ಮಂಗಳೂರು | ಸ್ಮಾರ್ಟ್ ಸಿಟಿ ಕಾಮಗಾರಿ ಅವಾಂತರ: ಜನರ ತೆರಿಗೆ ದುಡ್ಡಿನಲ್ಲಿ ಪ್ರಯೋಗಗಳ ಸರಮಾಲೆ!

Update: 2022-07-04 10:14 GMT

ಮಂಗಳೂರು, ಜು.4: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಹೊಸ ಹೊಸ ಅವಾಂತರಗಳನ್ನು ಸೃಷ್ಟಿಸುತ್ತಿದೆ. ಜನರ ತೆರಿಗೆ ದುಡ್ಡಿನಲ್ಲಿ ಅಧಿಕಾರಿಗಳು ಯಾವುದೇ ಪೂರ್ವಾಲೋಚನೆ, ಸೂಕ್ತ ತಯಾರಿ ಇಲ್ಲದೆ ಕಾಮಗಾರಿಗಳನ್ನು ನಡೆಸುವುದು ಮತ್ತೆ ತೆರವುಗೊಳಿಸುವ ಕಾರ್ಯ ಅವ್ಯಾಹತವಾಗುತ್ತಿದೆ.

ಪಿವಿಎಸ್ ಬಳಿ ರೇಲಿಂಗ್‌ನೊಂದಿಗೆ ನಿರ್ಮಿಸಲಾಗಿರುವ ಫುಟ್ಪಾತ್ ಮಧ್ಯದಲ್ಲೇ ವಿದ್ಯುತ್ ಕಂಬವಿದೆ. ಫುಟ್ಪಾತ್ ರಚನೆ ಮಾಡುವಾಗ ಈ ಕಂಬವನ್ನು ಸ್ಥಳಾಂತರ ಮಾಡುವ ಯಾವುದೇ ಗೋಜಿಗೆ ಹೋಗದೆ ಅದನ್ನು ಮಧ್ಯದಲ್ಲಿಯೇ ಇರಿಸಿ ಜನಸಾಮಾನ್ಯರು ನಡೆದಾಡುವ ಫುಟ್ಪಾತನ್ನು ಇಕ್ಕಟ್ಟುಗೊಳಿಸಲಾಗಿದೆ. ಇಂತಹ ಫುಟ್ಪಾತ್‌ನಿಂದ ಯಾರಿಗೆ ಲಾಭ? ಎಂಬ ಮಾತುಗಳು ಜನಸಾಮಾನ್ಯರಿಂದ ವ್ಯಕ್ತವಾಗುತ್ತಿದೆ.

ರವಿವಾರವಷ್ಟೇ ಮಂಗಳೂರಿನ ಹಂಪಕನಟ್ಟೆಯ ಸಿಗ್ನಲ್ ವೃತ್ತದ ಬಳಿ ಝೀಬ್ರಾ ಕ್ರಾಸಿಂಗ್ ನಲ್ಲಿ ನಡೆದು ಬಳಿಕ ಫುಟ್‌ಪಾತ್‌ನಲ್ಲಿ ಹಾಕಲಾದ ರೇಲಿಂಗ್ (ಬ್ಯಾರಿಕೇಡ್) ಜಂಪ್‌ಮಾಡಿ ದಾಡಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಿದ್ದರು. ಈ ಬಗ್ಗೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ, ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೇ ಇಂದು ಆ ರೇಲಿಂಗ್ ನಡುವೆ ಪ್ರವೇಶ ಕಲ್ಪಿಸಲಾಗಿದೆ.

ಕಾಂಕ್ರಿಟ್ ಹಾಕುವುದು - ಅಗೆಯುವುದು!

ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ರಸ್ತೆಗಳು ಕಾಂಕ್ರಿಟೀಕರಣಗೊಂಡಿವೆ. ಒಂದೆಡೆ ಕ್ರಾಂಕಿಟೀಕರಣ ನಡೆಯುತ್ತಿದೆ. ಇನ್ನೊಂದೆಡೆ ಹಾಕಿರುವ ಕಾಂಕ್ರಿಟ್ ಅನ್ನು ರಸ್ತೆಯಡಿ ವಿದ್ಯುತ್ ತಂತಿ, ನೀರು ಸರಬರಾಜು ಪೈಪ್‌ಲೈನ್ ಒಡೆದಿದೆ ಎಂಬೆಲ್ಲಾ ಕಾರಣಕ್ಕೆ ಒಡೆಯುವುದು ಸಾಮಾನ್ಯವಾಗಿಬಿಟ್ಟಿದೆ. ಕಾಮಗಾರಿ ನಡೆಸುವ, ಕಾಂಕ್ರಿಟ್ ಹಾಕುವ ಸಂದರ್ಭ ಅಧಿಕಾರಿಳು, ಇಂಜಿನಿಯರ್‌ಗಳು ಈ ಬಗ್ಗೆ ಪೂರ್ವ ಲೆಕ್ಕಾಚಾರದೊಂದಿಗೆ ಕಾಂಕ್ರಿಟೀಕರಣ ಮಾಡದೆ ಜನರ ತೆರಿಗೆ ದುಡ್ಡನ್ನು ಯಾವ ರೀತಿಯಲ್ಲಿ ದುರ್ಬಳಕೆ ಮಾಡುತ್ತಾರೆ ಎಂಬುದಕ್ಕೆ ಇಂತಹ ಅವೈಜ್ಞಾನಿಕ ವ್ಯವಸ್ಥೆಗಳು ಪದೇಪದೇ ಕಂಡು ಬರುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 ಇದೀಗ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ನಡುವೆ ನಗರದ ತುಂಬೆಲ್ಲಾ ಅಲ್ಲಲ್ಲಿ ರಸ್ತೆ ಅಗೆತ, ಫುಟ್‌ಪಾತ್ ಮೊದಲಾದ ಕಾಮಗಾರಿಗಳಿಂದಾಗಿ ಪ್ರಮುಖ ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆಯ ಒತ್ತಡ. ಇದು ಕೂಡಾ ಧಾರಾಕಾರ ಮಳೆಯ ನಡುವೆ ಮಧ್ಯಾಹ್ನದ ವೇಳೆ ಬಾವುಟಗುಡ್ಡೆಯಿಂದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತ (ಜ್ಯೋತಿ ಸರ್ಕಲ್)ಕ್ಕೆ ಬರುವ ಕಾಂಕ್ರಿಟ್ ರಸ್ತೆಯ ಬಲ ಬದಿಯಲ್ಲಿ ರಸ್ತೆಯನ್ನು ಯಂತ್ರದಲ್ಲಿ ಕತ್ತರಿಸುವುದು ಮಧ್ಯಾಹ್ನದ ವೇಳೆ ಕಂಡುಬಂದಿದೆ. ಅಲ್ಲಿ ಕಾಮಗಾರಿ ನಡೆಸುವವರನ್ನು ಈ ಬಗ್ಗೆ ಪ್ರಶ್ನಿಸಿದರೆ ಅದು ಫುಟ್‌ಪಾತ್‌ಗೆ ತಾಗಿಕೊಂಡ ಹೆಚ್ಚುವರಿ ಕಾಂಕ್ರಿಟ್ ರಸ್ತೆ ಅದನ್ನು ಕತ್ತರಿಸಲಾಗುತ್ತಿದೆ ಎನ್ನುತ್ತಾರೆ.

ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು, ಇಂಜಿನಿಯರ್‌ಗಳು ಯಾವುದೇ ಪೂರ್ವಾಲೋಚನೆ ಇಲ್ಲದೆ ಈ ರೀತಿ ಕಾಂಕ್ರಿಟೀಕರಣ ನಡೆಸಿ ಮತ್ತೆ ಅಗೆಯುವುದಾದರೆ ಇಂತಹ ಯೋಜನೆಗಳು ಯಾಕೆ? ಈ ರೀತಿ ಜನರ ತೆರಿಗೆ ದುಡ್ಡನ್ನು ಪೋಲು ಮಾಡುತ್ತಿರುವುದೇಕೆ ಎಂಬ ಬಗ್ಗೆ ಮನಪಾ ಅಧಿಕಾರಿಗಳು, ಆಡಳಿತವನ್ನು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News