರನ್ನು ಅನರ್ಹಗೊಳಿಸುವ ಕಲಾಪವನ್ನು ಸ್ಪೀಕರ್ ಕೈಗೆತ್ತಿಕೊಳ್ಳುವಂತಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಹೇಳಿತು. ನ್ಯಾಯಾಲಯದ ಈ ತೀರ್ಪಿನ ಅರ್ಥವೆಂದರೆ, ಎಲ್ಲಾ ಬಂಡುಕೋರ ಶಾಸಕರು ಪಕ್ಷಾಂತರ ನಿಷೇಧ ಕಾನೂನಿನ ಕುಣಿಕೆಯಿಂದ ತಪ್ಪಿಸಿ ಕೊಳ್ಳಲು ಸ್ಪೀಕರ್‌ರನ್ನು ವಜಾಗೊಳಿಸಬೇಕೆಂಬ ನೋಟಿಸ್‌ಗಳನ್ನು ನೀಡಬೇಕು.

ಅಂದಿನಿಂದ, ಪಕ್ಷಾಂತರ ನಿಷೇಧ ಕಾನೂನಿಗೆ ಸಂಬಂಧಿಸಿದ ಪ್ರತೀ ಪ್ರಕರಣದಲ್ಲಿ ಇದು ಸ್ಥಾಪಿತ ಕಾರ್ಯವಿಧಾನವಾಗಿದೆ. ಹಾಲಿ ಪ್ರಕರಣ ದಲ್ಲೂ ಅಷ್ಟೇ. ಉಪ ಸ್ಪೀಕರ್‌ರನ್ನು ವಜಾಗೊಳಿಸಬೇಕೆಂದು ಕೋರಿ ಬಂಡಾಯ ಶಿವಸೇನೆ ಶಾಸಕರು ನೋಟಿಸ್‌ಗಳನ್ನು ಕಳುಹಿಸಿದರು.
ಮೂರನೇ ತಂತ್ರವನ್ನು 2019ರಲ್ಲಿ ಪರಿಚಯಿಸಲಾಯಿತು. ಸ್ಪೀಕರ್‌ಗೆ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದ ಶಾಸಕರು ವಿಧಾಸಭೆಗೆ ಹಾಜರಾಗಬೇಕೆಂದು ಪಕ್ಷವು ಅವರನ್ನು ಸಚೇತಕಾಜ್ಞೆ (ವಿಪ್)ಯ ಮೂಲಕ ಬಲವಂತಪಡಿಸುವಂತಿಲ್ಲ. ಕರ್ನಾಟಕದಲ್ಲಿ 15 ಶಾಸಕರು (12 ಕಾಂಗ್ರೆಸ್ ಮತ್ತು ಮೂವರು ಜಾತ್ಯತೀತ ಜನತಾ ದಳ) ಪಕ್ಷಾಂತರ ನಿಷೇಧ ಕಾನೂನನ್ನು ನಿವಾರಿಸಿಕೊಳ್ಳುವುದಕ್ಕಾಗಿ ರಾಜೀನಾಮೆ ನೀಡಲು ಪ್ರಯತ್ನಿಸಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪನ್ನು ನೀಡಿದೆ.

