ಮಧ್ಯಪ್ರದೇಶ: ಸರಕಾರಿ ಕಲ್ಯಾಣ ಯೋಜನೆಯಲ್ಲಿ ಪಡೆದ ಜಮೀನು ಅತಿಕ್ರಮಿಸಿ ಬುಡಕಟ್ಟು ಮಹಿಳೆಗೆ ಬೆಂಕಿ ಹಚ್ಚಿದ ಗುಂಪು

Update: 2022-07-04 18:20 GMT

ಭೋಪಾಲ, ಜು. 4:  38ರ ಹರೆಯದ ಬುಡಕಟ್ಟು ಮಹಿಳೆಯೋರ್ವರಿಗೆ  ಗುಂಪೊಂದು ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದಲ್ಲಿ ಸೋಮವಾರ ನಡೆದಿದೆ. ಮಧ್ಯಪ್ರದೇಶ ಸರಕಾರ ಮಹಿಳೆಯ ಕುಟುಂಬಕ್ಕೆ ನೀಡಿದ ಭೂಮಿಯನ್ನು ಅತಿಕ್ರಮಣ ಮಾಡಿದ ಬಳಿಕ ಗುಂಪು ಈ ಕೃತ್ಯ ಎಸಗಿದೆ. 

ಹೊಲದಲ್ಲಿ ಮಹಿಳೆಗೆ ಬೆಂಕಿ ಹಚ್ಚಿದ ಬಳಿಕ ಮೂವರು ವೀಡಿಯೊ ಚಿತ್ರೀಕರಣ ಮಾಡಿದ್ದಾರೆ. ಅಲ್ಲದೆ, ಆ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ ಎಂದು ಮಹಿಳೆಯ ಪತಿ ಪೊಲೀಸರಿಗೆ ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಬುಡಕಟ್ಟು ಮಹಿಳೆಯನ್ನು ಗುನಾ ಜಿಲ್ಲೆಯ ರಾಮ್‌ಪ್ಯಾರಿ ಸಹರಿಯಾದಲ್ಲಿರುವ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಹೊಲದಲ್ಲಿ ಶನಿವಾರ ಸುಟ್ಟ ಗಾಯಗಳಿಂದ ನರಳುತ್ತಿರುವ ಪತ್ನಿ ಕಂಡು ಬಂದಿದ್ದಳು ಎಂದು ಮಹಿಳೆಯ ಪತಿ ಅರ್ಜುನ್ ಸಹರಿಯ ಅವರು ತಿಳಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಪಂಕಜ್ ಶ್ರೀವಾತ್ಸವ ಹೇಳಿದ್ದಾರೆ.  

ಮಧ್ಯಪ್ರದೇಶ ಸರಕಾರ ಕೆಲವು ವರ್ಷಗಳ ಹಿಂದೆ ಕಲ್ಯಾಣ ಯೋಜನೆ ಅಡಿಯಲ್ಲಿ ತನ್ನ ಕುಟುಂಬಕ್ಕೆ ನೀಡಿದ್ದ 6 ಬಿಘಾ ಭೂಮಿಯಲ್ಲಿ ಉಳುಮೆ ಮಾಡುವ ಕುರಿತಂತೆ ಒಬಿಸಿ ಸಮುದಾಯಕ್ಕೆ ಸೇರಿದ ಮೂವರು ವ್ಯಕ್ತಿಗಳು ತನಗೆ ಬೆಂಕಿ ಹಚ್ಚಿರುವುದಾಗಿ ಮಹಿಳೆ ತನ್ನ ಪತಿಗೆ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. 

ಅರ್ಜುನ್ ಸಹರಿಯ ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಹಾಗೂ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ  ಪಂಕಜ್ ಶ್ರೀವಾತ್ಸವ್ ತಿಳಿಸಿದ್ದಾರೆ. 

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ‘‘ರಾಷ್ಟ್ರಪತಿ ಚುನಾವಣೆಗೆ ತನ್ನ ಪಕ್ಷದ ಅಭ್ಯರ್ಥಿಯನ್ನಾಗಿ ದ್ರೌಪದಿ ಮುರ್ಮು ಅವರನ್ನು ಕಣಕ್ಕಿಳಿಸುವ ಬಿಜೆಪಿ ಬುಡಕಟ್ಟು ಮಹಿಳೆಯ ಮೇಲೆ ಇಂತಹ ಹಿಂಸಾತ್ಮಕ ದೌರ್ಜನ್ಯಕ್ಕೆ ಅವಕಾಶ ನೀಡುವುದು ಅವಮಾನಕರ’’ ಎಂದು ಟ್ವೀಟ್ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News