ಎಸಿಬಿ ಕಚೇರಿಗಳು ವಸೂಲಿ ಕೇಂದ್ರ ಎಂದಿದ್ದಕ್ಕೆ ನನಗೆ ವರ್ಗಾವಣೆಯ ಬೆದರಿಕೆ: ನ್ಯಾ.ಎಚ್.ಪಿ.ಸಂದೇಶ್

Update: 2022-07-05 04:54 GMT
ನ್ಯಾ.ಎಚ್.ಪಿ.ಸಂದೇಶ್

ಬೆಂಗಳೂರು, ಜು.4: ಭ್ರಷ್ಟಾಚಾರ ತಡೆಗೆ ರಚಿಸಲಾಗಿರುವ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಕಚೇರಿಗಳು ಕಲೆಕ್ಷನ್ ಸೆಂಟರ್ ಗಳಾಗಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿಗೆ ವರ್ಗಾವಣೆಯ ಬೆದರಿಕೆ ಹಾಕಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾ.ಸಂದೇಶ ಅವರು, ನಾನು ವರ್ಗಾವಣೆ ಸೇರಿ ಎಲ್ಲವನ್ನೂ ಎದುರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. 

ಲಂಚ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್ ಪಿ.ಎಸ್.ಮಹೇಶ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರ ಏಕಸದಸ್ಯ ನ್ಯಾಯಪೀಠ, ನನ್ನ ವರ್ಗಾವಣೆಯ ಬೆದರಿಕೆಯ ಬಗ್ಗೆ ಸಹ ನ್ಯಾಯಮೂರ್ತಿಯೊಬ್ಬರು ನನಗೆ ತಿಳಿಸಿದ್ದಾರೆ. ಜನರ ಒಳಿತಿಗಾಗಿ ಎಲ್ಲದಕ್ಕೂ ಸಿದ್ಧನಿದ್ದೇನೆ. ಜತೆಗೆ ವರ್ಗಾವಣೆ ಮಾಡಿಸುವ ಬೆದರಿಕೆಯನ್ನೂ ಆದೇಶದಲ್ಲಿ ಬರೆಸುತ್ತೇನೆ. ನನಗೆ ಯಾರ ಹೆದರಿಕೆ ಕೂಡ ಇಲ್ಲ, ನ್ಯಾಯಮೂರ್ತಿ ಆದ ಮೇಲೆ ನಾನು ಯಾವ ಆಸ್ತಿಯನ್ನೂ ಮಾಡಿಲ್ಲ. ಈ ಹುದ್ದೆ ಹೋದರೂ ಚಿಂತೆ ಮಾಡುವುದಿಲ್ಲ ಎಂದು ನ್ಯಾ.ಸಂದೇಶ್ ಅವರು ತಿಳಿಸಿದ್ದಾರೆ. 

ನಾನು ರೈತನ ಮಗನಾಗಿ ಹುಟ್ಟಿದ್ದೇನೆ. ಜಮೀನಿನಲ್ಲಿ ಕೆಲಸ ಮಾಡಲೂ ಸಿದ್ಧನಿದ್ದೇನೆ. ನಾನು ಯಾವುದೇ ಪಕ್ಷದ ಹಿಂದೆ ಹೋಗಿಲ್ಲ. ಯಾವುದೇ ಪಕ್ಷದ ಸಿದ್ಧಾಂತಕ್ಕೂ ಬದ್ದನಾಗಿಲ್ಲ. ಭ್ರಷ್ಟಾಚಾರದಲ್ಲಿ ಇಡೀ ರಾಜ್ಯವೇ ಮುಳುಗಿದೆ. ವಿಟಮಿನ್ ಎಂ ಇದ್ದರೆ ಎಲ್ಲರನ್ನೂ ರಕ್ಷಿಸುತ್ತೀರಿ ಎಂದು ಎಸಿಬಿ ವಿರುದ್ಧ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿದೆ.

ರಾಜ್ಯ ಸರಕಾರ ಉನ್ನತ ಅಧಿಕಾರಿಗಳು ಎಂದು ಕರೆಸಿಕೊಳ್ಳುವ ಐಎಎಸ್ ಮತ್ತು ಐಪಿಎಸ್ ಲಾಬಿಯ ಮಾರ್ಗದಲ್ಲಿ ನಡೆಯುತ್ತಿದೆ, ಸರಕಾರ ಕೂಡ ಆರೋಪದ ಭಾಗವಾಗಿದೆ ಎಂದು ಕಿಡಿಕಾರಿದರು. 

ತಮಗೆ ವರ್ಗಾವಣೆ ಬೆದರಿಕೆ ಹಾಕಿದ ಸಹ ನ್ಯಾಯಮೂರ್ತಿಯ ಬಗ್ಗೆ ಮಧ್ಯಾಹ್ನ 2.30ರ ಕಲಾಪದಲ್ಲಿ ಬರೆಯಿಸುತ್ತೇನೆ ಎಂದು ಹೇಳಿದ್ದರು. ಆದರೆ, ಮಧ್ಯಾಹ್ನ ಎಜಿ ಅವರು, ಸರಕಾರ ಯಾರ ರಕ್ಷಣೆಗೂ ನಿಂತಿಲ್ಲ. ನ್ಯಾಯಮೂರ್ತಿಗಳು ಈ ವಿಚಾರದಲ್ಲಿ ಬೇಸರಿಸಿಕೊಳ್ಳಬಾರದು. ಎಸಿಬಿಯ ಎಲ್ಲ ದಾಖಲೆ, ಬಿ ವರದಿಯ ಎಲ್ಲ ಮಾಹಿತಿಯನ್ನೂ ನ್ಯಾಯಪೀಠಕ್ಕೆ ಒದಗಿಸುತ್ತೇವೆ ಎಂದು ಪೀಠಕ್ಕೆ ತಿಳಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, 500 ರೂ.ಗಳಲ್ಲಿ ಜೀವನ ಮಾಡಿಯೂ ಗೊತ್ತು, 5 ಸಾವಿರದಲ್ಲಿ ಜೀವನ ಮಾಡುವುದೂ ನನಗೆ ತಿಳಿದಿದೆ. ಬೆಕ್ಕಿಗೆ ಗಂಟೆ ಕಟ್ಟಲು ಸಿದ್ದನಿದ್ದೇನೆ. ಸದ್ಯ ಭ್ರಷ್ಟಾಚಾರ ಸಮಾಜದಲ್ಲಿ ಕ್ಯಾನ್ಸರ್ ಆಗಿ ಉಲ್ಭಣಿಸಿದೆ ಎಂದು ಹೇಳಿದರು. ಜತೆಗೆ ಬೆಂಗಳೂರು ಡಿಸಿ ಮಂಜುನಾಥ್ ಅವರ ಸೇವೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿ ವಿಚಾರಣೆಯನ್ನು ಜು.7ಕ್ಕೆ ಮುಂದೂಡಿದರು. 

ಆನೇಕಲ್ ವ್ಯಾಪ್ತಿಯ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಅನುಕೂಲಕರ ತೀರ್ಪು ನೀಡಲು ಬೇಗೂರು ನಿವಾಸಿ ಅರ್ಜ ಪಾಷಾ ಎಂಬುವರಿಂದ 5 ಲಕ್ಷ ಲಂಚ ಪಡೆಯಲಾಗಿದೆ ಎಂಬ ಪ್ರಕರಣದಲ್ಲಿ ಅರ್ಜಿದಾರ ಮಹೇಶ್ ಆರೋಪಿಯಾಗಿದ್ದು, ಅವರನ್ನು ಎಸಿಬಿ ಬಂಧಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News