ಈ ಕುಟಿಲ ನಾಟಕದ ತಾತ್ಪರ್ಯವಿಷ್ಟು

ಶಾಸಕರು ರಾಜೀನಾಮೆಗಳನ್ನು ನೀಡಿದರೆ ಪಕ್ಷಾಂತರ ನಿಷೇಧ ಕಾನೂನಿಗೆ ಒಳಪಡುವುದಿಲ್ಲ. ಅದು ಸದನದ ಒಟ್ಟು ಬಲವನ್ನು ತಗ್ಗಿಸುತ್ತದೆ. ಆಗ ಬಿಜೆಪಿಗೆ ಸರಳ ಬಹುಮತವನ್ನು ಪಡೆದು ಅಸ್ತಿತ್ವದಲ್ಲಿದ್ದ ಸರಕಾರವನ್ನು ಉರುಳಿಸಲು ಸಾಧ್ಯವಾಗುತ್ತದೆ. ಬಂಡುಕೋರ ಶಾಸಕರ ರಾಜೀನಾಮೆಗಳ ಕುರಿತು ನಿರ್ಧಾರ ತೆಗೆದು ಕೊಳ್ಳುವುದನ್ನು ವಿಳಂಬಿಸುವ ಮೂಲಕ ಬಂಡಾಯವನ್ನು ಹತ್ತಿಕ್ಕಲು ಸ್ಪೀಕರ್ ಪ್ರಯತ್ನಿಸಿದಾಗ, ಸುಪ್ರೀಂ ಕೋರ್ಟ್ ಮೇಲಿನ ತೀರ್ಪನ್ನು ನೀಡಿತು. ಆಗ ಸ್ಪೀಕರ್ ಅಸಹಾಯಕ ರಾದರು. ಕೆಲವು ದಿನಗಳ ಬಳಿಕ ಕರ್ನಾಟಕ ಸರಕಾರವನ್ನು ಉರುಳಿಸಲಾಯಿತು. ಬಂಡುಕೋರ ಶಾಸಕರು ಸುಪ್ರೀಂ ಕೋರ್ಟ್‌ನ ಅನುಮೋದನೆಯೊಂದಿಗೆ ಪಕ್ಷದ ಸಚೇತಕಾಜ್ಞೆ ಯನ್ನು ಯಶಸ್ವಿಯಾಗಿ ಉಲ್ಲಂಘಿಸಿ ಸದನದಿಂದ ದೂರವುಳಿದರು.

ಈ ಮೇಲಿನ ಎಲ್ಲಾ ಘಟನೆಗಳಲ್ಲಿ ಗಮನಿಸಬೇಕಾದ ಮಹತ್ವದ ಅಂಶವೆಂದರೆ, ಸುಪ್ರೀಂ ಕೋರ್ಟ್‌ನ ತೀರ್ಪುಗಳು ಪ್ರತಿಪಕ್ಷಗಳಿಗೆ ಮಾರಕವಾಗಿದ್ದವು. ಪ್ರತಿಪಕ್ಷಗಳ ಅತೃಪ್ತ ಶಾಸಕರು ತಮ್ಮ ಪಕ್ಷಗಳ ಹೈಕಮಾಂಡ್ ವಿರುದ್ಧ ಬಂಡೇಳುವುದನ್ನು ಸುಪ್ರೀಂ ಕೋರ್ಟ್ ಸುಲಭಗೊಳಿಸಿತು.

ಸ್ಪೀಕರ್‌ಗಳೂ ಕಾರಣರು

ಸುಪ್ರೀಂ ಕೋರ್ಟ್ ಪಕ್ಷಾಂತರ ನಿಷೇಧ ಕಾಯ್ದೆಯನ್ನು ದುರ್ಬಲ ಗೊಳಿಸಿದ ಏಕೈಕ ಸಂಸ್ಥೆಯೇನಲ್ಲ. ಅದನ್ನು ದುರ್ಬಲಗೊಳಿಸಿದ ಪ್ರಧಾನ ಆರೋಪ ಸ್ಪೀಕರ್‌ಗಳ ಮೇಲೆಯೇ ಇದೆ. ಪಕ್ಷಾಂತರ ನಿಷೇಧ ಕಾಯ್ದೆಯು, ಪಕ್ಷಾಂತರಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಸ್ಪೀಕರ್‌ಗೆ ನೀಡಿದೆ. ಅವರು ಈ ಅಧಿಕಾರವನ್ನು ಏಕಪಕ್ಷೀಯವಾಗಿ ವರ್ತಿಸುವ ಮೂಲಕ ದುರುಪಯೋಗಪಡಿಸಿಕೊಂಡಿದ್ದಾರೆ. ಅವರು ತಮ್ಮನ್ನು ಸದನಕ್ಕೆ ಉತ್ತರದಾಯಿಯ ನ್ನಾಗಿಸದೆ, ಪಕ್ಷಕ್ಕೆ ಉತ್ತರ ದಾಯಿಯಾಗಿಸಿದ್ದಾರೆ.

ಶಾಸಕರು ಭಾರತದ ಆಡಳಿತಾರೂಢ ಪಕ್ಷಕ್ಕೆ ಪಕ್ಷಾಂತರವಾಗು ವುದಾದರೆ, ಸ್ಪೀಕರ್‌ಗಳು ಹೆಚ್ಚಿನ ಸಂದರ್ಭಗಳಲ್ಲಿ ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ. ಅದಕ್ಕಾಗಿ ಅವರು ಪಕ್ಷಾಂತರ ನಿಷೇಧ ಕಾಯ್ದೆ ಯಲ್ಲಿರುವ ಯಾವುದಾದರೂ ನ್ಯೂನತೆಗಳನ್ನು ಹೆಕ್ಕಿಕೊಳ್ಳುತ್ತಾರೆ. ಪ್ರಕರಣವೊಂದರಲ್ಲಿ ಸ್ಪೀಕರ್ ಯಾವಾಗ ನಿರ್ಧಾರವನ್ನು ತೆಗೆದುಕೊಳ್ಳ ಬೇಕೆಂದು ಈ ಕಾನೂನು ಹೇಳುವುದಿಲ್ಲ. ಇದಕ್ಕೆ ವಿರುದ್ಧವಾಗಿ, ಶಾಸಕರು ಆಡಳಿತಾರೂಢ ಪಕ್ಷದಿಂದ ಪಕ್ಷಾಂತರಗೊಂಡರೆ, ಸ್ಪೀಕರ್‌ಗಳು ಮಿಂಚಿನ ವೇಗದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಇದು ಹಾಲಿ ಮಹಾರಾಷ್ಟ್ರ ಪ್ರಕರಣದಲ್ಲೂ ಸಾಬೀತಾಗಿದೆ.

ಸ್ಪೀಕರ್‌ಗಳ ಈ ಪ್ರವೃತ್ತಿಯನ್ನು ತಡೆಯಲು ಸುಪ್ರೀಂ ಕೋರ್ಟ್ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ವಿಪರ್ಯಾಸವೆಂದರೆ, ಸ್ವತಃ ಸುಪ್ರೀಂ ಕೋರ್ಟ್ ತನ್ನದೇ ವಿಧಾನದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಯನ್ನು ದುರ್ಬಲಗೊಳಿಸಿದೆ.

ದುರ್ಬಲಗೊಳ್ಳುತ್ತಿರುವ ಒಕ್ಕೂಟ ವ್ಯವಸ್ಥೆ

ರಾಷ್ಟ್ರ ರಾಜಕೀಯದಲ್ಲಿ ತನ್ನ ಪ್ರಾಬಲ್ಯದ ಕೊನೆಯ ಹಂತದಲ್ಲಿ ಕಾಂಗ್ರೆಸ್ ಪಕ್ಷವು ಪಕ್ಷಾಂತರ ನಿಷೇಧ ಕಾನೂನನ್ನು ಜಾರಿಗೊಳಿಸಿತು. ಈ ಕಾಯ್ದೆ ಜಾರಿಯಾದ ಕೇವಲ ನಾಲ್ಕು ವರ್ಷಗಳ ಬಳಿಕ ಮೈತ್ರಿ ಸರಕಾರಗಳ ಯುಗ ಆರಂಭವಾಯಿತು. ಕ್ಷೀಣಿಸುತ್ತಿದ್ದ ಕಾಂಗ್ರೆಸ್, ಈ ಕಾಯ್ದೆಯ ಮೂಲಕ ತನ್ನ ಪ್ರಾಬಲ್ಯವನ್ನು ಕೃತಕವಾಗಿ ವಿಸ್ತರಿಸಲು ಪ್ರಯತ್ನಿಸಿತು. ತನ್ನ ಶಾಸಕರು ಮತ್ತು ಸಂಸದರು ಪ್ರಬಲಗೊಳ್ಳುತ್ತಿರುವ ಎದುರಾಳಿಗಳ ಬಣಕ್ಕೆ ಹೋಗದಂತೆ ತಡೆಯಲು ಅದು ಈ ಕ್ರಮವನ್ನು ತೆಗೆದುಕೊಂಡಿತು.

ಇಂದು ಪರಿಸ್ಥಿತಿ ವ್ಯತಿರಿಕ್ತವಾಗಿದೆ. ರಾಷ್ಟ್ರ ರಾಜಕಾರಣದ ಕೇಂದ್ರ ಸ್ಥಾನದಲ್ಲಿ ಬಿಜೆಪಿಯಿದೆ. ಅದು ಸಾಕಷ್ಟು ಪ್ರಭಾವ, ಹಣ ಮತ್ತು ಸೈದ್ಧಾಂತಿಕ ನೆಲೆಯನ್ನು ಹೊಂದಿದೆ. ಅದಕ್ಕೆ ತನ್ನ ಶಾಸಕರನ್ನು ಹಿಡಿತ ದಲ್ಲಿಟ್ಟುಕೊಳ್ಳಲು ಕಾನೂನಿನ ಅಗತ್ಯವಿಲ್ಲ. ಬದಲಿಗೆ, ಪಕ್ಷಾಂತರ ನಿಷೇಧ ಕಾನೂನಿನ ಅನುಪಸ್ಥಿತಿಯಿಂದ ಅದಕ್ಕೆ ಅಗಾಧ ಲಾಭವಿದೆ. ಹಣದ ಆಮಿಷದಿಂದ ಹಿಡಿದು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಛೂ ಬಿಡುವವರೆಗಿನ ರಾಜಕೀಯದ ಎಲ್ಲಾ ಅಸ್ತ್ರಗಳನ್ನು ಬಳಸಿ ಪ್ರತಿಪಕ್ಷ ನಾಯಕರನ್ನು ಅದು ತನ್ನತ್ತ ಸೆಳೆದುಕೊಳ್ಳಬಹುದಾಗಿದೆ. ಮೇಲಿನ ಎಲ್ಲಾ ಉದಾಹರಣೆಗಳು ಇದನ್ನೇ ಸಾಬೀತುಪಡಿಸುತ್ತಿವೆ.

ನ್ಯಾಯಾಲಯಗಳು ಪಕ್ಷಾಂತರ ವಿರೋಧಿ ಕಾನೂನನ್ನು ಅದುಮಿಡುವಾಗ, ಬಿಜೆಪಿಯು ಕೇಂದ್ರ ಸರಕಾರವಾಗಿ ತಾನು ಹೊಂದಿರುವ ಅಧಿಕಾರಗಳನ್ನು ದುರ್ಬಳಕೆ ಮಾಡಿಕೊಂಡು ರಾಜ್ಯಗಳಲ್ಲಿರುವ ಪ್ರತಿಪಕ್ಷಗಳನ್ನು ದುರ್ಬಲಗೊಳಿಸುತ್ತದೆ ಹಾಗೂ ಇಂಥ ಕುಟಿಲ ವಿಧಾನಗಳ ಮೂಲಕ ಚುನಾವಣೆಯಲ್ಲಿ ತಾನು ಸೋತ ರಾಜ್ಯಗಳಲ್ಲಿ ಅಧಿಕಾರವನ್ನು ಕಬಳಿಸುತ್ತದೆ.

ಕೃಪೆ: Scroll.in

Writer - ಶುಐಬ್ ದಾನಿಯಾಲ್

contributor

Editor - ಶುಐಬ್ ದಾನಿಯಾಲ್

contributor

Similar News